ಚಿಕ್ಕಬಳ್ಳಾಪುರ: ಶಿವಮೊಗ್ಗದಲ್ಲಿ ನಡೆದ ಜಿಲಾಟಿನ್ ಸ್ಫೋಟದ ತೀವ್ರತೆ ಇನ್ನೂ ಕಣ್ಣಂಚಿಂದ ಮಾಸಿಲ್ಲ. ಅದಾಗಲೇ ಜಿಲ್ಲೆಯ ಹಿರೇನಾಗವಲ್ಲಿ ಬಳಿ ಅಕ್ರಮ ಕಲ್ಲು ಕ್ವಾರಿ ಸ್ಪೋಟ ದುರಂತ ನಡೆದಿದೆ. ಘಟನೆ ಸಂಬಂಧ ಸ್ಥಳಕ್ಕೆ ADGP, IGP ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಮಾತನಾಡಿದ ಅವರು, ಈ ಘಟನೆಯ ಹಿಂದಿರುವ ತಪ್ಪಿತಸ್ಥರ ವಿರುದ್ಧ ಕಠಿನಕ್ರಮ ಕೈಗೊಳ್ಳಲಾಗುವುದು. ಕಲ್ಲು ಕ್ವಾರೆ ಗಣಿಗಾರಿಕೆಗಳಲ್ಲಿ ಸ್ಫೋಟಕಗಳನ್ನು ಬಳಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಹಲವು ನೀತಿ ನಿಯಮಗಳು ರೂಪುಗೊಂಡಿವೆ. ಅದರಂತೆ ಕಲ್ಲು ಕ್ವಾರೆ ಸೇರಿದಂತೆ ಗಣಿಗಾರಿಕೆಗಳಲ್ಲಿ ಸ್ಫೋಟಕಗಳನ್ನು ಬಳಸುವವರು ಸರ್ಕಾರದ ಅನುಮತಿ ಪಡೆದು ನಿಯಮಕ್ಕನುಸಾರವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅನಧಿಕೃತ ಕ್ವಾರೆಗಳು ಕಂಡು ಬಂದರೆ ಪೊಲೀಸ್ ಇಲಾಖೆ ಕ್ರಿಮಿನಲ್ ಆಕ್ಷನ್ ತೆಗೆದುಕೊಳ್ಳುತ್ತದೆ ಎಂದರು. ಇನ್ನು ರಾಜ್ಯದಲ್ಲಿ ಶಿವಮೊಗ್ಗ ದುರ್ಘಟನೆ ನಡೆದ ಬಳಿಕ ರಾಜ್ಯದಲ್ಲಿಯೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಮತ್ತು ಗೃಹಮಂತ್ರಿಗಳು ಸೂಚನೆ ನೀಡಿದ್ದಾರೆ. ಪೊಲೀಸ್ ಇಲಾಖೆ ವತಿಯಿಂದಲೂ ಹಲವಾರು ಕಡೆ ದಾಳಿ ನಡೆಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಎಡಿಜಿಪಿ ತಿಳಿಸಿದರು. ಹಿರೇನಾಗವಲ್ಲಿ ಬಳಿ ಅಕ್ರಮ ಕಲ್ಲು ಕ್ವಾರಿ ಸ್ಪೋಟ ದುರಂತದಲ್ಲಿ ಈವರೆಗೆ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದ್ದು, ಸ್ಫೋಟದ ತೀವ್ರತೆಗೆ ಕಾರ್ಮಿಕರ ದೇಹ ಛಿದ್ರ ಛಿದ್ರಗೊಂಡಿದೆ. ಸ್ಪೋಟದ ತೀವ್ರತೆಗೆ ಟಾಟಾ ಏಸ್ ವಾಹನ ಸಂಪೂರ್ಣ ಛಿದ್ರವಾಗಿದೆ. ಸ್ಪೋಟದಿಂದ ಹತ್ತಾರು ಕಿಲೋಮೀಟರ್ ದೂರದವರೆಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನ ಭೂಕಂಪ ಎಂದು ಭಾವಿಸಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ನಂತರ ಜಿಲೆಟಿನ್ ಸ್ಪೋಟ ಸಂಭವಿಸಿದೆ ಎನ್ನುವ ಮಾಹಿತಿ ಗೊತ್ತಾಗಿದೆ.
from India & World News in Kannada | VK Polls https://ift.tt/3sklpW8