ಮೈಸೂರು: ಇಸಾಕ್ ಅಜ್ಜನ 11 ಸಾವಿರ ಪುಸ್ತಕಗಳಿದ್ದ ‌ಗ್ರಂಥಾಲಯ ಭಸ್ಮ; ಬೆಂಕಿಯ ಹಿಂದೆ ಒಂದು ಬೀಡಿಯ ಕತೆ

ಮೈಸೂರು: ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿ ನೆರವಿನ ಮಹಾಪೂರವೇ ಹರಿದು ಬಂದ ಪುಸ್ತಕ ಪ್ರೇಮಿ ಸೈಯದ್‌ ಇಸಾಕ್‌ ಅವರ ಸುಟ್ಟ ಪ್ರಕರಣದ ಕಿಡಿಯ ಮೂಲ ಕೊನೆಗೂ ಬಯಲಾಗಿದ್ದು, ವ್ಯಕ್ತಿಯೊಬ್ಬ ಬೀಡಿಗೆ ಹಚ್ಚಿ ಎಸೆದ ಕಡ್ಡಿಯಿಂದ ಅನಾಹುತವಾಗಿರುವುದು ದೃಢಪಟ್ಟಿದೆ. ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ನಿರ್ಲಕ್ಷ್ಯ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಮೈಸೂರಿನ ರಾಜೀವ್‌ ನಗರದಲ್ಲಿದ್ದ ಸೈಯದ್‌ ಇಸಾಕ್‌ ಸುಮಾರು 11 ಸಾವಿರ ಪುಸ್ತಕಗಳ ಗ್ರಂಥಾಲಯವನ್ನು ಹೊಂದಿದ್ದರು. ಆದರೆ, ಇದು ಏ.9ರಂದು ಸುಟ್ಟು ಭಸ್ಮವಾಗಿತ್ತು. ಉದ್ದೇಶಪೂರ್ವಕವಾಗಿಯೇ ಕಿಡಿಗೇಡಿಗಳು ಗ್ರಂಥಾಲಯವನ್ನು ಸುಟ್ಟಿದ್ದಾರೆ ಎನ್ನುವ ಆರೋಪ ಬಂದ ಹಿನ್ನೆಲೆಯಲ್ಲಿ ಭಾರೀ ಸುದ್ದಿಯಾಗಿತ್ತು. ರಾಜ್ಯದ ವಿವಿಢೆಗಳಿಂದ ಜನರು ಸೈಯದ್‌ ನೆರವಿಗೆ ಧಾವಿಸಿದ್ದರು. ಕ್ರೌಡ್‌ಫಂಡಿಂಗ್‌ನಿಂದಾಗಿ ಲಕ್ಷಾಂತರ ರೂ. ಸಂಗ್ರಹವಾಗಿದೆ. ಸರಕಾರ, ಮುಡಾ, ಪಾಲಿಕೆ ಸೇರಿದಂತೆ ಸಂಘ ಸಂಸ್ಥೆಗಳು ವಿವಿಧ ರೀತಿಯಲ್ಲಿ ನೆರವು ನೀಡಿದ್ದು, ಅದೇ ಜಾಗದಲ್ಲಿ ಹೊಸ ಗ್ರಂಥಾಲಯ ಶೀಘ್ರ ತಲೆ ಎತ್ತಲಿದೆ. ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದವರು ಯಾರು ಎನ್ನುವುದು ನಿಗೂಢವಾಗಿತ್ತು. ಆರೋಪಿಗಳನ್ನು ಪತ್ತೆ ಹಚ್ಚುವಂತೆ ಪೊಲೀಸರ ಮೇಲೆ ಒತ್ತಡವೂ ಇತ್ತು. ಇದೀಗ ಉದಯಗಿರಿ ಪೊಲೀಸರು ಪ್ರಕರಣದ ರಹಸ್ಯವನ್ನು ಬಯಲಿಗೆ ಎಳೆದಿದ್ದು, ಶಾಂತಿನಗರದ ನಿವಾಸಿ ಸೈಯದ್‌ ನಾಸೀರ್‌(35) ಎಂಬಾತನನ್ನು ಬಂಧಿಸಲಾಗಿದೆ. ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದ್ದಾರೆ. ಒಂದು ಬೀಡಿಯ ಕಥೆ! ಏ.8ರಂದು ರಾತ್ರಿ 9 ಗಂಟೆಗೆ ಸೈಯದ್‌ ನಾಸಿರ್‌ ಕುಡಿದ ಮತ್ತಿನಲ್ಲಿ ಮನೆಗೆ ತೆರಳಿದ್ದ. ಮನೆಯಲ್ಲಿ ಜಗಳವಾಡಿ ರಾಜೀವ್‌ ನಗರದ ಗ್ರಂಥಾಲಯದ ಹಿಂಬದಿಯಲ್ಲಿರುವ ಅಂಗಡಿಯಲ್ಲಿ ಬೀಡಿ ಹಾಗೂ ಬೆಂಕಿ ಪೊಟ್ಟಣ ಖರೀದಿಸಿ, ರಾತ್ರಿ ಸುಮಾರು 10.15ರ ವೇಳೆಗೆ ಗ್ರಂಥಾಲಯಕ್ಕೆ ಹೊಂದಿ ಕೊಂಡಂತಿರುವ ಸೋಫಾ ದುರಸ್ತಿ ಅಂಗಡಿ ಬಳಿಯಲ್ಲಿ ಬೀಡಿ ಹಚ್ಚಿ ಬೆಂಕಿ ಕಡ್ಡಿಯನ್ನು ಅಲ್ಲಿಯೇ ಎಸೆದು ಹೋಗಿದ್ದಾನೆ. ಈ ಕಡ್ಡಿ ಕಸದ ರಾಶಿಗೆ ಬಿದ್ದು ನಿಧಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಮೊದಲು ಸೋಫಾ ದುರಸ್ತಿ ಅಂಗಡಿಯನ್ನು ಬೆಂಕಿ ಆವರಿಸಿದ್ದು, ಸ್ಥಳದಲ್ಲಿದ್ದವರು ಮಣ್ಣು ಎರಚಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಮೊದಲು ಬೆಂಕಿ ನಂದಿದಂತೆ ಕಂಡುಬಂದರೂ ಮಧ್ಯರಾತ್ರಿಯಲ್ಲಿ ಮತ್ತೆ ಗಾಳಿಗೆ ಹೊತ್ತಿಕೊಂಡು ಸೋಫಾ ಅಂಗಡಿ ಹಾಗೂ ಪಕ್ಕದಲ್ಲಿದ್ದ ಸೈಯದ್‌ ಇಸಾಕ್‌ ಅವರ ಗ್ರಂಥಾಲಯ ಭಸ್ಮವಾಗಿದೆ. ಸಿಸಿಟಿವಿಯಿಂದ ಬಯಲು!ಪೊಲೀಸರಿಗೆ ಆರಂಭದಲ್ಲಿ ಯಾವುದೇ ಆಧಾರ ದೊರೆಯಲಿಲ್ಲ. ಉದ್ದೇಶಪೂರ್ವಕವಾಗಿ ಸುಟ್ಟದ್ದು, ಶಾರ್ಟ್‌ ಸರ್ಕೀಟ್‌ ಸೇರಿದಂತೆ ಎಲ್ಲಾ ಮೂಲಗಳನ್ನು ಜಾಲಾಡಿದ್ದಾರೆ. ಈ ಸಂದರ್ಭ ಗ್ರಂಥಾಲಯದ ಎದುರಿನ ಮನೆಯೊಂದರಲ್ಲಿಅಳವಡಿಸಿದ್ದ ಸಿಸಿಟಿವಿಯನ್ನು ಸುಮಾರು ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಗಮನಿಸಿದಾಗ ಬೆಂಕಿಯ ಮೂಲ ಕಂಡು ಬಂತು. ದೇವರಾಜ ವಿಭಾಗದ ಎಸಿಪಿ ಎಂ.ಎನ್‌.ಶಶಿಧರ್‌ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯದಲ್ಲಿ ಉದಯಗಿರಿ ಠಾಣೆ ಇನ್ಸ್‌ಪೆಕ್ಟರ್‌ ಪಿ.ಕೆ.ರಾಜು, ಎಸ್‌ಐಗಳಾದ ಎಂ.ಜೈ ಕೀರ್ತಿ, ಮದನ್‌ ಕುಮಾರ್‌, ಪಿ.ನಟರಾಜ್‌, ಎಎಸ್‌ಐ ದಿವಾಕರ್‌, ಸಿಬ್ಬಂದಿಗಳಾದ ಎಂ.ಶಂಕರ್‌, ಮಹದೇವ ಸ್ವಾಮಿ, ಪಿ.ಆನಂದ್‌ ಕುಮಾರ್‌, ಸಿದ್ದಿಕ್‌ ಅಹಮ್ಮದ್‌, ಎಚ್‌.ಡಿ.ಗೋಪಾಲ್‌, ರಾಜೇಶ್‌, ಮೋಹನ್‌ ಕುಮಾರ್‌, ಶಿವರಾಜಪ್ಪ, ವಿನೋದ್‌ ರಾಥೋಡ್‌, ಸಮೀರ್‌, ಸಾಜಿಯಾ ಬಾನು ಇದ್ದರು.


from India & World News in Kannada | VK Polls https://ift.tt/32m3W4V

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...