ಬೆಂಗಳೂರು: ಕಳೆದ ವಾರ ಬೀನ್ಸ್, ಮೆಣಸಿನಕಾಯಿ, ಹೀರೇಕಾಯಿ, ಹಾಗಲಕಾಯಿ, ನುಗ್ಗೆಕಾಯಿ, ಮೂಲಂಗಿ ಸೇರಿದಂತೆ ನಾನಾ ತರಕಾರಿಗಳ ದರದಲ್ಲಿ ಏರಿಕೆಯಾಗಿತ್ತು. ಕೆ.ಜಿ.ಗೆ ಬೀನ್ಸ್ 60 ರೂ.ವರೆಗೆ ತಲುಪಿತ್ತು. ಇದೀಗ ಇಳಿಕೆಯಾಗಿದ್ದು, ಕೆ.ಜಿ.ಗೆ 50-55 ರೂ. ಇದೆ. ಕೆಲವೆಡೆ 40-50 ರೂ.ಗೆ ಮಾರಾಟವಾಗುತ್ತದೆ. ಅಷ್ಟೇ ಅಲ್ಲ, ಕ್ಯಾರಟ್, ಬೀಟ್‌ರೂಟ್ ಹೀಗೆ ನಾನಾ ತರಕಾರಿಗಳ ದರದಲ್ಲಿ ಇಳಿಕೆಯಾಗಿದೆ. ಎಲ್ಲಾ ಬಗೆಯ ಸೊಪ್ಪುಗಳ ಇಳಿಕೆಯಾಗಿದ್ದು, ಗ್ರಾಹಕರ ಕೈಗೆಟುವಂತಿವೆ. ಸುಮಾರು ಎರಡು ತಿಂಗಳ ಹಿಂದೆ ಮೆಂತ್ಯ ಸೊಪ್ಪು, ಸಬ್ಬಕ್ಕಿ ಒಂದು ಕಂತೆಗೆ 20-30 ರೂ. ಇತ್ತು. ಇದೀಗ 15 ರೂ. ಗೆ ದೊರೆಯುತ್ತಿದೆ. ಅಷ್ಟೇ ಅಲ್ಲ, ದಂಟಿನ ಸೊಪ್ಪು, ಪಾಲಕ್ ಸೊಪ್ಪು ಕೂಡ 20 ರೂ. ಇದ್ದುದು ಇದೀಗ 10-15 ರೂ.ಗೆ ದೊರೆಯುತ್ತಿವೆ. ಒಂದು ವಾರದಿಂದ ಇಳಿಕೆ ಎರಡು ವಾರಗಳ ಹಿಂದೆ ತರಕಾರಿಗಳ ದರದಲ್ಲಿ ಏರಿಕೆಯಾಗಿತ್ತು. ಆದರೆ ಇದೀಗ ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ತರಕಾರಿಗಳು ಬರುತ್ತಿವೆ. ಹೀಗಾಗಿ ಬೆಲೆಗಳಲ್ಲಿ ಇಳಿಕೆಯಾಗಿದೆ. ಬೀನ್ಸ್, ಟೊಮೇಟೊ, ಬದನೆಕಾಯಿ, ಮೆಣಸಿನಕಾಯಿ, ಬೆಂಡೆಕಾಯಿ ಸೇರಿದಂತೆ ಬಹುತೇಕ ತರಕಾರಿಗಳ ದರ ಇಳಿಕೆಯಾಗಿದ್ದು, ಎಲ್ಲಾ ತರಕಾರಿಗಳು ಸಗಟು ದರದಲ್ಲಿ ಕೆ.ಜಿ.ಗೆ 20ರಿಂದ 25ರೂ. ಮಿತಿಯಲ್ಲಿವೆ ಎಂದು ಕಲಾಸಿಪಾಳ್ಯ ಸಗಟು ಮಾರಾಟಗಾರರ ಸಂಘದ ಅಧ್ಯಕ್ಷ ಆರ್.ವಿ. ಗೋಪಿ ತಿಳಿಸಿದರು. ಈರುಳ್ಳಿ ದರದಲ್ಲಿ ಕೊಂಚ ಏರಿಕೆ ಈರುಳ್ಳಿ ಮತ್ತೆ ಏರಿಕೆಯಾಗಿದೆ. ಕಳೆದ ಐದಾರು ತಿಂಗಳ ಹಿಂದೆ ಈರುಳ್ಳಿ ದರ ಕೆ.ಜಿ.ಗೆ 100-150 ರೂ.ವರೆಗೆ ತಲುಪಿತ್ತು. ಹೊಸ ಬೆಳೆ ಬಂದ ನಂತರ ಕ್ರಮೇಣ ಇಳಿಕೆಯಾಗುತ್ತಾ ಬಂತು. ಮಹಾರಾಷ್ಟ್ರ, ವಿಜಯಪುರ, ಗದಗ ಮತ್ತಿತರ ಭಾಗಗಳಿಂದ ಯಥೇಚ್ಛವಾಗಿ ಈರುಳ್ಳಿ ಬೆಳೆ ಬಂತು. ಕೆಲ ಮಧ್ಯವರ್ತಿಗಳು ಸಂಗ್ರಹಿಸಿದ್ದ ಈರುಳ್ಳಿಯನ್ನು ಮಾರುಕಟ್ಟೆಗೆ ಹೊರಬಿಡಲಾಯಿತು. ಹೀಗಾಗಿ, 150 ರೂ. ದಾಟಿದ್ದ ಈರುಳ್ಳಿ 40-50 ರೂ.ಗೆ ಇಳಿಯಿತು. ಗ್ರಾಹಕರು ನಿಟ್ಟುಸಿರು ಬಿಡುವ ವೇಳೆಗೆ ಮತ್ತೆ ಈರುಳ್ಳಿ ದರ ಏರಿಕೆಯಾಗಿದೆ. ಚಿಲ್ಲರೆ ದರದಲ್ಲಿ ಕೆ.ಜಿ.ಗೆ 60 ರೂ. ತಲುಪಿದೆ. ಸಗಟು ದರದಲ್ಲಿ ಗುಣಮಟ್ಟದ ಈರುಳ್ಳಿ 35-45 ರೂ. ಇದೆ. ಸಾಧಾರಣ ಈರುಳ್ಳಿ 22ರಿಂದ 30 ರೂ. ಇದೆ. ಸಗಟು ದರದಲ್ಲಿ ತರಕಾರಿ (ಕೆ.ಜಿ.ಗಳಲ್ಲಿ)
- ಬೀನ್ಸ್ 20 ರೂ.
- ಕ್ಯಾರಟ್ 18-20 ರೂ.
- ಟೊಮೇಟೊ 15 ರೂ.
- ಹೀರೇಕಾಯಿ 20 ರೂ.
- ಹಸಿ ಮೆಣಸಿನಕಾಯಿ 30 ರೂ.
- ಈರುಳ್ಳಿ 40-45 ರೂ.
- ನುಗ್ಗೆಕಾಯಿ - 60 ರೂ.
- ಬೀಟ್ ರೂಟ್ 15 ರೂ.
- ಎಲೆಕೋಸು 15 ರೂ.
- ಹೂಕೋಸು 20-25 ರೂ.
- ಬಟಾಣಿ ನಾಟಿ 100 ರೂ.
from India & World News in Kannada | VK Polls https://ift.tt/3aEynbe