ಬೆಂಗಳೂರು: ಮುಷ್ಕರ ನಡೆಸಲು ಇದು ಸರಿಯಾದ ಸಮಯ ಅಲ್ಲ ಎಂದು ರಾಜ್ಯ ಹೈಕೋರ್ಟ್ ಅಭಿಪ್ರಾಯದ ಪರಿಣಾಮ ನಿರತರ ಮೇಲೆ ತಟ್ಟಿದ್ದು ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳು ಓಡಾಟ ನಡೆಸುತ್ತಿವೆ. ಬಸ್ ಮುಷ್ಕರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಎಂಟಿಸಿ ನೌಕರರು ಇದೀಗ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಬುಧವಾರ ಬೆಳಗ್ಗೆ 8 ಗಂಟೆಯಿಂದ 994 ಬಿಎಂಟಿಸಿ ಬಸ್‌ಗಳು ನಗರದ ವಿವಿಧ ಕಡೆಗಳಲ್ಲಿ ಸಂಚಾರ ನಡೆಸಿವೆ. ರಾಜ್ಯದಲ್ಲಿ ಕೋವಿಡ್ ಉಲ್ಬಣ ಆಗಿರುವುದರಿಂದ ಸಾರಿಗೆ ನೌಕರರು ಮುಷ್ಕರ ನಡೆಸುವ ಸಮಯ ಇದಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಅಲ್ಲದೆ ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಕಾಯ್ದಿರಿಸಿಕೊಂಡು ಬಸ್ ಕಾರ್ಯಾಚರಣೆ ಆರಂಭಿಸುತ್ತಾರೆ ಎಂಬ ವಿಶ್ವಾಸವನ್ನು ಹೈಕೋರ್ಟ್ ಮಂಗಳವಾರ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಬಸ್ ಸಂಚಾರ ಹೆಚ್ಚಳವಾಗುತ್ತಿದೆ. ಬೆಂಗಳೂರು ನಗರ ಮಾತ್ರ ಅಲ್ಲ ಇತರ ಜಿಲ್ಲಾ ಕೇಂದ್ರಗಳಲ್ಲೂ ಬಸ್ ಸಂಚಾರ ಆರಂಭಗೊಳ್ಳುತ್ತಿದೆ. ನೌಕರರು ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಮುಷ್ಕರ ಮುಂದುವರಿದಿದ್ದು ತಮ್ಮ ಬೇಡಿಕೆ ಈಡೇರಿಕೆ ಅಗುವ ವರೆಗೆ ಮುಷ್ಕರ ನಡೆಯುತ್ತದೆ ಎಂದು ನೌಕರರ ಒಕ್ಕೂಟ ಪಟ್ಟುಹಿಡಿದಿದೆ. ಆರನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಒಂದು ಕಡೆಯಲ್ಲಿ ಕೋವಿಡ್ ಸಂಕಷ್ಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಮುಷ್ಕರದ ಕುರಿತಾಗಿ ಹೈಕೋರ್ಟ್ ಅಭಿಪ್ರಾಯ ಮಹತ್ವಪಡೆದುಕೊಂಡಿದೆ.
from India & World News in Kannada | VK Polls https://ift.tt/3x7LbQV