ಕೋಲ್ಕೊತ್ತಾ/ಹೊಸದಿಲ್ಲಿ: ಮುಖ್ಯಮಂತ್ರಿ ಸೋದರಳಿಯ ಸಂಸದ ಪತ್ನಿ ರುಜಾರಾ ಬ್ಯಾನರ್ಜಿಗೆ ಭಾನುವಾರ ಸಮನ್ಸ್ ನೀಡಿರುವುದಾಗಿ ವರದಿಯಾಗಿದೆ. ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ಸಮನ್ಸ್ ನೀಡಲು ಸಿಬಿಐ ತಂಡ ಬುಧವಾರ ಅಭಿಷೇಕ್ ಬ್ಯಾನರ್ಜಿ ನಿವಾಸಕ್ಕೆ ತೆರಳಿತ್ತು. ಈ ವೇಳೆ ಅವರ ಪತ್ನಿ ಮನೆಯಲ್ಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್‌ನ್ನು ಕುಟುಂಬಸ್ಥರ ಕೈಯಲ್ಲಿ ನೀಡಿ ತೆರಳಿದ್ದಾರೆ. ಆಕೆ ತಾನು ಯಾವಾಗ ಲಭ್ಯವಿದ್ದೇನೆ ಎಂದು ತಿಳಿಸಿದ ದಿನ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸುವುದಾಗಿ ಸಿಬಿಐ ಮೂಲಗಳು ತಿಳಿಸಿವೆ. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನ ನಾಯಕರಿಗೆ ಕಲ್ಲಿದ್ದಲು ಮಾಫಿಯಾದ ವ್ಯಕ್ತಿಗಳು ನಿಯಮಿತವಾಗಿ ಕಿಕ್‌ಬ್ಯಾಕ್ ಸಲ್ಲಿಸುತ್ತಿದ್ದರು ಎನ್ನುವುದು ಆರೋಪವಾಗಿದೆ. ತೃಣಮೂಲ ಕಾಂಗ್ರೆಸ್ ಯುವ ಘಟಕದ ಕಾರ್ಯದರ್ಶಿ ವಿನಯ್ ಮಿಶ್ರಾ ಮೂಲಕ ಈ ಹಣ ಸಂದಾಯವಾಗುತ್ತಿತ್ತು ಎನ್ನಲಾಗಿದೆ. ಅಭಿಷೇಕ್ ಬ್ಯಾನರ್ಜಿ ಇದೇ ಯುವ ಘಟಕದ ಅಧ್ಯಕ್ಷರಾಗಿದ್ದಾರೆ. ಈ ಸಂಬಂಧ ಡಿಸೆಂಬರ್ 31 ರಂದು ಸಿಬಿಐ ಅಧಿಕಾರಿಗಳು ವಿನಯ್ ಮಿಶ್ರಾ ನಿವಾಸದ ಮೇಲೆ ದಾಳಿ ನಡೆಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಮಿಶ್ರಾ ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಸಿಬಿಐ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿದೆ. ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿ.ಗೆ ಸೇರಿದ ಕುನುಸ್ಟೋರಿಯಾ ಮತ್ತು ಕಜೋರಿಯಾ ಕಲ್ಲಿದ್ದಲು ಗಣಿಗಳಿಂದ ಕಲ್ಲಿದ್ದಲು ಕಳ್ಳತನ ಮತ್ತು ಕಳ್ಳಸಾಗಣೆ ಆರೋಪಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರ್‌ನಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಈಸ್ಟರ್ನ್ ಕೋಲ್‌ಫೀಲ್ಡ್‌ಗೆ ಸೇರಿದ ಧನ್‌ಬಾದ್-ಅಸನ್ಸೋಲ್‌ನ ತೆರೆದ ಕಲ್ಲಿದ್ದಲು ಗಣಿಗಳಿಂದ ಕಲ್ಲಿದ್ದಲು ಕಳ್ಳತನಕ್ಕೆ ಸಂಬಂಧಿಸಿದ ತನಿಖೆಯೂ ದೀರ್ಘ ಕಾಲದಿಂದ ಬಾಕಿ ಉಳಿದಿದೆ. ಇಲ್ಲಿಂದ ಕಲ್ಲಿದ್ದಲು ತೆಗೆದು ಕಳ್ಳರು ಹೊರಗೆ ಮಾರುತ್ತಿದ್ದಾರೆ. ಇದರಿಂದ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಸಾವಿರಾರು ಕೋಟಿ ರೂ. ಆದಾಯ ನಷ್ಟವಾಗುತ್ತಿದೆ. ಹಲವು ಕಾಲದಿಂದ ಬಿಜೆಪಿಯು ಇದರ ಹಿಂದೆ ಡೈಮಂಡ್ ಹಾರ್ಬರ್ ಸಂಸದ ಅಭಿಷೇಕ್ ಬ್ಯಾನರ್ಜಿ ಇದ್ದಾರೆ ಎಂದು ಆರೋಪಿಸುತ್ತಾ ಬಂದಿದೆ. ಬಿಜೆಪಿಯು ಅಭಿಷೇಕ್‌ರನ್ನು ಕಲ್ಲಿದ್ದಲು ಕಳ್ಳ ಎಂದೂ ಕರೆಯುತ್ತಿದೆ. ಇದೀಗ ವಿಧಾನಸಭೆ ಚುನಾವಣೆಗೂ ಮುನ್ನ ಅವರ ಪತ್ನಿಗೆ ಸಮನ್ಸ್ ಜಾರಿಯಾಗಿದೆ. ಅಭಿಷೇಕ್ ಬ್ಯಾನರ್ಜಿಯನ್ನು ಮಮತಾ ಬ್ಯಾನರ್ಜಿಯ ಉತ್ತರಾಧಿಕಾರಿ ಎಂದುಕೊಳ್ಳಲಾಗಿದ್ದು, ಇತ್ತೀಚೆಗೆ ಅವರ ವಿರುದ್ಧ ಅಸಮಧಾನಗೊಂಡು ಹಲವರು ಪಕ್ಷವನ್ನೂ ತ್ಯಜಿಸಿದ್ದರು. ಇತ್ತೀಚೆಗೆ ಅಮಿತ್ ಶಾಗೆ ಸವಾಲೆಸೆದಿದ್ದ ಮಮತಾ ಬ್ಯಾನರ್ಜಿ ಮೊದಲು ಅಭಿಷೇಕ್‌ನನ್ನು ಸೋಲಿಸಿ, ನಂತರ ನನ್ನ ಬಳಿ ಬನ್ನಿ ಎಂದಿದ್ದರು. ಕೆಲ ದಿನಗಳ ಹಿಂದೆ ಅಭಿಷೇಕ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಅಮಿತ್ ಶಾಗೆ ಕೋಲ್ಕೊತ್ತಾದ ನ್ಯಾಯಾಲಯದಿಂದ ಸಮನ್ಸ್ ಕೂಡ ಜಾರಿಯಾಗಿತ್ತು. ಇದೀಗ ಅಭಿಷೇಕ್ ಪತ್ನಿಗೆ ಸಿಬಿಐ ಸಮನ್ಸ್ ನೀಡಿದೆ.
from India & World News in Kannada | VK Polls https://ift.tt/3bpzCdN