
ಚೆನ್ನೈ: ಕಳೆದ 2014 ರಿಂದ ಭಾರತ ತಂಡ ಫೀಲ್ಡಿಂಗ್‌ನಲ್ಲಿ ಸಾಕಷ್ಟು ಸುಧಾರಣೆಯಾಗಲು ಫೀಲ್ಡಿಂಗ್ ಕೋಚ್ ಪಾತ್ರ ಪ್ರಮುಖ. ಶ್ರೀಧರ್ ಕಾರ್ಯವೈಖರಿ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಹೆಡ್ ಕೋಚ್ ರವಿಶಾಸ್ತ್ರಿ ಹಲವು ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್ ಶ್ರೀಧರ್ ಅಡಿಯಲ್ಲಿ ರವೀಂದ್ರ ಜಡೇಜಾ ವಿಶ್ವ ಶ್ರೇಷ್ಠ ಫೀಲ್ಡರ್ ಆಗಿ ಗುರುತಿಸಿಕೊಂಡಿರುವುದು ಟೀಮ್ ಇಂಡಿಯಾ ಪಾಲಿಗೆ ಒಳ್ಳೆಯ ಬೆಳವಣಿಗೆಯಾಗಿದೆ. ಅತ್ಯುತ್ತಮ ಫೀಲ್ಡಿಂಗ್ ಕೋಚ್ ಆಗಿರುವ ಆರ್ ಶ್ರೀಧರ್, ಅತ್ಯಂತ ನಿರರ್ಗಳ ವ್ಯಕ್ತಿ. ಅವರು ಮಾತನಾಡುವಾಗ ಆಟಗಾರರು ತುಂಬಾ ಎಚ್ಚರದಿಂದ ಕೇಳಬೇಕಾದ ಅಗತ್ಯವಿರುತ್ತದೆ. ಭಾರತದ ಯಶಸ್ವಿ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್, ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ಶ್ಲಾಘಿಸಿದ್ದಾರೆ. ವಿಕೆಟ್ ಕೀಪಿಂಗ್ ಕೌಶಲದ ಮೇಲೆ ಹೆಚ್ಚಿನ ಕೆಲಸ ಮಾಡಲು ಪಂತ್, ಬ್ಯಾಟಿಂಗ್ ತ್ಯಾಗ ಮಾಡಿದ ಸಂದರ್ಭಗಳನ್ನು ವಿವರಿಸಿದ್ದಾರೆ. ಟೆಸ್ಟ್ ಸರಣಿಯಲ್ಲಿ ಕೆಲ ಸಂದರ್ಭಗಳನ್ನು ಹೊರತುಪಡಿಸಿ ವಿಕೆಟ್ ಕೀಪಿಂಗ್‌ನಲ್ಲಿ ಯಾರೂ ಅವರ ಕಡೆ ಬೆರಳು ತೋರಿಸದಂತೆ ನೋಡಿಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. "ಆಸ್ಟ್ರೇಲಿಯಾ ಪ್ರವಾಸದ ಬಹುತೇಕ ಸಮಯ ಪಂತ್ ವಿಕೆಟ್ ಕೀಪಿಂಗ್ ಕಡೆ ಹೆಚ್ಚಿನ ಗಮನ ಹರಿಸಿದ್ದರು. ತರಬೇತಿ ವೇಳೆ ಅರ್ಧ ಗಂಟೆ ಬ್ಯಾಟಿಂಗ್ ಅಭ್ಯಾಸ ನಡೆಸಿದರೆ, ಒಂದು ಗಂಟೆ ಕಾಲ ವಿಕೆಟ್ ಕೀಪಿಂಗ್ ಕಡೆ ಗಮನ ಹರಿಸುತ್ತಿದ್ದರು. ಈ ವಿಷಯ ಗೊತ್ತಿರುವ ಎಲ್ಲರಿಗೂ ಇದು ಗ್ರೇಟ್ ನ್ಯೂಸ್ ಆಗಲಿದೆ. ಯುವ ಆಟಗಾರ ವಿಕೆಟ್ ಕೀಪಿಂಗ್ ಮೇಲಿನ ಪ್ರಕ್ರಿಯೆ ಪ್ರಗತಿಯಲ್ಲಿದೆ," ಎಂದು ಆರ್ ಶ್ರೀಧರ್ ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಕನೆಕ್ಟೆಡ್ ಶೋನಲ್ಲಿ ತಿಳಿಸಿದ್ದಾರೆ. " ಅವರಲ್ಲಿ ಏನು ನೋಡಿದ್ದೀರಿ ಎಂಬುದಕ್ಕಿಂತ ಏನನ್ನು ಸ್ವೀಕರಿಸಿದ್ದೀರಿ ಎಂಬುದು ಮುಖ್ಯ. ಅವರು ನಿಮಗೆ ಹೃದಯಾಘಾತ ನೀಡಬಹುದು; ಅವರು ನಿಮಗೆ ಹೃದಯ ನೋವು ತರಿಸಬಹುದು; ಅವರು ನಿಮ್ಮ ಹೃದಯ ಒಡೆಯಬಹುದು, ಆದರೆ ನಿಮ್ಮ ಉಸಿರನ್ನು ತೆಗೆದುಕೊಂಡು ಹೋಗುವ ಕ್ಷಣಗಳನ್ನು ಸಹ ಅವರು ನಿಮಗೆ ನೀಡಬಹುದು. " ಎಂದರು. ಇತ್ತೀಚೆಗೆ ಮುಕ್ತಾಯವಾಗಿದ್ದ ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಮೂರನೇ ಹಾಗೂ ನಾಲ್ಕನೇ ಪಂದ್ಯಗಳಲ್ಲಿ ರಿಷಭ್ ಪಂತ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಸಿಡ್ನಿ ಟೆಸ್ಟ್ ದ್ವಿತೀಯ ಇನಿಂಗ್ಸ್‌ನಲ್ಲಿ 97 ರನ್ ಗಳಿಸುವ ಮೂಲಕ 407ರನ್ ಗುರಿ ಹಿಂಬಾಲಿಸಿದ ಭಾರತವನ್ನು ಗೆಲುವಿನ ಹಳಿಗೆ ತಂದಿದ್ದರು. ಆದರೆ, ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಸಮಾಪ್ತಿಯಾಗಿತ್ತು. ನಂತರ, ಬ್ರಿಸ್ಬೇನ್‌ನ ದಿ ಗಬ್ಬಾ ಅಂಗಳದಲ್ಲಿ ನಡದಿದ್ದ ಸರಣಿ ನಿರ್ಣಾಯಕ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಪಂತ್, ಅಜೇಯ 89 ರನ್ ಗಳಿಸಿದ್ದರು. ಕೆಳ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದ ಯುವ ಬ್ಯಾಟ್ಸ್‌ಮನ್ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು. ರಿಷಭ್ ಪಂತ್ ಪಾಲಿಗೆ ಸ್ಮರಣೀಯ ಸರಣಿ ಇದಾಗಿದೆ. 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ದೇಹದ ತೂಕ ಹೆಚ್ಚಾಗಿದ್ದರಿಂದ ನೆಟ್ಟಿಗರಿಂದ ರಿಷಭ್ ಪಂತ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಫಿಟ್ನೆಸ್ ಹಾಗೂ ಫಾರ್ಮ್ ಇಲ್ಲದ ಕಾರಣ ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ಸರಣಿಯಿಂದ ಪಂತ್ ಅವರನ್ನು ಕೈ ಬಿಡಲಾಗಿತ್ತು. ಆದರೆ, ಟೆಸ್ಟ್ ಸರಣಿಯಲ್ಲಿ ನಿರ್ಣಾಯಕ ಇನಿಂಗ್ಸ್ ಆಡುವ ಮೂಲಕ ಎಡಗೈ ಆಟಗಾರ ಮತ್ತೆ ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. "ಅವರು(ಪಂತ್) ತಂಡಕ್ಕೆ ಉತ್ತಮ ಪ್ಯಾಕೇಜ್. ಅತ್ಯಂತ ಸ್ಫೋಟಕ ಹಾಗೂ ನಿರ್ಭೀತ ಕ್ರಿಕೆಟಿಗರಲ್ಲಿ ಬಹುಶಃ ರಿಷಭ್ ಕೂಡ ಒಬ್ಬರು. ಜೊತೆಗೆ, ಅವರು ಎಡಗೈ ಆಟಗಾರರಾಗಿರುವುದರಿಂದ ಮಧ್ಯಮ ಕ್ರಮದಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತವೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ರಿಷಭ್ ಪಂತ್ ಟೀಮ್ ಇಂಡಿಯಾಗೆ ಅದ್ಭುತ ಪ್ಯಾಕೇಜ್," ಎಂದು ಆರ್ ಶ್ರೀಧರ್ ಗುಣಗಾನ ಮಾಡಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3ak7sAg