ಚೆನ್ನೈ: ಶುಕ್ರವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಮೊದಲನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಸಜ್ಜಾಗುತ್ತಿದೆ. ಆದರೆ, ಪ್ಲೇಯಿಂಗ್ ಇಲೆವೆನ್‌ಗೆ ಯಾರಿಗೆ ಅವಕಾಶ ನೀಡಬೇಕೆಂಬುದು ಟೀಮ್ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆ ನೋವು ಶುರುವಾಗಿದೆ. ಇದರ ನಡುವೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಮೊದಲ ಟೆಸ್ಟ್‌ಗೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಿದ್ದ ಭಾರತ ತಂಡದಲ್ಲಿ ಹಲವು ಯುವ ಆಟಗಾರರು ಹೀರೋಗಳಾಗಿದ್ದರು. ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಶುಭಮನ್ ಗಿಲ್ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಆಡಲು ಹಲವು ಸ್ಟಾರ್ ಆಟಗಾರರು ಇದೀಗ ಭಾರತ ತಂಡಕ್ಕೆ ಮರಳಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಹಿರಿಯ ವೇಗಿ ಇಶಾಂತ್ ಶರ್ಮಾ ತಂಡಕ್ಕೆ ಬಂದಿದ್ದಾರೆ. ಇನ್ನು ಗಾಯದಿಂದ ಬ್ರಿಸ್ಬೇನ್ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದ ಆರ್ ಅಶ್ವಿನ್ ಹಾಗೂ ಜಸ್‌ಪ್ರಿತ್ ಬುಮ್ರಾ ಇದೀಗ ತಂಡಕ್ಕೆ ಮರಳಿದ್ದಾರೆ. ಚೆನ್ನೈನಲ್ಲಿ ನಡೆಯುವ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ ಅತ್ಯುತ್ತಮ ಆಯ್ಕೆಗಳನ್ನು ಹೊಂದಿದೆ. ಆದರೆ, ಪ್ಲೇಯಿಂಗ್ ಇಲೆವೆನ್‌ನಲ್ಲಿ ಕೆಲ ಸ್ಥಾನಗಳಿಗೆ ಆಯ್ಕೆ ಮಾಡುವುದು ಟೀಮ್ ಮ್ಯಾನೇಜ್‌ಮೆಂಟ್‌ಗೆ ಕಠಿಣವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ 'ಗೇಮ್ ಪ್ಲ್ಯಾನ್' ಶೋನಲ್ಲಿ ಗೌತಮ್ ಗಂಭೀರ್, ಇಂಗ್ಲೆಂಡ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯಕ್ಕೆ ಅಂತಿಮ 11 ಆಟಗಾರರನ್ನು ಬಹಿರಂಗಪಡಿಸಿದ್ದಾರೆ. "ಐವರು ಬೌಲರ್‌ಗಳನ್ನು ಪಕ್ಕಾ ಆಡಿಸುತ್ತೇನೆ. ಯಾವುದೇ ಪರಿಸ್ಥಿತಿ ಇದ್ದರೂ ಭಾರತ ತಂಡ ಐದು ಬೌಲರ್‌ಗಳೊಂದಿಗೆ ಕಣಕ್ಕೆ ಇಳಿಯಲಿದೆ ಎಂಬುದನ್ನು ನಾನು ನಂಬುತ್ತೇನೆ. ರವೀಂದ್ರ ಜಡೇಜಾ ಸ್ಥಾನದಲ್ಲಿ 7ನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡುತ್ತೇನೆ. 8ನೇ ಕ್ರಮಾಂಕಕ್ಕೆ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಅವರನ್ನು ಪರಿಗಣಿಸುತ್ತೇನೆ. ಸಿಡ್ನಿ ಟೆಸ್ಟ್ ಬಳಿಕ ಅಶ್ವಿನ್ ತುಂಬಾ ವಿಶ್ವಾಸದಲ್ಲಿದ್ದು, ಅಕ್ಷರ್ ಪಟೇಲ್ ಬೌಲಿಂಗ್ ಜತೆಗೆ ಬ್ಯಾಟಿಂಗ್‌ನಲ್ಲಿಯೂ ನೆರವಾಗಲಿದ್ದಾರೆ. ಭಾರತ 350 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವನ್ನು ಬೌಲಿಂಗ್ ದಾಳಿಯಿಂದ ಬೇಗ ಬೀಳಿಸಬಹುದು," ಎಂದರು. ಅಹಮದಾಬಾದ್‌ನಲ್ಲಿ ನಡೆಯಲಿರುವ ಡೇ-ನೈಟ್ ಟೆಸ್ಟ್‌ಗೋಸ್ಕರ ಜಸ್‌ಪ್ರಿತ್ ಬುಮ್ರಾಗೆ ಎರಡನೇ ಪಂದ್ಯದಿಂದ ವಿಶ್ರಾಂತಿ ನೀಡಬೇಕೆಂದು ಗೌತಮ್ ಗಂಭೀರ್ ಸಲಹೆ ನೀಡಿದರು. "ಜಸ್‌ಪ್ರಿತ್ ಬುಮ್ರಾ ಅವರಿಂದ ಮೊದಲ ಟೆಸ್ಟ್ ಆರಂಭಿಸುತ್ತೇನೆ. ನಂತರ ಎರಡನೇ ಪಂದ್ಯಕ್ಕೆ ವಿಶ್ರಾಂತಿ ನೀಡುತ್ತೇನೆ ಹಾಗೂ ಅಹಮದಾಬಾದ್‌ನಲ್ಲಿ ನಡೆಯುವ ಡೇ-ನೈಟ್ ಪಂದ್ಯಕ್ಕೆ ಅವರನ್ನು ಮತ್ತೇ ಅಂತಿಮ 11ಕ್ಕೆ ಆರಿಸುತ್ತೇನೆ," ಎಂದು ಗಂಭೀರ್ ಹೇಳಿದರು. ಮೊದಲನೇ ಪಂದ್ಯಕ್ಕೆ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅವರನ್ನು ಗಂಭೀರ್ ಆಯ್ಕೆ ಮಾಡಿದರು. ಗಂಭೀರ್ ಆರಿಸಿದ ತಂಡದಲ್ಲಿ ಕಮ್‌ಬ್ಯಾಕ್ ಮಾಡಲು ಹಾರ್ದಿಕ್ ಪಾಂಡ್ಯ ಹಾಗೂ ಇಶಾಂತ್ ಶರ್ಮಾಗೆ ಅವಕಾಶವಿಲ್ಲ. ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿಯೂ ಈ ಇಬ್ಬರೂ ಇರಲಿಲ್ಲ. "ಶುಭಮನ್ ಗಿಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ., ಅಜಿಂಕ್ಯ ರಹಾನೆ, ರಿಷಭ್ ಪಂತ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್," ಎಂದು ಗಂಭೀರ್ ತಿಳಿಸಿದರು. ಭಾರತ ತಂಡ ಇಂಗ್ಲೆಂಡ್ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಓಡಿಐ ಸರಣಿ ಹಾಗೂ ಐದು ಪಂದ್ಯಗಳ ಟಿ20 ಸರಣಿ ಆಡಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3pMxlzd