ಅನರ್ಹ ಬಿಪಿಎಲ್‌ ಕಾರ್ಡ್‌ ಹಿಂಪಡೆವ ನಿರ್ಧಾರ; ಸಾರ್ವಜನಿಕರಿಂದ ತೀವ್ರ ಆಕ್ರೋಶ!

ಪ್ರಕಾಶ್‌ ಜಿ.,ಹಾಸನ ಹಾಸನ: ಸ್ವಯಂ ಪ್ರೇರಿತವಾಗಿ ಅನರ್ಹ ಬಿಪಿಎಲ್‌ ಕಾರ್ಡ್‌ ಹಿಂದಿರುಗಿಸಲು ಆಹಾರ ಮತ್ತು ನಾಗರಿಕ ಸಚಿವರು ನೀಡಿರುವ ಮಾ.31ರ ಗಡುವಿಗೆ ಜನಪ್ರತಿನಿಧಿಗಳು ಹಾಗೂ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಜನೋಪಯೋಗಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಸರಕಾರವೇ ನೀಡಿರುವ ಬಿಪಿಎಲ್‌ ಕಾರ್ಡ್‌ ಅನ್ನು ಈಗ ಅರ್ಹ, ಅನರ್ಹ ಎಂದು ವಿಂಗಡಿಸುವುದು ಎಷ್ಟರಮಟ್ಟಿಗೆ ಸರಿ? ನಿಯಮಗಳು ಪಾಲನೆ ಬಳಿಕವಷ್ಟೇ ಅಲ್ಲವೇ ಬಿಪಿಎಲ್‌ ಕಾರ್ಡ್‌ ಕೊಟ್ಟಿರುವುದು. ಈಗ ಅನರ್ಹ ಎನ್ನುವುದಾದರೆ ಕಾರ್ಡ್‌ ಮಂಜೂರು ಮಾಡಿದ ಅಧಿಕಾರಿಗಳು ಜವಾಬ್ದಾರರಲ್ಲವೇ? ಅನರ್ಹ ಎಂಬುದಕ್ಕಿಂತ ರಾಜಕೀಯ ದುರುದ್ದೇಶದಿಂದ ಹಿಂಪಡೆದು ಜನತೆಗೆ ವಂಚಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಆಕ್ರೋಶದ ನುಡಿಗಳು ಪಡಿತರ ಕಾರ್ಡ್‌ದಾರರಿಂದ ವ್ಯಕ್ತವಾಗಿದೆ. ಇದರ ಬದಲು ಆಹಾರ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮ ತಪ್ಪಿಸಿ ಎಂಬ ಆಗ್ರಹ ಕೇಳಿಬಂದಿದೆ. ಜಿಲ್ಲೆಯಲ್ಲಿ 4,12,289 ಬಿಪಿಎಲ್‌ ಕಾರ್ಡ್‌(ಪ್ರಸ್ತುತ ಪ್ರಿಯಾರಿಟಿ ಹೌಸ್‌ ಹೊಲ್ಡ್‌) ಇದ್ದು, 12,89,650 ಫಲಾನುಭವಿಗಳಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅನರ್ಹ ಕಾರ್ಡ್‌ ಯಾವುದು ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕು ಸಾರ್‌ ಎನ್ನುತ್ತಾರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು. ಈ ಹಿಂದೆಯೂ ಅನರ್ಹ ಕಾರ್ಡ್‌ ಹಿಂತಿರುಗಿಸಿ ಎಂದಾಗ ಒಂದಿಷ್ಟು ಜನ ಇದರ ಸಹವಾಸವೇ ಬೇಡ ಎಂದು ಹಿಂತಿರುಗಿಸಿದ್ದರು. ಆಹಾರ ಇಲಾಖೆ ಅಧಿಕಾರಿಗಳು ಒಂಬತ್ತು ಸಾವಿರದಷ್ಟು ಅನರ್ಹ ಕಾರ್ಡ್‌ ಎಂದು ರದ್ದು ಮಾಡಿದ್ದರು. ಇದೀಗ ಇನ್ನೂ ಅನರ್ಹ ಕಾರ್ಡ್‌ಗಳಿವೆ ವಾಪಸ್‌ ಕೊಡಿ ಎಂಬ ಆದೇಶಕ್ಕೆ ಜನ ಗಮನಹರಿಸಿಲ್ಲ. ಹೀಗಾಗಿ ಮತ್ತೆ ಅಧಿಕಾರಿಗಳೇ ಅನರ್ಹ ಕಾರ್ಡ್‌ ರದ್ದು ಮಾಡುವ ಕೆಲಸಕ್ಕೆ ಮುಂದಾಗಬೇಕಿದೆ. ಇದಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳ ಆಕ್ರೋಶಕ್ಕೆ ಒಳಗಾಗಬೇಕಾದಿತು ಎಂಬ ಭಯವೂ ಅಧಿಕಾರಿಗಳನ್ನು ಕಾಡುತ್ತಿದೆ. ಅಕ್ರಮಗಳ ಸರಮಾಲೆ2020ರ ಒಂದು ವರ್ಷದಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 256 ಕ್ವಿಂಟಾಲ್‌ ಅಕ್ಕಿ , ಆಲೂರು, ಅರಕಲಗೂಡು, ಅರಸೀಕೆರೆ ಗಂಡಸಿ ತಾಲೂಕಿನಲ್ಲಿ ವಶಪಡಿಸಿಕೊಳ್ಳಲಾಗಿದೆ. ಗೋದಾಮು ವ್ಯವಸ್ಥಾಪಕನನ್ನು ಅಮಾನತು ಮಾಡಲಾಗಿದೆ. ಇಷ್ಟೆಲ್ಲ ಆದರೂ ಅಕ್ರಮ ನಿಯಂತ್ರಣಕ್ಕೆ ಬಂದಿದೆಯೇ ಎಂದರೆ ಇನ್ನೂ ಕದ್ದುಮುಚ್ಚಿ ದಂಧೆ ನಡೆಯುತ್ತಲೇ ಇದೆ. ನ್ಯಾಯಬೆಲೆ ಅಂಗಡಿ ಪಡಿತರ ಎಂಬುದನ್ನು ಮರೆಮಾಚಲು ಯಾವುದೋ ಹೆಸರಿನ ಮುದ್ರೆ ಹಾಕಿದ ಚೀಲಕ್ಕೆ ಪಡಿತರ ತುಂಬಿ ಸಾಗಿಸುವ ಜಾಲವೂ ಇದೆ. ಅಂತಹ ಅಕ್ರಮವನ್ನು ಜಿಲ್ಲಾ ಕೇಂದ್ರದಲ್ಲೇ ಪತ್ತೆಹಚ್ಚಿ ಸುದ್ದಿಯ ಮೂಲಕ ಸದ್ದು ಮಾಡಲಾಯಿತಾದರೂ ನಂತರ ಏನಾಯಿತು ಎಂಬುದು ಮಾತ್ರ ಇಲಾಖಾ ಅಧಿಕಾರಿಗಳಿಗೆ ಗೊತ್ತು. ಮೊದಲು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ದುಬಾರಿ ದುನಿಯಾ ಕೊರೊನಾ ಲಾಕ್‌ಡೌನ್‌ನಿಂದ ಅದೆಷ್ಟೋ ಜನ ಇದ್ದ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ದುಬಾರಿ ದಿನಗಳಲ್ಲಿ ಬದುಕು ನಡೆಸುವುದೇ ಕಷ್ಟವಾಗಿದೆ. ಎಲ್ಲ ಪದಾರ್ಥಗಳ ಬೆಲೆಯೂ ಗಗನಮುಖಿಯಾಗಿದೆ. ಸಾಲ ಪಡೆಯಲು ಆದಾಯ ತೆರಿಗೆ ವಿವರ ನೀಡುವುದು ಅನಿವಾರ್ಯ. ತೆರಿಗೆ ಪಾವತಿಸದಿದ್ದರೂ, ಐಟಿ ಫೈಲ್‌ ಮಾಡುವವರಿಗೆ ಕಾರ್ಡ್‌ ಇಲ್ಲ ಎಂದರೆ ಯಾವ ನ್ಯಾಯ. ಸಾಲ ಮಾಡಿ ಬಡ್ಡಿ ಕಟ್ಟುತ್ತಿರುತ್ತೇವೆ ಇದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕಲ್ಲವೇ ಎನ್ನುತ್ತಾರೆ ಹಾಸನ ರಮೇಶ್‌. ಕೇರಳದಲ್ಲಿ ಬೇಡಿಕೆ ಪಡಿತರ ಅಕ್ಕಿಗೆ ಅಡುಗೆ ಎಣ್ಣೆ ಹಾಕಿ ಪಾಲೀಶ್‌ ಮಾಡಿದರೆ ಮತ್ತಷ್ಟು ಹೊಳಪು ಬರುತ್ತದೆ. ಇಂತಹ ಅಕ್ಕಿಗೆ ಕೇರಳದಲ್ಲಿ ವ್ಯಾಪಕ ಬೇಡಿಕೆ ಇದ್ದು, ಯಾವುದೋ ಬ್ರಾಂಡ್‌ ಚೀಲದಲ್ಲಿ ತುಂಬಿ, ನಕಲಿ ದಾಖಲೆ ಮೂಲಕ ಸಾಗಣೆ ಮಾಡಲಾಗುತ್ತದೆ ಎಂಬ ಆರೋಪವೂ ಇದೆ. ಬಿಪಿಎಲ್‌ ಕಾರ್ಡ್‌ ಕುಟುಂಬಕ್ಕೆ ನೀಡುವಾಗ ಎಲ್ಲ ಮಾನದಂಡವನ್ನು ಪಾಲಿಸಲಾಗಿದೆ. ಅಧಿಕಾರಿಗಳು ಪರಿಶೀಲಿಸಿಯೇ ನೀಡಿದ್ದಾರೆ. ಈಗ ಅನರ್ಹ ಕಾರ್ಡ್‌ಗಳು ಎಂಬುದು ಸರಿಯೇ? ಆದಾಯಕ್ಕಿಂತ ಖರ್ಚು ಹೆಚ್ಚಿರುವ ಸಂದರ್ಭದಲ್ಲಿ ಕಾರ್ಡ್‌ ರದ್ದು ಮಾಡಿದರೆ ಸಮಸ್ಯೆಯಾಗುತ್ತದೆ. ಸುವರ್ಣ ಗೃಹಿಣಿ ಹಾಸನ ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಸ್ವಯಂ ಪ್ರೇರಿತವಾಗಿ ಯಾರು ಹಿಂದಿರುಗಿಸುತ್ತಿಲ್ಲ. ಸರಕಾರದ ಗಡುವು ಮುಗಿದ ಬಳಿಕ ನಾವೇ ಪತ್ತೆಹಚ್ಚಿ ಕ್ರಮ ಕೈಗೊಳ್ಳುತ್ತೇವೆ. ಪುಟ್ಟಸ್ವಾಮಿ ಆಹಾರ ಇಲಾಖೆ ಉಪ ನಿರ್ದೇಶಕ ಹಾಸನ


from India & World News in Kannada | VK Polls https://ift.tt/3uo95G8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...