ಬೆಂಗಳೂರು: 2 ಎ ಪ್ರವರ್ಗಕ್ಕೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ಪಂಚಮಸಾಲಿಗಳು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದ್ದು ಸರ್ಕಾರಕ್ಕೆ ತಲೆನೋವಾಗಿ ಮಾರ್ಪಟ್ಟಿದೆ. ರಾಜ್ಯ ರಾಜಧಾನಿಯಲ್ಲಿ ಪಂಚಮಸಾಲಿಗಳು ಧರಣಿ ಹೋರಾಟ ನಡೆಸುತ್ತಿದ್ದು ಈ ನಿಟ್ಟಿನಲ್ಲಿ ಸೋಮವಾರ ಸಿ.ಸಿ ಪಾಟೀಲ್, ಮುರುಗೇಶ್ ನಿರಾಣಿ ಸೇರಿದಂತೆ ಸಮುದಾಯದ ಸಚಿವರು ಹಾಗು ಶಾಸಕರ ಪತ್ರಿಕಾಗೋಷ್ಠಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸೋಮವಾರ ಮಧ್ಯಾಹ್ಮ 1 ಗಂಟೆಗೆ ಪಂಚಮಸಾಲಿ ಸಚಿವರು, ಶಾಸಕರು ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಏನಾದರೂ ಪ್ರಮುಖ ಘೋಷಣೆ ಪ್ರಕಟ ಮಾಡಲಿದ್ದಾರೆಯೇ ಎಂಬುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಭಾನುವಾರ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜು ಸ್ವಾಮೀಜಿ ಮತ್ತು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿಗಳು ಹೋರಾಟ ರಾಜಧಾನಿಯನ್ನೇ ನಡುಗಿಸಿತ್ತು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಯತ್ನ ನಡೆಸಿದ್ದರು. ಇದೀಗ ಮಾರ್ಚ್ 4 ರವರೆಗೆ ಮೀಸಲಾತಿ ಹೋರಾಟಗಾರರು ಗಡುವು ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಸಿಎಂ ಬಿಎಸ್ ಯಡಿಯೂರಪ್ಪ ಭಾನುವಾರ ತಮ್ಮ ಮನೆಯಿಂದಲೇ ನಿಗಾ ಇಟ್ಟಿದ್ದರು. ಸಚಿವರಾದ ಸಿಸಿ ಪಾಟೀಲ್ ಹಾಗೂ ನಿರಾಣಿ ಅವರು ಸಮಾವೇಶಕ್ಕೆ ತೆರಳಿ ಸಂಧಾನ ಮಾತುಕತೆ ಮಾಡುವ ಪ್ರಯತ್ನವನ್ನು ನಡೆಸಿದ್ದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಮಾರ್ಚ್ 4 ರ ಗಡುವು ನೀಡಿದ್ದಾರೆ. ಮಾರ್ಚ್ 4 ರಿಂದ ವಿಧಾನಮಂಡಲ ಅಧಿವೇಶನ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದು ರಾಜ್ಯ ಸರ್ಕಾರಕ್ಕೂ ಅನಿವಾರ್ಯವಾಗಿದೆ. ಹೋರಾಟಗಾರರ ಆಕ್ರೋಶವನ್ನು ತಣಿಸುವ ನಿಟ್ಟಿನಲ್ಲಿ ತೆರೆಮರೆಯಲ್ಲಿ ಸಂಧಾನದ ಪ್ರಯತ್ನವೂ ನಡೆಯುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸೋಮವಾರದ ನಡೆಯಲಿರುವ ಸಚಿವರ ಪತ್ರಿಕಾಗೋಷ್ಠಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
from India & World News in Kannada | VK Polls https://ift.tt/37B7pzm