ಬೆಳ್ತಂಗಡಿ: ಐವರು ಮಕ್ಕಳಿದ್ದರೂ ಹೆತ್ತ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕಿನ ಕಳಿಯ ಗ್ರಾಮದಲ್ಲಿ ನಡೆದಿದೆ. ಮೂಲತಃ ಕಳಿಯ ಗ್ರಾಮದ ಜನತಾ ಕಾಲೋನಿ ನಿವಾಸಿಯಾದ ವೃದ್ಧೆಯನ್ನು ನ್ಯಾಯತರ್ಪು ಗ್ರಾಮದ ನಾಳದಲ್ಲಿ ಅವರ ಮನೆಯವರೇ ರಸ್ತೆ ಬದಿ ಬಿಟ್ಟು ಹೋಗಿದ್ದಾರೆ. ಈಕೆಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ವೃದ್ಧೆಗೆ ಆರೋಗ್ಯ ಸರಿಯಿಲ್ಲದಿದ್ದು, ಈಕೆಯ ಮಕ್ಕಳಿಗೆ ಎಲ್ಲರಿಗೂ ವಿವಾಹವಾಗಿದೆ. ಅನಾರೋಗ್ಯದಿಂದಿರುವ ತಾಯಿಯ ಆರೈಕೆ ಮಾಡುವವರು ಯಾರು ಎಂಬ ಮಕ್ಕಳೊಳಗಿನ ಪೈಪೋಟಿಯೇ ತಾಯಿ ಬೀದಿಗೆ ಬರಲು ಕಾರಣ ಎನ್ನಲಾಗಿದೆ. ವೃದ್ಧೆಯನ್ನು ದಾರಿಯಲ್ಲಿ ಬಿಟ್ಟು ಹೋಗಿರುವ ಬಗ್ಗೆ ದ.ಕ ಜಿಲ್ಲಾ 112 ಸಹಾಯವಾಣಿಗೆ ಕರೆ ಬಂದಿದ್ದು, ತಕ್ಷಣ ತುರ್ತು ಸ್ಪಂದನಾ ವಾಹನ ಸ್ಥಳಕ್ಕೆ ತೆರಳಿ ವೃದ್ಧೆಯನ್ನು ಕರೆದುಕೊಂಡು ಬಂದು ಮನೆಯವರಿಗೆ ಸೂಕ್ತ ಮಾಹಿತಿ ನೀಡಿ ವೃದ್ಧೆಯನ್ನು ಅವರ ಪುತ್ರಿಯ ಮನೆಗೆ ಕಳುಹಿಸಲಾಗಿದೆ. ಸದ್ಯ ಮನೆಯವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಪ್ರಕರಣವನ್ನು ಬೆಳ್ತಂಗಡಿ ಠಾಣಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
from India & World News in Kannada | VK Polls https://ift.tt/3jdpVCx