
ಸ್ಟೀವನ್ ರೇಗೊ ಮಂಗಳೂರು ಬೆಂಗಳೂರು: ರಾಜ್ಯ ಸರಕಾರ ಏಕಗವಾಕ್ಷಿ ಜಾರಿಗೆ ತಂದರೂ, ಸರ್ವರ್ ಸಮಸ್ಯೆಯಿಂದ ವಿದ್ಯಾರ್ಥಿಗಳನ್ನು ನಿರಂತರ ಪೀಡಿಸುತ್ತಿದೆ. ರಾಜ್ಯ ಸರಕಾರ 2019-20ನೇ ಶೈಕ್ಷಣಿಕ ವರ್ಷದಲ್ಲಿಯೇ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್‌ನ್ನು ಪರಿಚಯಿಸಿದ್ದರೂ, ಎಸ್‌ಸಿ/ಎಸ್‌ಟಿ ಹಾಗೂ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಸೀಮಿತಗೊಳಿಸಿತ್ತು. ಆದರೆ ಕಳೆದ ವರ್ಷದವರೆಗೆ ಇ-ಪಾಸ್ ತಂತ್ರಾಂಶದಲ್ಲಿಯೇ ಹಿಂದುಳಿದ ವರ್ಗದ ವಿದ್ಯಾರ್ಥಿಗಳ 'ವಿದ್ಯಾಸಿರಿ', ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಹಾಗೂ ಶುಲ್ಕ ವಿನಾಯಿತಿಗಳಿಗೆ ಅರ್ಜಿ ಆಹ್ವಾನಿಸುತ್ತಿದ್ದ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅರ್ಜಿ ಪ್ರಕ್ರಿಯೆಯನ್ನೂ ಈ ಬಾರಿ ಇದೇ ತಂತ್ರಾಂಶಕ್ಕೆ ಸೇರಿಸಲಾಗಿದೆ. ಇತ್ತೀಚೆಗೆ ಹೊಸದಾಗಿ ರಚನೆಗೊಂಡ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸಾಂದೀಪನಿ ಶಿಷ್ಯವೇತನ ಒದಗಿಸಲು ಜನವರಿ ಮಧ್ಯಭಾಗದಲ್ಲಿ ಅಧಿಸೂಚನೆ ಹೊರಡಿಸಿದ್ದು, ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿ ಫೆ.18ರಂದು ಕೊನೆಯ ದಿನವೆಂದು ಘೋಷಿಸಿದ್ದರೂ, ಮತ್ತೆ ಕೊನೆಯ ದಿನವನ್ನು ಮಾ.20ರವರೆಗೆ ಮುಂದುವರಿಸಿದೆ. ರಾಜ್ಯ ಸಮಾಜ ಕಲ್ಯಾಣ ಇಲಾಖೆ ಕೂಡ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಅಧಿಸೂಚನೆ ಹೊರಡಿಸಿದ್ದು, ಮಾ.15 ಅರ್ಜಿ ಸಲ್ಲಿಸಲು ಕೊನೆಯ ದಿನವೆಂದು ತಿಳಿಸಿದೆ. ಕಾಡುತ್ತಿದೆ ಪೋರ್ಟಲ್ ಕಾಲೇಜು ವಿದ್ಯಾರ್ಥಿಗಳು ರಾಜ್ಯ ಪೋರ್ಟಲ್‌ನಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು, ಇ-ದೃಢೀಕರಣ ಪೋರ್ಟಲ್‌ಗೆ ಲಾಗಿನ್ ಮಾಡಲು ಪ್ರಯತ್ನಿಸುತ್ತಿದ್ದರೂ ಆಗುತ್ತಿಲ್ಲ. 'ಸರ್ವರ್ ಬ್ಯುಸಿ ಇರಬಹುದೆಂದು ಮಧ್ಯರಾತ್ರಿಯಲ್ಲಿ ಪ್ರಯತ್ನಿಸಿದರೂ, ಲಾಗಿನ್ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ವಿದ್ಯಾರ್ಥಿ ದಿಶಾ ಶೆಟ್ಟಿ. ವಿದ್ಯಾರ್ಥಿವೇತನ ದೊರೆಯುತ್ತದೆ ಎಂಬ ಆಕಾಂಕ್ಷೆಯಲ್ಲಿ ವಿದ್ಯಾರ್ಥಿಗಳು ನಗರದ ಸೈಬರ್ ಕೇಂದ್ರಗಳಿಗೂ ಹಲವಾರು ಬಾರಿ ಭೇಟಿ ನೀಡಿದ್ದಾಯಿತು. ಎಲ್ಲೂ ಸರ್ವರ್ ಸರಿ ಇಲ್ಲ ಎಂಬ ನಿರಾಶೆಯ ಉತ್ತರವೇ ವಿದ್ಯಾರ್ಥಿಗಳಿಗೆ ಸಿಗುತ್ತಿದೆ. ಕೆಲವೊಂದು ವಿದ್ಯಾರ್ಥಿಗಳಿಗೆ ಇ-ದೃಢೀಕರಣ ಲಾಗಿನ್ ಸಾಧ್ಯವಾಗುತ್ತಿದ್ದರೂ, ದಾಖಲೆಗಳ ಅಪ್‌ಲೋಡ್ ವಿಭಾಗದಲ್ಲಿ ಕಾಲೇಜು ಶುಲ್ಕ ಕಟ್ಟಿದ ರಶೀದಿ ಹೊರತುಪಡಿಸಿ ಇತರ ಯಾವುದೇ ದಾಖಲೆಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ವಿದ್ಯಾರ್ಥಿ ಅಲ್ತಾಫ್. ಕೆಲವು ವಿದ್ಯಾರ್ಥಿಗಳಿಗೆ ಇ-ದೃಢೀಕರಣ ಪ್ರಕ್ರಿಯೆ ಮುಗಿಸಲು ಸಾಧ್ಯವಾಗಿದ್ದರೂ, ಮುಂದಿನ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಮುಂದಾದರೆ ಮತ್ತೆ ಹಲವು ತೊಡಕುಗಳು ಎದುರಾಗುತ್ತಿವೆ. ಸಿಇಟಿ ಮೂಲಕ ಎಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳಿಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ, ಸರಿಯಾದ ಸಿಇಟಿ ಸಂಖ್ಯೆ ನಮೂದಿಸಿದರೂ, ಮಾಹಿತಿ ಲಭ್ಯವಿಲ್ಲ ಎಂಬ ಕಾರಣದಿಂದ ಮುಂದಿನ ಹಂತಕ್ಕೆ ಹೋಗಲಾರದ ಪರಿಸ್ಥಿತಿ ಇದೆ ಎನ್ನುತ್ತಾರೆ ಅರ್ಜಿ ಸಲ್ಲಿಸಲು ಪ್ರಯತ್ನಿಸಿದ ವಿದ್ಯಾರ್ಥಿ ಯಶವಂತ್ ಮಂಗಳೂರು. ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ(ಎಸ್‌ಎಸ್‌ಪಿ) ಪೋರ್ಟಲ್‌ನಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಹಾಗೂ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿ ಒದಗಿಸಲಾಗಿದೆ. ಆದರೆ ಮೇಲಿನ ಯಾವುದೇ ವರ್ಗದವರಿಗೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರಲು ದೋಷಪೂರಿತ ತಂತ್ರಾಂಶ ಅಭಿವೃದ್ಧಿಯೇ ಕಾರಣ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತಂತ್ರಾಂಶವನ್ನು ಕೂಲಂಕಷವಾಗಿ ಪರಿಶೀಲಿಸಿ ದೋಷ ಸರಿಪಡಿಸಿದರೆ ಹಲವಾರು ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಗಲಿದೆ. ಶರತ್ ಆಳ್ವ ಕರಿಂಕ, ಶೈಕ್ಷಣಿಕ ಸಲಹೆಗಾರರು, ಕ್ರಸ್ಟ್
from India & World News in Kannada | VK Polls https://ift.tt/3pMpD7l