ಮಾಯಸಂದ್ರ ಸ್ವಾಮಿ ತರುವೇಕೆರೆ / ಸಿರಾಜ್ ಅಹಮದ್ ಕೊಡಿಗೇನಹಳ್ಳಿ ತುಮಕೂರು: ಪವಿತ್ರ ರಂಜಾನ್ ಮಾಸವನ್ನು ಅರ್ಥಪೂರ್ಣವಾಗಿ ವಿಶೇಷ ರೀತಿಯಲ್ಲಿ ಆಚರಿಸಲು ಮುಸ್ಲಿಂ ಯುವಕರು ಮುಂದಾಗಿದ್ದಾರೆ. ಜಾತಿ, ಧರ್ಮಕ್ಕಿಂತ ಮಾನವೀಯತೆ ದೊಡ್ಡದೆಂದು ಸಾರಿರುವ ಯುವಕರು, ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಹೆಗಲಾಗುತ್ತಿದ್ದಾರೆ. ಜಿಲ್ಲೆಯ ತರುವೇಕೆರೆಯಲ್ಲಿ 15 ಮಂದಿ ಹಾಗೂ ಮಧುಗಿರಿಯಲ್ಲಿ 8 ಮಂದಿಯ ತಂಡ ಮಾನವೀಯ ಕೆಲಸದ ಮೂಲಕ ಗಮನ ಸೆಳೆದಿದೆ. ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸಂಬಂಧಿಕರೇ ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಈ ಯುವಕರ ಶ್ಲಾಘನೀಯ ಕೆಲಸಕ್ಕೆ ಮುಂದಾಗಿದ್ದು, ಜಾತಿ, ಧರ್ಮ ಭೇದವಿಲ್ಲದೆ ಅವರವರ ಸಂಪ್ರದಾಯದ ಅನುಸಾರ ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ. ತುರುವೇಕೆರೆ ಪಟ್ಟಣದ ಅಫ್ಜಲ್, ನಯಾಜ್‌ಪಾಷ, ನಸ್ರಲ್ಲಾ, ನಯಾಜ್ ಉಲ್ಲಾಖಾನ್, ಅಸ್ಲಾಂ ಪಾಷಾ ಸೇರಿದಂತೆ 15 ಮಂದಿ ಹಾಗೂ ಮಧುಗಿರಿಯ ಸೈಯದ್ ಸಿಕಂದರ್, ಮೊಹಮದ್ ಸುಹೇಲ್, ಅದಿಕ್ ಶಾರೀಫ್, ಮೊಹಮೊದ್ ಶಾಮೀರ್, ಮಂಜರ್ ಅಹಮದ್ ಸೇರಿದಂತೆ 8 ಮಂದಿ ಯುವಕರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡಿ ಎಂದು ಯುವಕರು ಸ್ಥಳೀಯ ತಹಸೀಲ್ದಾರ್‌ಗೆ ಮನವಿಯನ್ನೂ ಸಲ್ಲಿಸಿದ್ದಾರೆ. ಮಧುಗಿರಿ ತಂಡ ಈಗಾಗಲೇ 16 ಮೃತದೇಹಗಳ ಅಂತ್ಯಸಂಸ್ಕಾರವನ್ನು ಹಿಂದೂ ವಿಧಿವಿಧಾನಗಳಂತೆ ನೆರವೇರಿಸಿದೆ.
from India & World News in Kannada | VK Polls https://ift.tt/3sHxEMj