ಹೀಗೂ ನಡೆಯುತ್ತೆ ನೋಡಿ: ಬಹುಮತ ಇದ್ದರೂ ಮೈಮರೆತಿದ್ದಕ್ಕೆ ಬಿಜೆಪಿಗೆ ತಪ್ಪಿತು ಗ್ರಾ.ಪಂ. ಉಪಾಧ್ಯಕ್ಷ ಹುದ್ದೆ!

ಚಿಕ್ಕಮಗಳೂರು: ಚುನಾವಣೆಯೆಂದರೆ ಜಿದ್ದಾಜಿದ್ದಿ. ಸೇರಿಗೆ ಸವ್ವಾ ಸೇರು ಅಂತ ಫೈಟ್‌ ಮಾಡಿ ಕೊನೆಗೂ ಗೆದ್ದು ಬೀಗಿದವರಿಗೆ ಈಗ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ ಮೇಲೆ ಕಣ್ಣು. ಅಧಿಕಾರ ಹಂಚಿಕೆ, ಹಣ, ಆಮಿಷ, ಪ್ರವಾಸ, ಆಣೆಪ್ರಮಾಣ.. ಹೀಗೆ ತರಹೇವಾರಿ ಸರ್ಕಸ್‌. ಇಂತಹದ್ದೇ ಸರ್ಕಸ್‌ ಮಾಡಿ ಹುದ್ದೆ ದಕ್ಕಿಸಿಕೊಳ್ಳುವ ಭರದಲ್ಲಿ ಮೈಮರೆತು ಹುದ್ದೆ ಕೈತಪ್ಪಿದ ಘಟನೆ ತಾಲೂಕಿನ ತೇಗೂರು ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದಿದೆ. ಬಿಜೆಪಿ ಬೆಂಬಲಿತ 13 ಸದಸ್ಯರಿದ್ದರೂ, ಬಿಜೆಪಿಯ ಜಿಲ್ಲೆ, ನಗರ ಮಟ್ಟದ ಮುಖಂಡರೆಲ್ಲ ಶತಪ್ರಯತ್ನ ಮಾಡಿದರೂ ಉಪಾಧ್ಯಕ್ಷ ಹುದ್ದೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಪಾಲಾಗಿದೆ. 16 ಸದಸ್ಯ ಬಲದ ತೇಗೂರು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 13 ಮಂದಿ ಗೆದ್ದಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳೆರಡೂ ಬಿಜೆಪಿ ಬೆಂಬಲಿತ ಸದಸ್ಯರಿಗೆ ಅನಾಯಾಸವಾಗಿ ಒಲಿಯಬೇಕಿತ್ತು. ಆದರೆ, ಅಧಿಕಾರ ಕೈತಪ್ಪಿ ಹೋಗುವ ಭೀತಿಯಿಂದ ಒಂದು ವಾರ ಸದಸ್ಯರು ಪ್ರವಾಸ ಹೋಗಿದ್ದು, ಸೋಮವಾರ ಬೇಲೂರಿನಲ್ಲಿ ವಾಸ್ತವ್ಯ ಮಾಡಿ, ಮಂಗಳವಾರ ಬೆಳಗ್ಗೆ ಗ್ರಾಮ ಪಂಚಾಯಿತಿ ಕಚೇರಿಗೆ ಹಾಜರಾಗಿದ್ದರು. ಜಾತಿ ಪ್ರಮಾಣಪತ್ರ ಇರಲಿಲ್ಲ! ಬಿಸಿಎಂ ಎ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಹುದ್ದೆಗೆ ಬಿಜೆಪಿ ಬೆಂಬಲಿತ ಜಯಶ್ರೀ ಹಾಗೂ ಕಾಂಗ್ರೆಸ್‌ ಬೆಂಬಲಿತ ಬೇಬಿ ಜಾನ್‌ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲಿಸಿದಾಗ ಜಯಶ್ರೀ ಅವರು ಜಾತಿ ಪ್ರಮಾಣಪತ್ರ ಸಲ್ಲಿಸಿರಲಿಲ್ಲ. ತರಾತುರಿಯಲ್ಲಿ ಒಂದೆರಡು ಗಂಟೆಯಲ್ಲೇ ಹೊಸದಾಗಿ ಜಾತಿ ಪ್ರಮಾಣಪತ್ರ ಮಾಡಿಸಿಕೊಂಡು ಬಂದು ಸಲ್ಲಿಸಿದರೂ ನಿಗದಿತ ಸಮಯಾವಕಾಶ ಪೂರ್ಣಗೊಂಡಿದ್ದರಿಂದ ಚುನಾವಣಾಧಿಕಾರಿ, ಪಿಎಂಜಿಎಸ್‌ವೈ ಸಹಾಯಕ ಕಾರ‍್ಯಪಾಲಕ ಎಂಜಿನಿಯರ್‌ ಎಂ.ಎಸ್‌.ಸ್ವಪ್ನಿಲ್‌, ಕಾಂಗ್ರೆಸ್‌ ಬೆಂಬಲಿತ ಬೇಬಿ ಜಾನ್‌ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸಿದರು. ಇಡೀ ಚುನಾವಣೆ ಪ್ರಕ್ರಿಯೆ ತಡೆಯಲು ಬಿಜೆಪಿ ಮುಖಂಡರು ನಡೆಸಿದ ಪ್ರಯತ್ನ ವಿಫಲವಾಯಿತು. ಹೊಸದಾಗಿ ಆಯ್ಕೆಯಾದ ಎಲ್ಲ ಸದಸ್ಯರು ಹಾಜರಿದ್ದರೂ, ಜಾತಿ ಪ್ರಮಾಣಪತ್ರ ಸಲ್ಲಿಸದೆ ಮಾಡಿಕೊಂಡಿದ್ದ ಎಡವಟ್ಟಿನಿಂದ ಪಾರಾಗಲು ಬಿಜೆಪಿ ಬೆಂಬಲಿತ ಸದಸ್ಯರು ಸಭಾ ನಡಾವಳಿ ಪುಸ್ತಕಕ್ಕೂ ಸಹಿ ಮಾಡದೆ ಜಾಗ ಖಾಲಿ ಮಾಡಿ ಕೋರಂ ಕೊರತೆ ಸೃಷ್ಟಿಸಿದರು. ಇದರಿಂದ ಅಧ್ಯಕ್ಷ ಸ್ಥಾನದ ಚುನಾವಣೆ ಮುಂದಕ್ಕೆ ಹೋಯಿತೇ ವಿನಾ ಉಪಾಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಾಮಾನ್ಯ ವರ್ಗಕ್ಕೆ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ ಗಣೇಶ್‌ ಮತ್ತು ಎಚ್‌.ಆರ್‌.ವೇಣುಗೋಪಾಲರಾಜ್‌ ಅರಸ್‌ ನಾಮಪತ್ರ ಸಲ್ಲಿಸಿದ್ದರು. ಕೋರಂ ಕೊರತೆ ಕಾರಣಕ್ಕೆ ಚುನಾವಣೆಯನ್ನು ಫೆ.3ರ ಮಧ್ಯಾಹ್ನ 3.30ಕ್ಕೆ ಮುಂದೂಡಲಾಯಿತು.


from India & World News in Kannada | VK Polls https://ift.tt/3aryEwV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...