ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಆರೋಪ ಕುರಿತು ಸಿಬಿಐ ದಾಖಲಿಸಿದ್ದ ಮತ್ತೊಂದು ಪ್ರಕರಣದಲ್ಲಿ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಅಲಿಖಾನ್‌ಗೆ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ. ಧಾರವಾಡ ಹೈಕೋರ್ಟ್ ಪೀಠದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿ, ಮನ್ಸೂರ್ ಖಾನ್ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಫೆ.12ರಿಂದ ಅನ್ವಯವಾಗುವಂತೆ ಜಾಮೀನು ಮಂಜೂರು ಆದೇಶ ನೀಡಿದರು. ಐಎಂಎ ವಂಚನೆ ಆರೋಪ ಸಂಬಂಧ ಮನ್ಸೂರ್ ಖಾನ್ ವಿರುದ್ಧ ಸಿಬಿಐ ಮೂರು ಮತ್ತು ಜಾರಿ ನಿರ್ದೇಶನಾಲಯ ಒಂದು ಪ್ರಕರಣ ದಾಖಲಿಸಿದ್ದವು. ಸಿಬಿಐ ದಾಖಲಿಸಿದ್ದ ಎರಡು ಮತ್ತು ಜಾರಿ ನಿರ್ದೇಶನದ ಒಂದು ಪ್ರಕರಣದಲ್ಲಿ ಹೈಕೋರ್ಟ್ ಈಗಾಗಲೇ ಜಾಮೀನು ನೀಡಿದೆ. ಇದೀಗ ಸಿಬಿಐ ದಾಖಲಿಸಿದ ಮೂರನೇ ಪ್ರಕರಣದಲ್ಲಿ ಜಾಮೀನು ಮಂಜೂರಾಗಿರುವುದರಿಂದ ಮನ್ಸೂರ್ ಖಾನ್‌ಗೆ ಜೈಲಿನಿಂದ ಬಿಡುಗಡೆಯಾಗಲಿದೆ. ಖಾನ್‌ಗೆ ಜಾಮೀನು ಮಂಜೂರು ಮಾಡಲು ಆಕ್ಷೇಪಿಸಿದ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್, ಐಎಂಎ ಪ್ರಕರಣದ ತನಿಖೆಯನ್ನು ಮುಖ್ಯ ನ್ಯಾಯಮೂರ್ತಿ ಓಕ್ ನೇತೃತ್ವದ ವಿಭಾಗೀಯಪೀಠ ಮೇಲ್ವಿಚಾರಣೆ ನಡೆಸುತ್ತಿದೆ. ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸಲು ಸಿಬಿಐ ತನಿಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲಿಯವರೆಗೂ ಮನ್ಸೂರ್ ಖಾನ್ ನ್ಯಾಯಾಂಗ ಬಂಧನದಲ್ಲೇ ಇರಲಿ. ಆತನಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಕೋರಿದರು. ಆದರೆ ನ್ಯಾಯಪೀಠ, ಮನ್ಸೂರ್ ಖಾನ್‌ಗೆ ಅನಾರೋಗ್ಯ ಕಾಡುತ್ತಿರುವುದರಿಂದ ಜಾಮೀನು ನೀಡದೇ ಇರಲಾಗದು ಹೇಳಿತು.
from India & World News in Kannada | VK Polls https://ift.tt/2NZMdw0