ವಿರಾಟ್‌ ಕೊಹ್ಲಿ ಬಳಿ ತುಂಬಾ ಕಲಿಯುತ್ತೇನೆಂದ ಸೂರ್ಯಕುಮಾರ್‌!

ಹೊಸದಿಲ್ಲಿ: ದೇಶಿ ಕ್ರಿಕೆಟ್‌ ಹಾಗೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಸ್ಥಿರ ಪ್ರದರ್ಶನ ತೋರುತ್ತಾ ಬಂದಿದ್ದ ಮುಂಬೈ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌ಗೆ ಕಡೆಗೂ ಅದೃಷ್ಠ ಒಲಿದು ಬಂದಿದೆ. ಇಂಗ್ಲೆಂಡ್‌ ವಿರುದ್ಧ ಮುಂಬರುವ ಟಿ20 ಸರಣಿಗೆ ಭಾರತ ತಂಡದಲ್ಲಿ ಚೊಚ್ಚಲ ಸ್ಥಾನ ಪಡೆದುಕೊಂಡಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಪಾಲಿ‌ಗೆ ಕಳೆದ ಆವೃತ್ತಿಯ ಐಪಿಎಲ್‌ ಟೂರ್ನಿ ಅದ್ಭುತವಾಗಿತ್ತು. ಅದರಲ್ಲೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಜೇಯ 79* ರನ್‌ ಗಳಿಸಿದ್ದು ಸೂರ್ಯಕುಮಾರ್ ಯಾದವ್ ಪಾಲಿಗೆ ಶ್ರೇಷ್ಠ ಇನಿಂಗ್ಸ್ ಆಗಿತ್ತು. ಆದರೂ, ಆಸ್ಟ್ರೇಲಿಯಾ ಪ್ರವಾಸದ ಟಿ20 ಸರಣಿಗೆ ಅವಕಾಶ ಪಡೆಯುವಲ್ಲಿ ಮುಂಬೈ ಇಂಡಿಯನ್ಸ್ ಆಟಗಾರ ವಿಫಲರಾಗಿದ್ದರು. ಇದರಿಂದ ಅವರು ತುಂಬಾ ಬೇಸರಕ್ಕೊಳಗಾಗಿದ್ದರು. ಅಂತಿಮವಾಗಿ ಸೂರ್ಯಕುಮಾರ್‌ ಯಾದವ್ ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ ಚೊಚ್ಚಲ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪೋರ್ಟ್ಸ್ ಟುಡೇ ಜತೆ ಮಾತನಾಡಿದ ಅವರು, ಇಂಡಿಯನ್‌ ಡ್ರೆಸ್ಸಿಂಗ್‌ ರೂಂನಲ್ಲಿ ಎಲ್ಲರಿಂದ ಅದರಲ್ಲೂ ವಿಶೇಷವಾಗಿ ನಾಯಕ ವಿರಾಟ್‌ ಕೊಹ್ಲಿಯಿಂದ ಸಾಕಷ್ಟು ಕಲಿಯಬೇಕೆಂದು ಯೋಜನೆ ಹಾಕಿಕೊಂಡಿದ್ದೇನೆ ಎಂದಿದ್ದಾರೆ. "ಭಾರತ ತಂಡದ ಅದ್ಭುತ ಆಟಗಾರರೊಂದಿಗೆ ಹೇಗೆ ಸಮಯ ಕಳೆಯಬೇಕೆಂದು ಈಗಾಗಲೇ ಯೋಚನೆ ಮಾಡುತ್ತಿದ್ದೇನೆ. ನಾಯಕ , ರೋಹಿತ್‌ ಶರ್ಮಾ ಸೇರಿದಂತೆ ಎಲ್ಲಾ ಆಟಗಾರರ ಬಳಿ ಸಾಕಷ್ಟು ಕಲಿಯುತ್ತೇನೆ. ಟೀಮ್‌ ಇಂಡಿಯಾ ಜತೆ ಮೌಲ್ಯಯುತ ಸಮಯ ಕಳೆಯಬೇಕು ಹಾಗೂ ಸಾಧ್ಯವಾದಷ್ಟು ಹೆಚ್ಚು ಕಲಿಯಲು ಪ್ರಯತ್ನಿಸುತ್ತೇನೆ," ಎಂದು 30 ಪ್ರಾಯದ ಆಟಗಾರ ತಿಳಿಸಿದರು. "ಐಪಿಎಲ್ ಸಮಯದಲ್ಲಿ ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲುವ ಬಗ್ಗೆ ನಾನು ಕನಸು ಕಾಣುತ್ತಿದ್ದ ಕೆಲವು ನಿದರ್ಶನಗಳಿವೆ ಮತ್ತು ಇದೀಗ ಸರಿಯಾದ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ನಾನು ಅದನ್ನು ಹೇಗೆ ತೆಗೆದುಕೊಳ್ಳುತ್ತೇನೆ ಮತ್ತು ಅದನ್ನು ಹೇಗೆ ಪೂರ್ಣವಾಗಿ ಬಳಸಿಕೊಳ್ಳುತ್ತೇನೆ ಎಂಬುದು ನನ್ನ ಮೇಲಿದೆ," ಎಂದರು. "ಇದರ ಬಗ್ಗೆ ನಾನು ತುಂಬಾ ಯೋಚನೆ ಮಾಡುತ್ತಿಲ್ಲ. ಒಮ್ಮೆ ಒಂದು ಹೆಜ್ಜೆ ಇಡಲು ಪ್ರಯತ್ನಿಸುತ್ತೇನೆ, ಒಂದೇ ಸಮಯದಲ್ಲಿ ಒಂದು ಪಂದ್ಯವನ್ನು ಆಡಲು ಬಯಸುತ್ತೇನೆ. ನನ್ನ ಬಳಿ ಹಲವು ಯೋಜನೆಗಳಿವೆ, ಅವುಗಳನ್ನು ಸರಣಿಯಲ್ಲಿ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ," ಎಂದು ಸೂರ್ಯಕುಮಾರ್‌ ತಿಳಿಸಿದರು. "ಮುಂದಿನ ತಿಂಗಳು ನನ್ನ ದೇಶವನ್ನು ಪ್ರತಿನಿಧಿಸುತ್ತಿದ್ದೇನೆಂಬ ಬಗ್ಗೆ ಇದೀಗ ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದೇನೆಂಬ ಸುದ್ದಿ ಕೇಳಿದಾಗ, ನಾನು ಕ್ರಿಕೆಟ್ ಪ್ರಾರಂಭಿಸಿದ ಸ್ಥಳದಿಂದ, ನನ್ನ ಪೋಷಕರು ಹೇಗೆ ಬೆಂಬಲಿಸಿದರು ಸೇರಿದಂತೆ ಹಲವು ವಿಷಯಗಳು ನನ್ನ ಕಣ್ಣ ಮುಂದೆ ಬಂದಿವೆ," ಎಂದು ಅವರು ಹೇಳಿದರು. "ಅಭ್ಯಾಸ ಮುಗಿಸಿಕೊಂಡು ನನ್ನ ಕೊಠಡಿಯಲ್ಲಿ ಕುಳಿತು ಸ್ನಾನ ಮಾಡಲು ಕಾಯುತ್ತಿದ್ದೆ, ಈ ವೇಳೆ ಸಿಹಿ ಸುದ್ದಿ ನನಗೆ ಬಂತು. ಭಾರತ ತಂಡಕ್ಕೆ ಆಯ್ಕೆಯಾಗಿದ್ದೇನೆಂಬ ಸುದ್ದಿ ಕೇಳಿ ತುಂಬಾ ಖುಷಿಯಾಯಿತು. ಆ ವೇಳೆ ಒಂದು ಕಡೆ ಕುಳಿತು ಯೋಚನೆ ಮಾಡಿದಾಗ ಹಲವು ವಿಷಯಗಳು ನನ್ನ ಮನಸಿಗೆ ನಾಟಿದವು," ಎಂದು ಮುಂಬೈ ಬ್ಯಾಟ್ಸ್‌ಮನ್‌ ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3dEUdxs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...