
ಇದೀಗ ಕುರಿಗಾಹಿಗಳಿಗೆ ಸಂಕಷ್ಟ ಎದುರಾಗಿದೆ. ಈಗಾಗಲೇ ನೂರಾರು ಕುರಿ, ಮೇಕೆಗಳನ್ನು ಬಲಿ ಪಡೆದುಕೊಂಡ ಹಿರೇಬೇನೆ(ಪಿಪಿಆರ್) ಎಂಬ ವೈರಾಣು ರಾಮನಗರಕ್ಕೂ ತನ್ನ ಕಬಂಧ ಬಾಹುಗಳನ್ನು ಚಾಚಿದೆ. ವೈರಸ್‌ನಿಂದ ಹರಡುವ ಸಾಂಕ್ರಾಮಿಕ ರೋಗವಾಗಿರುವ ಪಿಪಿಆರ್ ಕುರಿ, ಮೇಕೆಗಳ ದೇಹ ಹೊಕ್ಕ ಕೆಲವೇ ದಿನಗಳಲ್ಲಿ ಬಾಯಿಯಲ್ಲಿ ಹುಣ್ಣು, ಜ್ವರ ರಕ್ತಬೇಧಿ, ಕಣ್ಣಿನಲ್ಲಿ ಪಿಸರು, ಕೆಮ್ಮು ತರಿಸಿ ಪ್ರಾಣಿಗಳ ಜೀವಕ್ಕೇ ಕುತ್ತು ತರಲಿದೆ. ನಿಂತ ನೀರು ಕುಡಿಸುವುದು ಮತ್ತು ವಲಸೆ ಬಂದ ಕುರಿಗಳು ಮೇಯುತ್ತಿದ್ದ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸುವುದು, ಕುರಿ, ಮೇಕೆ ಸಂತೆಗಳಲ್ಲಿ ರೋಗ ಒಂದರಿಂದ ಮತ್ತೊಂದು ಕುರಿಗೆ ಸುಲಭವಾಗಿ ವೈರಾಣು ಹರಡುತ್ತದೆ. ಈ ರೋಗವನ್ನು ತಡೆಗಟ್ಟಲು ಯಾವ ಯಾವ ಕ್ರಮಗಳನ್ನು ಅನುಸರಿಸಬೇಕು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

ತಿ.ನಾ.ಪದ್ಮನಾಭ ಮಾಗಡಿ ಗ್ರಾಮಾಂತರ
ಕೋವಿಡ್ ಕಾಟದಿಂದ ಭಯಭೀತರಾಗಿದ್ದ ರೈತರಿಗೆ ಇದೀಗ ಕುರಿ, ಮೇಕೆಗಳಿಗೆ ಹಬ್ಬುತ್ತಿರುವ ಹಿರೇಬೇನೆ(ಪಿಪಿಆರ್) ಎಂಬ ವೈರಾಣು ರೋಗ ನಿದ್ದೆಗೆಡಿಸಿದೆ. ಹೆಚ್ಚಾಗಿ ರಾಜ್ಯದಲ್ಲಿ ಡಿಸೆಂಬರ್‌ನಿಂದ ಏಪ್ರಿಲ್‌ನಲ್ಲಿ ಕಂಡು ಬರುವ ಈ ರೋಗ ರಾಮನಗರಕ್ಕೆ ಹೊಂದಿಕೊಂಡಿರುವ ತುಮಕೂರು ಜಿಲ್ಲೆಯಲ್ಲಿ ಉಲ್ಬಣಿಸಿದ್ದು, ನೂರಾರು ಕುರಿ, ಮೇಕೆಗಳನ್ನು ಬಲಿ ಪಡೆದಿದೆ. ವೈದ್ಯರೂ ಕೂಡಾ ಹಿರೇಬೇನೆ ರೋಗ ನಿಯಂತ್ರಿಸಲು ಕಸರತ್ತು ಮಾಡುತ್ತಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಯಾವುದೇ ಪ್ರಕರಣ ವರದಿಯಾಗಿಲ್ಲವಾದರೂ ಸಾಂಕ್ರಾಮಿಕ ರೋಗವಾಗಿರುವ ಹಿರೇಬೇನೆ ರೋಗದ ಬಗ್ಗೆ ಜಿಲ್ಲೆಯ ಕುರಿಗಾಹಿಗಳು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂಬ ಸಂದೇಶವನ್ನು ಜಿಲ್ಲಾ ಪಶುಸಂಗೋಪನಾ ಇಲಾಖೆ ರವಾನಿಸಿದೆ. ಕುರಿಗಾಹಿಗಳ ಆರ್ಥಿಕ ಮೂಲವಾಗಿರುವ ಕುರಿ, ಮೇಕೆಗಳು ಹೆಚ್ಚಾಗಿ ವಾಸವಾಗಿರುವ ಪ್ರದೇಶಗಳಲ್ಲಿ ಹಿರೇಬೇನೆ ಬಗ್ಗೆ ಜಾಗೃತಿ ವಹಿಸುವುದು ಅನಿವಾರ್ಯ ಎಂಬ ಸಲಹೆಯನ್ನು ತಜ್ಞರು ಇಲಾಖೆಗೆ ನೀಡಿದ್ದಾರೆ.
ಏನಿದು ಪಿಪಿಆರ್?

ವೈರಸ್‌ನಿಂದ ಹರಡುವ ಸಾಂಕ್ರಾಮಿಕ ರೋಗವಾಗಿರುವ ಪಿಪಿಆರ್ ಕುರಿ, ಮೇಕೆಗಳ ದೇಹ ಹೊಕ್ಕ ಕೆಲವೇ ದಿನಗಳಲ್ಲಿ ಬಾಯಿಯಲ್ಲಿ ಹುಣ್ಣು, ಜ್ವರ ರಕ್ತಬೇಧಿ, ಕಣ್ಣಿನಲ್ಲಿ ಪಿಸರು, ಕೆಮ್ಮು ತರಿಸಿ ಪ್ರಾಣಿಗಳ ಜೀವಕ್ಕೇ ಕುತ್ತು ತರಲಿದೆ. ಒಂದು ವರ್ಷದ ಕೆಳಗಿನ ಕುರಿ, ಮೇಕೆಗಳಿಗೆ ಈ ರೋಗ ತಗುಲಿದರೆ ಅವುಗಳು ಸಾವಿಗೀಡಾಗುವ ಸಾಧ್ಯತೆ ಹೆಚ್ಚೆನ್ನುತ್ತಿದ್ದಾರೆ ವೈದ್ಯಾಧಿಕಾರಿಗಳು.
ರೋಗದ ಮೂಲ
ನಿಂತ ನೀರು ಕುಡಿಸುವುದು ಮತ್ತು ವಲಸೆ ಬಂದ ಕುರಿಗಳು ಮೇಯುತ್ತಿದ್ದ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸುವುದು, ಕುರಿ, ಮೇಕೆ ಸಂತೆಗಳಲ್ಲಿ ರೋಗ ಒಂದರಿಂದ ಮತ್ತೊಂದು ಕುರಿಗೆ ಸುಲಭವಾಗಿ ವೈರಾಣು ಹರಡುತ್ತದೆ.
ಮಂದೆಯಿಂದ ಬೇರ್ಪಡಿಸಿ

ರೋಗದ ಲಕ್ಷಣ ಕಾಣಿಸಿಕೊಂಡ ಕುರಿಯನ್ನು ತಕ್ಷಣವೇ ಮಂದೆಯಿಂದ ಬೇರ್ಪಡಿಸಿ, ನೆರಳಿನಲ್ಲಿ ಚಿಕಿತ್ಸೆ ನೀಡಬೇಕು. ಚಳಿಗಾಲದಲ್ಲಿ ಕುರಿ, ಮೇಕೆ ಸಂತೆ ನಡೆಸುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಒಳ್ಳೆಯದು ಎಂಬುದು ವೈದ್ಯರ ಸಲಹೆ.
ಎರಡು ಬಾರಿ ವ್ಯಾಕ್ಸಿನೇಷನ್
ರಾಮನಗರ ಜಿಲ್ಲೆಯಲ್ಲಿ ಪಿಪಿಆರ್ ರೋಗ ನಿಯಂತ್ರಿಸುವ ಸಲುವಾಗಿ ಮುನ್ನೆಚ್ಚರಿಕೆಯಿಂದ ಡಿಸೆಂಬರ್ ಮತ್ತು ಜನವರಿಯಲ್ಲಿ 2 ಬಾರಿ ಪಿಪಿಆರ್ ವಾಕ್ಸಿನೇಷನ್ ಮಾಡಿದ್ದಾರೆ. ಹೀಗಿದ್ದೂ ರೋಗ ಪತ್ತೆಯಾದರೆ ಚಿಕಿತ್ಸೆ ನೀಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಹೊಟ್ಟೆ ಉಬ್ಬರಿಸಿದ ಪರಿಣಾಮ, ಹುಣಸೂರಿನಲ್ಲಿ 16 ಕುರಿಗಳ ಜತೆ ರಾಸುಗಳ ಸಾವು
ವೈದ್ಯರು ತಿಳಿಸುವ ಮನೆ ಮದ್ದು!

ಪಶು ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಕೊಡಿಸುವ ಜತೆಗೆ ನಾಲಿಗೆ, ಒಸಡು, ಮೂಗನ್ನು ಅಡುಗೆ ಸೋಡ ಬೆರೆಸಿದ ನೀರಿನಿಂದ ದಿನಕ್ಕೆ ಎರಡು ಬಾರಿ ಸ್ವಚ್ಛಗೊಳಿಸಬೇಕು. ನಂತರ ಬೋರಾಕ್ಸ್ ಪುಡಿಯನ್ನು ಜೇನು ತುಪ್ಪದೊಂದಿಗೆ ಬೆರಸಿ ವಸಡಿಗೆ ಸವರಬೇಕು. ನೆರಳಿನಲ್ಲಿಯೇ ಕುರಿಗಳನ್ನು ಕಟ್ಟಿ ಹಾಕಬೇಕು. ರಾಗಿ ಗಂಜಿ, ಸೊಲ್ಲು ನೀಡಬೇಕು. ಮೃದು ಆಹಾರ ಬೆಲ್ಲ ಮಿಶ್ರಿತ ನೀರು ಕುಡಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.
ಜಾಗೃತಿ ಅನಿವಾರ್ಯ
ಕುರಿಗಾಹಿಗಳ ಆರ್ಥಿಕ ಮೂಲವಾಗಿರುವ ಕುರಿ, ಮೇಕೆಗಳು ಹೆಚ್ಚಾಗಿ ವಾಸವಾಗಿರುವ ಪ್ರದೇಶಗಳಲ್ಲಿ ಹಿರೇಬೇನೆ ಬಗ್ಗೆ ಜಾಗೃತಿ ವಹಿಸುವುದು ಅನಿವಾರ್ಯ ಎಂಬ ಸಲಹೆಯನ್ನು ತಜ್ಞರು ಇಲಾಖೆಗೆ ನೀಡಿದ್ದಾರೆ.
ಲಸಿಕೆ, ಪ್ರಯೋಗಾಲಯದ ಸಿದ್ಧತೆ!

ಪಕ್ಕದ ಜಿಲ್ಲೆಯ ಶಿರಾದಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿರುವ ಕುರಿಗಳ ಮಾದರಿ ಪರೀಕ್ಷೆಯನ್ನು ನಡೆಸುತ್ತಿರುವಂತೆ ಜಿಲ್ಲೆಯಲ್ಲಿಯೂ ಪ್ರಯೋಗಾಲಯದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪರೀಕ್ಷೆಗೆ ಅಗತ್ಯವಿರುವ ರಾಸಾಯನಿಕಗಳು ಜಿಲ್ಲಾ ಪ್ರಯೋಗಾಲಯದಲ್ಲಿ ಲಭ್ಯವಿದೆ. ಜತೆಗೆ ಸಾಕಷ್ಟು ಪ್ರಮಾಣದ ಲಸಿಕೆಯನ್ನು ಶೇಖರಿಸಿಟ್ಟುಕೊಂಡಿದ್ದಾರೆ.
ರಾಜ್ಯದಲ್ಲಿ 1.72 ಕೋಟಿ ದಾಟಿದ ಕುರಿ, ಮೇಕೆಗಳ ಸಂಖ್ಯೆ!
ಪಿಆರ್ ನಿರ್ಮೂಲನೆಗೆ ಸಾಮೂಹಿಕ ಲಸಿಕಾ ಆಂದೋಲನ!

ಕುರಿಗಳಲ್ಲಿ ಪಿಪಿಆರ್ ರೋಗ ಕಾಣಿಸಿಕೊಂಡರೆ ಸಮೀಪದ ಪಶುವೈದ್ಯಾಲಯಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯಬಹುದು. ಜಿಲ್ಲೆಯಲ್ಲಿಯೂ ಪಿಪಿಆರ್ ನಿರ್ಮೂಲನೆಗೆ ಸಾಮೂಹಿಕ ಲಸಿಕಾ ಆಂದೋಲನ ಆಯೋಜಿಸಿದ್ದೇವೆ. ಸಾಂಕ್ರಾಮಿಕ ರೋಗವಾದ ಕಾರಣ ಸಾದ್ಯವಾದಷ್ಟು ಚಳಿಗಾಲದಲ್ಲಿ ಕುರಿ ಸಂತೆಗಳನ್ನು ಕಡಿಮೆ ಮಾಡುವುದು ಒಳಿತು.
ಸಿದ್ದರಾಮಯ್ಯ, ನಿದೇರ್ಶಕರು, ಪಶುಸಂಗೋಪನಾ ಇಲಾಖೆ
ಕುರಿಗಾಹಿಗಳ ಬದುಕು ಕಟ್ಟಿಕೊಳ್ಳಲು ನೆರವಾಗಿರುವ ಕುರಿಗಳು ಪಕ್ಕದ ಜಿಲ್ಲೆಯಲ್ಲಿ ನಿಗೂಢವಾಗಿ ಸಾಯುತ್ತಿವೆ. ಹೀಗಾಗಿ ರೇಷ್ಮೆ ಜಿಲ್ಲೆಯಲ್ಲಿಯೂ ರೈತರಿಗೆ ಜಾಗೃತಿ ನೀಡುವ ಕೆಲಸ ಮಾಡಬೇಕು.
ಸಂತೋಷ್, ಕುರಿಗಾಹಿ, ಸೋಲೂರು
from India & World News in Kannada | VK Polls https://ift.tt/3khKCxU