ಮನೋಜ ವಿ ಕಟಗೇರಿ ವಿಜಯಪುರ: ಶಾಲೆ-ಕಾಲೇಜ್ ವಿದ್ಯಾರ್ಥಿನಿಯರು ಋುತುಚಕ್ರದ ಸಮಯದಲ್ಲಿ ದೈಹಿಕ ಆರೋಗ್ಯ ಮತ್ತು ಸ್ವಚ್ಛತೆಗಾಗಿ ಸರಕಾರ ಸ್ಯಾನಿಟರಿ ಪ್ಯಾಡ್ ವಿತರಿಸುತ್ತಿತ್ತು. ವಿದ್ಯಾರ್ಥಿನಿಯರಿಗೆ ಇದರಿಂದ ಸಾಕಷ್ಟು ಅನುಕೂಲ ಕೂಡ ಆಗಿತ್ತು. ಆದರೆ ರಾಜ್ಯ ಸರಕಾರ ಕೊರೊನಾ ನೆಪ ಹೇಳಿ 2020ರಿಂದ ಅವುಗಳನ್ನು ವಿತರಣೆ ಮಾಡಿಲ್ಲ. ವಿದ್ಯಾರ್ಥಿನಿಯರ ಆರೋಗ್ಯ, ಆಗುವ ತೊಂದರೆ, ಶಾಲೆ-ಕಾಲೇಜ್‌ನಲ್ಲಿ ಮುಜುಗರ ತಪ್ಪಿಸಲು ಈ ಯೋಜನೆಯನ್ನು ಅಂದಿನ ಸಿದ್ದರಾಮಯ್ಯ ಸರ್ಕಾರ 2015ರಲ್ಲಿ ಜಾರಿಗೆ ತಂದಿತ್ತು. ಕೇಂದ್ರ ಸರಕಾರ 2013ರಲ್ಲಿಯೇ ಇದನ್ನು ಜಾರಿಗೊಳಿಸಿತ್ತು. ಇದರಿಂದ 10ರಿಂದ 21 ವರ್ಷದೊಳಗಿನ ಅಂದಾಜು 17 ಲಕ್ಷ ವಿದ್ಯಾರ್ಥಿನಿಯರು ಸದುಪಯೋಗ ಪಡೆಯುತ್ತಿದ್ದರು. ಹಳ್ಳಿಯಿಂದ ಬರುವ ವಿದ್ಯಾರ್ಥಿನಿಯರಿಗೆ ಬಹಳಷ್ಟು ಅನುಕೂಲ ಆಗಿತ್ತು. ಜತೆಗೆ ಸ್ವಚ್ಛತೆ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಸಹಾಯವಾಗಿತ್ತು. ಆದರೆ 2020ರಿಂದ ಸರಕಾರ ಇದನ್ನು ಬಂದ್ ಮಾಡಿದ್ದು, ವಿದ್ಯಾರ್ಥಿನಿಯರು ಮತ್ತೆ ತೊಂದರೆಗೆ ಸಿಲುಕಿ, ಮುಜುಗರ ಅನುಭವಿಸುವಂತಾಗಿದೆ. ಸರಕಾರ ಮೊದಲು ಶಾಲೆ-ಕಾಲೇಜ್‌ಗಳಿಗೆ ಈ ಶುಚಿ ಪ್ಯಾಡ್‌ಗಳನ್ನು ವಿತರಣೆ ಮಾಡುತ್ತಿತ್ತು. ವಿದ್ಯಾರ್ಥಿನಿಯರು ಶಾಲೆ-ಕಾಲೇಜ್‌ನಲ್ಲಿದ್ದಾಗ ಋುತುಚಕ್ರಕ್ಕೆ ಒಳಗಾದರೆ ಸಂಬಂಧಿಸಿದ ಶಿಕ್ಷಕಿಯರು ಅಥವಾ ಉಪನ್ಯಾಸಕಿಯರನ್ನು ಸಂಪರ್ಕಿಸಿ ಪ್ಯಾಡ್ ಪಡೆದು ತಮ್ಮ ದೈಹಿಕ ಶುಚಿತ್ವ ಕಾಪಾಡಿಕೊಳ್ಳುತ್ತಿದ್ದರು. ಮುಜುಗುರದಿಂದಲೂ ಪಾರಾಗುತ್ತಿದ್ದರು. ಆದರೆ ಸರಕಾರ ಈಗ ಏಕಾಏಕಿ ಈ ಯೋಜನೆ ನಿಲ್ಲಿಸಿದ್ದು, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುವಂತಾಗಿದೆ. ಒಂದು ಮಾಹಿತಿ ಪ್ರಕಾರ ಸರಕಾರ ಈ ಯೋಜನೆಗಾಗಿ ಪ್ರತಿ ವರ್ಷ 49 ಕೋಟಿ ರೂ. ಹಣವನ್ನು ವ್ಯಯ ಮಾಡುತ್ತಿತ್ತು. ಆದರೆ ಏಕಾಏಕಿ ಅದನ್ನು ನಿಲ್ಲಿಸಿದ್ದು ಯಾಕೆ ಎನ್ನುವ ಪ್ರಶ್ನೆ ಈಗ ಎಲ್ಲ ವಿದ್ಯಾರ್ಥಿನಿಯರನ್ನು ಕಾಡುತ್ತಿದೆ. ಕೂಡಲೇ ಮತ್ತೆ ಶುಚಿ ಪ್ಯಾಡ್ ವಿತರಣೆ ಮಾಡಬೇಕು ಎನ್ನುವ ಒತ್ತಾಯವನ್ನು ವಿದ್ಯಾರ್ಥಿನಿಯರು ಮಾಡುತ್ತಿದ್ದಾರೆ.
from India & World News in Kannada | VK Polls https://ift.tt/3dtJxkC