ಆಸ್ಟ್ರೇಲಿಯಾ ಪ್ರವಾಸಕ್ಕೆ ದ್ರಾವಿಡ್‌ ನೀಡಿದ್ದ ಸಲಹೆ ಬಹಿರಂಗಪಡಿಸಿದ ರಹಾನೆ!

ಹೊಸದಿಲ್ಲಿ: ಆಸ್ಟ್ರೇಲಿಯಾ ಪ್ರವಾಸಕ್ಕೂ ಮೊದಲು ಭಾರತ ತಂಡದ ಮಾಜಿ ನಾಯಕ ಹಾಗೂ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ ನಿರ್ದೇಶಕ ನೀಡಿದ್ದ ಸಲಹೆಯನ್ನು ಇದೀಗ ಬಹಿರಂಗ ಪಡಿಸಿದ್ದಾರೆ. ಹರ್ಷ ಬೋಗ್ಲೆ ಜತೆ ಸಂಭಾಷಣೆಯಲ್ಲಿ ಈ ವಿಷಯಗಳನ್ನು ಹಂಚಿಕೊಂಡ ರಹಾನೆ, ನೆಟ್ಸ್‌ನಲ್ಲಿ ಜಾಸ್ತಿ ಬ್ಯಾಟಿಂಗ್‌ ಮಾಡದಂತೆ ಹಾಗೂ ನಾಯಕತ್ವದ ಕಡೆ ಹೆಚ್ಚು ಗಮನ ಹರಿಸುವಂತೆ ರಾಹುಲ್ ದ್ರಾವಿಡ್‌ ಸಲಹೆ ನೀಡಿದ್ದರು ಎಂಬ ಅಂಶವನ್ನು ಬಹಿರಂಗಪಡಿಸಿದರು. ಅಡಿಲೇಡ್‌ ಟೆಸ್ಟ್ ಹೀನಾಯ ಸೋಲಿನ ಬಳಿಕ ಕಾಯಂ ನಾಯಕ ವಿರಾಟ್‌ ಕೊಹ್ಲಿ ಪಿತೃತ್ವ ರಜೆಯ ಮೇಲೆ ತವರಿಗೆ ಮರಳಿದ್ದರು. ಈ ಹಿನ್ನೆಲೆಯಲ್ಲಿ ಅಜಿಂಕ್ಯ ರಹಾನೆ ಇನ್ನುಳಿದ ಮೂರು ಪಂದ್ಯಗಳಲ್ಲಿ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದರು. ಅದರಂತೆ ಭಾರತ ತಂಡ ಮೆಲ್ಬೋರ್ನ್‌ನಲ್ಲಿ 8 ವಿಕೆಟ್‌ಗಳ ಜಯ, ಸಿಡ್ನಿಯಲ್ಲಿ ಡ್ರಾ ಹಾಗೂ ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಮೂರು ವಿಕೆಟ್‌ ಜಯ ಸಾಧಿಸಿತ್ತು. "ದುಬೈನಿಂದ ಆಸ್ಟ್ರೇಲಿಯಾಗೆ ಪ್ರಯಾಣ ಆರಂಭಿಸುವುದಕ್ಕೂ ಮುನ್ನ ರಾಹುಲ್‌ ಭಾಯ್‌ ನನಗೆ ಕರೆ ಮಾಡಿದ್ದರು. 'ಮೊದಲ ಪಂದ್ಯದ ಬಳಿಕ ನೀವೇ ತಂಡವನ್ನು ಮುನ್ನಡೆಸುವುದೆಂದು ನನಗೆ ತಿಳಿದಿದೆ, ಒತ್ತಡಕ್ಕೆ ಒಳಗಾಗಬೇಡಿ. ಏನೇ ಆಗಲಿ ತಲೆ ಕೆಡಿಸಿಕೊಳ್ಳಬೇಡಿ, ಮಾನಸಿಕವಾಗಿ ಬಲಿಷ್ಠವಾಗಿರಿ. ನೆಟ್ಸ್‌ನಲ್ಲಿ ತುಂಬಾ ಸಮಯ ಬ್ಯಾಟಿಂಗ್‌ ಮಾಡಬೇಡಿ' ಎಂದು ಹೇಳಿದ್ದರು," ಎಂದರು. "ರಾಹುಲ್‌ ಭಾಯ್‌ ನನ್ನ ಬ್ಯಾಟಿಂಗ್‌ ಅನ್ನು ತುಂಬಾ ಇಷ್ಟಪಡುತ್ತಾರೆ. 'ನೆಟ್ಸ್‌ನಲ್ಲಿ ಜಾಸ್ತಿ ಬ್ಯಾಟಿಂಗ್‌ ಮಾಡಬೇಡಿ, ನಿಮ್ಮ ತಯಾರಿ ತುಂಬಾ ಚೆನ್ನಾಗಿದೆ, ನಿಮ್ಮ ಬ್ಯಾಟಿಂಗ್‌ ಕೂಡ ಚೆನ್ನಾಗಿಯೇ ಇದೆ. ಹಾಗಾಗಿ ಯಾವುದೇ ಒತ್ತಡಕ್ಕೆ ಒಳಗಾಗಬೇಡಿ. ತಂಡವನ್ನು ಹೇಗೆ ಮುನ್ನಡೆಸಬೇಕೆಂಬ ಬಗ್ಗೆ ಯೋಚಿಸಿ, ಆಟಗಾರರಿಗೆ ವಿಶ್ವಾಸ ತುಂಬಿಸಿ, ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ,' ಎಂದು ದ್ರಾವಿಡ್‌ ಹೇಳಿದ್ದ ಮಾತು ನಿಜಕ್ಕೂ ಸಹಕಾರಿಯಾಯಿತು," ಎಂದು ರಹಾನೆ ತಿಳಿಸಿದರು. ಕಳೆದ ಎರಡು ವಾರಗಳ ಹಿಂದೆ , ಆಸ್ಟ್ರೇಲಿಯಾ ವಿರುದ್ಧ ಅವರದೇ ನೆಲದಲ್ಲಿ 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದು, ಸತತ ಎರಡನೇ ಬಾರಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಭಾರತದ ಐತಿಹಾಸಿಕ ಸಾಧನೆ ಬೆನ್ನಲ್ಲೆ ತಂಡದ ಬೆಂಚ್‌ ಸಾಮರ್ಥ್ಯ ಹೆಚ್ಚಿಸಿದ್ದ ಬ್ಯಾಟಿಂಗ್‌ ದಿಗ್ಗಜ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದರು. 19 ವಯೋಮಿತಿ ಭಾರತ ತಂಡ ಹಾಗೂ ಭಾರತ 'ಎ' ತಂಡಗಳಿಗೆ ರಾಹುಲ್‌ ದ್ರಾವಿಡ್‌ ಕೋಚ್‌ ಆಗಿದ್ದ ವೆಳೆ, ಹಲವಾರು ಯುವ ಪ್ರತಿಭೆಗಳನ್ನು ಬೆಳಕಿಗೆ ತಂದಿದ್ದರು. ಟೆಸ್ಟ್ ಸರಣಿಯಲ್ಲಿ ಮಯಾಂಕ್‌ ಅಗರ್ವಾಲ್‌, ಮೊಹಮ್ಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌, ಶುಭಮನ್‌ ಗಿಲ್, ರಿಷಭ್‌ ಪಂತ್‌, ನವದೀಪ್‌ ಸೈನಿ, ಹನುಮ ವಿಹಾರಿ, ಶಾರ್ದುಲ್‌ ಟಾಕೂರ್‌ ಸೇರಿದಂತೆ ಹಲವು ಸ್ಟಾರ್‌ ಆಟಗಾರರು ದಿ ವಾಲ್‌ ಗರಡಿಯಲ್ಲಿ ಪಳಗಿರುವ ಪ್ರತಿಭೆಗಳಾಗಿದ್ದಾರೆ. ಕಳೆದ ಪ್ರತ್ಯೇಕ ಸರಣಿಗಳನ್ನು ಗೆದ್ದು ಆತ್ಮ ವಿಶ್ವಾಸದಲ್ಲಿ ಬೀಗುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಫೆ. 5 ರಿಂದ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಈ ಹಿನ್ನೆಲೆಯಲ್ಲಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್‌ ಕಟ್ಟಲು ಉಭಯ ತಂಡಗಳು ಸಿದ್ದತೆ ನಡೆಸುತ್ತಿವೆ. ಕೊನೆಯ ಬಾರಿ ಭಾರತದ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದ ಇಂಗ್ಲೆಂಡ್‌, ಈ ಬಾರಿ ಸೇಡು ತೀರಿಸಿಕೊಳ್ಳುವ ಯೋಜನೆಯೊಂದಿಗೆ ಕಣಕ್ಕೆ ಇಳಿಯಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3pIcVqZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...