
ಮಡಹಳ್ಳಿ ಮಹೇಶ್ ಗುಂಡ್ಲುಪೇಟೆ ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನದಂಚಿನಲ್ಲಿ ತಲೆ ತಲಾಂತರದಿಂದ ಕೃಷಿ ಮಾಡುತ್ತಿದ್ದರೂ ಭೂಮಿಯ ಹಕ್ಕು ಪಡೆದುಕೊಳ್ಳಲು ಸಾಧ್ಯವಾಗದ ರೈತರಿಗೆ ಜಾರಿಯಿಂದ ಬೆಳೆಹಾನಿಯ ಪರಿಹಾರ ಸಿಗದಂತಾಗಿದೆ. ತಮ್ಮ ಜಮೀನಿಗೆ ಹೊಂದಿಕೊಂಡ ಪ್ರದೇಶದಲ್ಲಿ ಗಿಡ ತೆಗೆದು ಕೃಷಿ ಭೂಮಿ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ರೀತಿ ಬಿ ಖರಾಬಿನಲ್ಲಿ ಬರುವ ಸರಕಾರಿ ಭೂಮಿಯಲ್ಲಿ ಕೃಷಿ ಮಾಡುವ ರೈತರಿಂದ ಅರ್ಜಿ ಸ್ವೀಕರಿಸಿ, ನಿಬಂಧನೆಗಳಿಗೆ ಒಳಪಟ್ಟು ಸಾಗುವಳಿ ಚೀಟಿ ನೀಡಲಾಗುತ್ತದೆ. ಅದರಂತೆ ಬಂಡೀಪುರ ರಾಷ್ಟ್ರೀಯ ಉದ್ಯಾನದಂಚಿನಲ್ಲಿ ಸಾಕಷ್ಟು ರೈತರಿಗೆ ಮಂಜೂರು ಸಿಕ್ಕಿದೆ. ಆದರೆ ಈ ಬಗ್ಗೆ ತಿಳಿಯದೇ ತಮ್ಮ ಪಾಡಿಗೆ ಕೃಷಿ ಮಾಡುತ್ತಿರುವ ನೂರಾರು ರೈತರ ಜಮೀನುಗಳು ಅರಣ್ಯ ಪ್ರದೇಶಕ್ಕೆ ಸೇರಿವೆ. ಅರಣ್ಯ ಭೂಮಿಯನ್ನು ಡಿನೊಟೀಫಿಕೇಷನ್ ಮಾಡಲು ನಿಯಮಗಳು ಅಡ್ಡಿಯಾಗಿವೆ. ಹೀಗಾಗಿ ಕೃಷಿ ಭೂಮಿಯ ಹಕ್ಕು ರೈತರಿಗೆ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಈ ನಡುವೆ ಅರಣ್ಯ ಇಲಾಖೆ ಇ-ಪರಿಹಾರ ಯೋಜನೆಯನ್ನು ಜಾರಿ ಮಾಡಿದೆ. ಬೆಳೆ ಹಾನಿ ಪ್ರದೇಶಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಜಿಪಿಎಸ್ ಸರ್ವೇ ಮಾಡಿ, ಪರಿಹಾರಕ್ಕೆ ಅರ್ಜಿ ಶಿಫಾರಸು ಮಾಡಬೇಕು. ಆದರೆ ಬೆಳೆ ಹಾನಿಯಾದ ಪ್ರದೇಶದಲ್ಲಿ ಜಿಪಿಎಸ್ ಸರ್ವೇ ಮಾಡುವ ಯಂತ್ರ ಅರಣ್ಯ ಭೂಮಿ ಎಂದು ತೋರಿಸುವ ಕಾರಣ ಕಂಪ್ಯೂಟರ್‌ನಲ್ಲಿ ಅರ್ಜಿ ಸಲ್ಲಿಕೆ ರಿಜೆಕ್ಟ್ ಎಂದು ತೋರಿಸುತ್ತಿದೆ. ಹೀಗಾಗಿ ರೈತರಿಗೆ ಬೆಳೆ ಹಾನಿಯಾದರೂ ಪರಿಹಾರ ಸಿಗುತ್ತಿಲ್ಲ. ಬೇಸರತಲೆ ತಲಾಂತರದಿಂದಲೂ ನಾವು ಕಾಡಂಚಿನ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದೇವೆ. ಕುಟುಂಬದಲ್ಲಿ ಮಾಡಿಕೊಂಡ ವಿಭಾಗದಂತೆ ಜಮೀನುಗಳು ನಮಗೆ ಬಂದಿವೆ. ಕೃಷಿಯೇ ನಮಗೆ ಜೀವನಾಧಾರ. ಈ ರೀತಿ ಇರುವಾಗ ಅರಣ್ಯಭೂಮಿ ಎಂಬ ಕಾರಣ ನೀಡಿ ನಮ್ಮಿಂದ ಸಾಗುವಳಿ ಚೀಟಿ ನೀಡಲು ಅರ್ಜಿ ಸ್ವೀಕರಿಸುತ್ತಿಲ್ಲ. ಆದರೆ ನಮ್ಮ ಜಮೀನುಗಳ ಪಕ್ಕದಲ್ಲಿ ಹೊರ ಜಿಲ್ಲೆಗಳಿಂದ ಬಂದವರಿಗೆ ಸಾಗುವಳಿ ಮಂಜೂರಾಗಿದೆ. ತಾಂತ್ರಿಕ ಕಾರಣ ನಮಗೆ ತಿಳಿದಿಲ್ಲ. ನಮಗೆ ಜಮೀನಿನ ಹಕ್ಕು ಕೊಡಿಸಬೇಕು ಎಂಬುದು ರೈತರಾದ ನಾಗನಾಯಕ, ಸಿದ್ದೇಗೌಡ, ಚಿಕ್ಕಮಾದನಾಯಕ, ಮಹದೇವಯ್ಯ ಮತ್ತಿತರ ಒತ್ತಾಯ. ನಷ್ಟಓಂಕಾರ ಅರಣ್ಯ ವಲಯದಲ್ಲಿ ಮೇವಿನ ಅಲಭ್ಯತೆ ಮತ್ತು ನುಗು ಇತರೆ ಸಂರಕ್ಷಿತ ಅರಣ್ಯ ಪ್ರದೇಶಗಳಿಂದ ಬರುವ ಕಾಡಾನೆಗಳು ಕಾಡಂಚಿನ ನಮ್ಮ ಜಮೀನುಗಳಿಗೆ ಆಹಾರ ಅರಸಿ ಬರುವುದು ಸಾಮಾನ್ಯವಾಗಿದೆ. ಅರಣ್ಯ ಇಲಾಖೆ ಮಾಡಿರುವ ಕಂದಕ ನಿರ್ಮಾಣ, ಸೋಲಾರ್ ಬೇಲಿ ಮತ್ತು ನಾವು ಮಾಡಿಕೊಂಡ ಸೋಲಾರ್ ವಿದ್ಯುತ್ ಬೇಲಿ ಕಾಡಾನೆಗಳಿಗೆ ಲೆಕ್ಕವಿಲ್ಲದಂತಾಗಿದೆ. ಹೀಗಾಗಿ ಕಾಡಾನೆಗಳ ನಿರಂತರ ದಾಳಿಯಿಂದ ಹೆಚ್ಚಾಗಿ ಕಾಡಂಚಿನ ರೈತರಾದ ನಾವು ಬೆಳೆ ನಷ್ಟ ಅನುಭವಿಸುತ್ತಿದ್ದೇವೆ. ಇತರೆ ಆಸ್ತಿ, ಪಾಸ್ತಿಗಳಿಗೂ ಹಾನಿ ಆಗುತ್ತಿದೆ. ಹಲವು ಸಂದರ್ಭ ಕಾಡಾನೆಗಳ ದಾಳಿಯಿಂದ ರೈತರು ಗಾಯಗೊಂಡಿದ್ದೇವೆ. ಪ್ರಾಣಾಪಾಯಗಳು ಸಂಭವಿಸಿದ ಉದಾಹರಣೆಗಳಿವೆ. ಕುಂದಕೆರೆ, ಮದ್ದೂರು ಅರಣ್ಯ ವಲಯದಲ್ಲೂ ಕಾಡಾನೆ ಉಪಟಳ ಇದೆ. ಇಷ್ಟೆಲ್ಲಾ ಸಮಸ್ಯೆ ನಡುವೆ ಬೆಳೆ ಹಾನಿಗೆ ಪರಿಹಾರ ಸಿಗದಿರುವುದು ರೈತರನ್ನು ಚಿಂತೆಗೀಡಾಗುವಂತೆ ಮಾಡಿದೆ. ಆತ್ಮಹತ್ಯೆಗೆ ಯತ್ನಈ ನಡುವೆ ಕುಂದಕೆರೆ ಅರಣ್ಯ ವಲಯ ವ್ಯಾಪ್ತಿಯ ಉಪಕಾರ ಕಾಲನಿ ರೈತ ಬೆಳ್ಳಯ್ಯ ಬೆಳೆ ಹಾನಿಗೆ ಪರಿಹಾರ ನೀಡಲು ತಾಂತ್ರಿಕ ಸಮಸ್ಯೆ ಅಡ್ಡಿಯಾದ ಕಾರಣ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದೂ ನಡೆದಿದೆ. ಆದ್ದರಿಂದ ಇ-ಪರಿಹಾರ ವ್ಯವಸ್ಥೆ ರದ್ದು ಮಾಡಿ ಹಿಂದೆ ಇದ್ದಂತೆ ಮ್ಯಾನುವಲ್‌ನಲ್ಲಿ ಪರಿಹಾರ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಕಾಡು ಪ್ರಾಣಿಗಳ ದಾಳಿಯಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸಕಾಲದಲ್ಲಿ ಸೂಕ್ತ ಪ್ರಮಾಣದ ಪರಿಹಾರ ಸಿಗಬೇಕು ಎಂದು ಸರಕಾರ ಇ-ಪರಿಹಾರ ವ್ಯವಸ್ಥೆ ಜಾರಿ ಮಾಡಿದೆ. ಜಿಪಿಎಸ್ ಸರ್ವೇ ಸಂದರ್ಭದಲ್ಲಿ ಅರಣ್ಯಭೂಮಿ ಎಂದು ತೋರಿಸಿದರೆ ಪರಿಹಾರ ನೀಡಲು ತಾಂತ್ರಿಕ ಸಮಸ್ಯೆ ಅಡ್ಡಿಯಾಗುತ್ತಿದೆ. ಇದಕ್ಕೆ ನಮ್ಮ ಹಂತದಲ್ಲಿ ಪರಿಹಾರ ಕಷ್ಟ. ಎಸ್.ಆರ್.ನಟೇಶ್, ಹುಲಿ ಯೋಜನೆ ನಿರ್ದೇಶಕರು, ಬಂಡೀಪುರ
from India & World News in Kannada | VK Polls https://ift.tt/3sjV2zI