
ನೋಯ್ಡಾ: ಉತ್ತರಪ್ರದೇಶದ ಹತ್ರಾಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾದ ಯುವತಿ ಸಾವನ್ನಪ್ಪುತ್ತಿದ್ದಂತೆ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಸಂತ್ರಸ್ತ ಯುವತಿಯ ಶವವನ್ನು ಕುಟುಂಬಿಕರಿಗೆ ನೋಡಲೂ ಬಿಡದೆ ಅಂತ್ಯ ಸಂಸ್ಕಾರ ಮಾಡಿದಲ್ಲದೇ, ನಿನ್ನೆ ಮೃತ ಯುವತಿಯ ಕುಟುಂಬಿಕರಿಗೆ ಸಾಂತ್ವಾನ ಹೇಳಲು ಹೊರಟಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯನ್ನು ಅರ್ಧದಲ್ಲೇ ತಡೆದು ವಾಪಸ್ ಕಳಿಸಿದ್ದಲ್ಲದೇ ರಾಹುಲ್ ಗಾಂಧಿಯನ್ನು ಪೊಲೀಸರು ಕೆಳಗೆ ತಳ್ಳಿದ್ದಕ್ಕೆ ಸರ್ಕಾರ ಮತ್ತು ಪೊಲೀಸರ ವಿರುದ್ಧ ಖಂಡನೆ ವ್ಯಕ್ತವಾಗಿತ್ತು. ಈ ಘಟನೆ ಖಂಡಿಸಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಮಧ್ಯೆ ಅಚ್ಚರಿಯ ವಿಷಯ ಅಂದ್ರೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜೊತೆ ಹತ್ರಾಸ್ ಭೇಟಿಗೆ ತೆರಳಿದ್ದ ದಿಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅವರ ಬಟ್ಟೆಯನ್ನು ಪೊಲೀಸರು ಹರಿದು ಹಾಕಿದ್ದಾರೆ ಎಂಬ ಗಂಭೀರ ಆರೋಪ ಉತ್ತರಪ್ರದೇಶ ಪೊಲೀಸರ ವಿರುದ್ಧ ಕೇಳಿಬಂದಿದೆ. ಈ ಆರೋಪವನ್ನು ಸ್ವತಃ ದಿಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಮೃತಾ ಧವನ್ ಅವರೇ ಮಾಡಿದ್ದು, ರಾಹುಲ್ ಗಾಂಧಿ ಮತ್ತು ಪಕ್ಷದ ಕಾರ್ಯಕರ್ತರು ಹತ್ರಾಸ್‌ಗೆ ತೆರಳದಂತೆ ದಾರಿಮಧ್ಯೆ ತಡೆದಾಗ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಪೊಲೀಸರು ಅಮೃತಾ ಧವನ್ ಅವರ ಬಟ್ಟೆಯನ್ನು ಹರಿದು ಹಾಕಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹರಿದ ಬಟ್ಟೆಯಲ್ಲಿ ಅಮೃತಾ ಧವನ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮತ್ತು ಉತ್ತರಪ್ರದೇಶ ಪೊಲೀಸರ ನಡೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಕಿಡಿಕಾರಿರೋ ದಿಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಮೃತಾ ಧವನ್, ಇದು ಮೋದಿ ಮತ್ತು ಯೋಗಿ ಆಡಳಿತದ ಪುರಾವೆಯಾಗಿದೆ. ನೀವು ಅಧಿಕಾರವನ್ನು ಬಳಸಲು ಪ್ರಯತ್ನಿಸಿದರೆ ಅಪರಾಧಿಗಳ ಮೇಲೆ ಪ್ರಯೋಗಿಸಿ. ನಮ್ಮ ಮೇಲೆ ದಾಳಿ ಮಾಡುವುದರಿಂದ ಏನು ಸಾಧಿಸಬಹುದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ದ್ರೌಪದಿಯ ವಸ್ತ್ರಾಪಹರಣ ಮತ್ತು ಸೀತಾಪಹರಣದ ಅಂತ್ಯ ಎಲ್ಲಿಗೆ ಬಂತು ಅನ್ನೋದನ್ನು ನೆನಪಿಡಿ. ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರೇ, ನಿಮಗೆ ನಾಚಿಕೆಯಾಗಬೇಕು ಎಂದು ಕಟುವಾಗಿ ಟೀಕಿಸಿದ್ದಾರೆ. ಇತ್ತ ಅಮೃತಾ ಧವನ್ ಅವರ ಆರೋಪವನ್ನು ಪೊಲೀಸರು ನಿರಾಕರಿಸಿದ್ದು, ಈ ಸಂಬಂಧ ಟ್ವೀಟ್ ಮಾಡಿರುವ ನೋಯ್ಡಾ ಡಿಸಿಪಿ ವೃಂದಾ ಶುಕ್ಲಾ, ಈ ಘಟನೆ ನಡೆದ ಸಂದರ್ಭದಲ್ಲಿ ನಾವು ಅಲ್ಲಿ ಇದ್ದೆವು. ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರು ಇದ್ದರು. ಮಹಿಳೆಯ ಘನತೆಗೆ ಧಕ್ಕೆ ತರುವಂತಹ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಹೇಳಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಉತ್ತರಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ನಾಲ್ವರು ಮೇಲ್ಜಾತಿ ಯುವಕರು ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಐಸಿಯುನಲ್ಲಿದ್ದ ಯುವತಿ ಕಳೆದೆರಡು ದಿನದ ಹಿಂದೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಳು.
from India & World News in Kannada | VK Polls https://ift.tt/3n8SzGD