ದೇಹಕ್ಕೆ ತಂಪು, ಬಿಸಿ ನೀಡುವ ಜಾಕೆಟ್‌: ಗಡಿ ಕಾಯುವ ಯೋಧರಿಗೆ ವರದಾನವಾದ ಆವಿಷ್ಕಾರ!

ನಾಗಪ್ಪ ನಾಗನಾಯಕನಹಳ್ಳಿ, ಬೆಂಗಳೂರು ಬೆಂಗಳೂರು: ದೇಶದ ಗಡಿಯಲ್ಲಿ ರಕ್ತ ಹೆಪ್ಪುಗಟ್ಟಿಸುವ ಚಳಿ, ಸುಡುವ ಬಿಸಿಲು ಮತ್ತು ಮಳೆಯನ್ನೂ ಲೆಕ್ಕಿಸದೆ ಹಗಲಿರುಳು ಕಾರ್ಯನಿರ್ವಹಿಸುವ ಯೋಧರಿಗಾಗಿಯೇ ವಿಶೇಷ ಜಾಕೆಟ್‌ಗಳನ್ನು ಹೊಸದಿಲ್ಲಿ ಮೂಲದ ಕಂಪನಿಯೊಂದು ಸಿದ್ಧಪಡಿಸಿದೆ. ಈ ಜಾಕೆಟ್‌ಗಳು ಏರ್‌ ಶೋ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ. ತುಸು ಹೆಚ್ಚು ಉಷ್ಣಾಂಶ, ಚಳಿಯನ್ನು ತಡೆದುಕೊಳ್ಳುವ ಶಕ್ತಿ ನಮಗಿಲ್ಲ. ಆದರೆ, 50 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ, ಮೈನಸ್‌ 40 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಉಷ್ಣಾಂಶವಿರುವ ಪ್ರದೇಶಗಳಲ್ಲಿ ದೇಶದ ರಕ್ಷಣೆಗೆ ನಿಂತಿರುವ ಸೈನಿಕರ ಸ್ಥಿತಿ ಊಹಿಸಿಕೊಳ್ಳುವುದೂ ಕಷ್ಟ. ಇಂಥ ಕಡೆ ಕೆಲಸ ಮಾಡುವ ಯೋಧರು ನಾನಾ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಆದಾಗ್ಯೂ, ಎದೆಗುಂದದೆ ಉಗ್ರಗಾಮಿಗಳನ್ನು ಸದೆಬಡಿದು ಜನಸಾಮಾನ್ಯರು ನಿಶ್ಚಿಂತೆಯಿಂದ ಬದುಕುವಂತೆ ನೋಡಿಕೊಳ್ಳುತ್ತಿದ್ದಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯ ಸವಾಲುಗಳನ್ನು ಎದುರಿಸಿ ಕಾರ್ಯನಿರ್ವಹಿಸುತ್ತಿರುವ ಯೋಧರಿಗಾಗಿಯೇ ಕಂಪೆನಿಯು 'ಓಜಸ್ವಿ' ಎಂಬ ಜಾಕೆಟ್‌ಗಳನ್ನು ತಯಾರಿಸಿ, ಭಾರತೀಯ ಸೇನೆಗೆ ಪೂರೈಸುತ್ತಿದೆ. ಬಿಸಿಲ ಪ್ರದೇಶಗಳಲ್ಲಿ ತಂಪು ನೀಡುವ, ಹಿಮ ಸುರಿಯುವ ಪ್ರದೇಶಗಳಲ್ಲಿ ಮೈ ಬಿಸಿ ಮಾಡುವ, ಮಳೆ ಮತ್ತು ಬೆಂಕಿಗೆ ಜಗ್ಗದ ಜಾಕೆಟ್‌ಗಳನ್ನು ಸಿದ್ಧಪಡಿಸಿಕೊಡಲಾಗುತ್ತಿದೆ. ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಸಿಯಾಚಿನ್‌ನಲ್ಲಿ ಮೈನಸ್‌ 40 ಡಿಗ್ರಿ ಸೆಲ್ಸಿಯಸ್‌, ಭಾರತ-ಪಾಕ್‌ ಗಡಿ ರಾಜಸ್ಥಾನದಲ್ಲಿ 50 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರುತ್ತದೆ. ಭಾರತ-ಚೀನಾ ಗಡಿಯ ಸಿಕ್ಕಿಂನಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ. ಹೀಗಾಗಿ, ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೈನಿಕರು ಶ್ವಾಸಕೋಶ, ಉಸಿರಾಟ, ಉಷ್ಣಾಘಾತ, ಚರ್ಮ ಸಂಬಂಧಿ ಕಾಯಿಲೆಗಳಿಂದ ನರಳುವಂತಾಗಿದೆ. ದೇಶದ ಜನರ ರಕ್ಷಣೆ ಮಾಡುತ್ತಿರುವ ಯೋಧರ ಆರೋಗ್ಯ ಕಾಪಾಡುವ ಸಲುವಾಗಿಯೇ ವಿಶೇಷ ಜಾಕೆಟ್‌ಗಳನ್ನು ಒದಗಿಸಲಾಗುತ್ತಿದೆ. ದೇಹಕ್ಕೆ ತಂಪು, ಬಿಸಿ ನೀಡುವ ಜಾಕೆಟ್‌ ಪ್ರತಿಯೊಂದು ಜಾಕೆಟ್‌ನಲ್ಲಿ 10 ಸಾವಿರ ಎಂಎಎಚ್‌ ಸಾಮರ್ಥ್ಯದ ಪವರ್‌ ಬ್ಯಾಂಕ್‌ ಇರುತ್ತದೆ. ಲೀಥಿಯಂ ಬ್ಯಾಟರಿ ಹೊಂದಿರುವ ಈ ಪವರ್‌ ಬ್ಯಾಂಕ್‌ ಅನ್ನು ಒಮ್ಮೆ ಚಾರ್ಜ್ ಮಾಡಿದರೆ 8 ತಾಸು ಬಳಸಬಹುದಾಗಿದೆ. ಮೊಬೈಲ್‌ ಅನ್ನು ಸಹ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಪವರ್‌ ಬ್ಯಾಂಕ್‌ನಿಂದ ಜಾಕೆಟ್‌ನ ಎರಡೂ ಬದಿಯಲ್ಲಿ ಅಳವಡಿಸಿರುವ ಪುಟ್ಟ ಫ್ಯಾನ್‌ಗಳು ಕಾರ್ಯನಿರ್ವಹಿಸಲಿವೆ. ಅತ್ಯಧಿಕ ತಾಪಮಾನವಿರುವ ಪ್ರದೇಶಗಳಲ್ಲಿ ಈ ಜಾಕೆಟ್‌ ಧರಿಸಿದರೆ, ದೇಹ ತಂಪಾಗುತ್ತದೆ. ಅದೇ ರೀತಿ ರಕ್ತ ಹೆಪ್ಪುಗಟ್ಟಿಸುವ ಪ್ರದೇಶಗಳಲ್ಲಿ ಬಳಸಲು ದೇಹವನ್ನು ಬಿಸಿ ಮಾಡುವಂತಹ ಜಾಕೆಟ್‌ಗಳನ್ನೂ ತಯಾರಿಸಲಾಗಿದೆ. ಅಲ್ಲದೆ, ಎಷ್ಟೇ ಮಳೆ ಸುರಿದರೂ ಒದ್ದೆಯಾಗದ ಮತ್ತು ಬೆಂಕಿಗೆ ಜಗ್ಗದ ಜಾಕೆಟ್‌ಗಳನ್ನೂ ಸಾಹು ಗ್ಲೋಬಲ್‌ ಕಂಪನಿ ಸಿದ್ಧಪಡಿಸುತ್ತಿದೆ. ಈ ಜಾಕೆಟ್‌ಗಳ ಬೆಲೆಯು 2 ಸಾವಿರ ರೂ. ನಿಂದ 5 ಸಾವಿರ ರೂ.ವರೆಗೆ ಇದೆ.


from India & World News in Kannada | VK Polls https://ift.tt/3oKhsbi

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...