ಫೇಸ್‌ಬುಕ್‌ ಗೆಳೆತನ ತಂದ ಆಪತ್ತು; ಗಿಫ್ಟ್‌ ಆಸೆಗೆ ಬಿದ್ದು ಬರೋಬ್ಬರಿ 40 ಲಕ್ಷ ರೂ. ಕಳೆದುಕೊಂಡ ವೃದ್ಧ!

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾಗುವ ಅಪರಿಚಿತರು ಗಿಫ್ಟ್‌ ಕಳುಹಿಸುತ್ತೇನೆ ಎಂದಾಗ ಹತ್ತು ಬಾರಿ ಯೋಚನೆ ಮಾಡಿ. ಅದರಲ್ಲೂ ಗಿಫ್ಟ್‌ ಬಿಡಿಸಿಕೊಳ್ಳಲು ಕೆಲವು ಫೀಸ್‌ ಕಟ್ಟಬೇಕೆಂದು ಹಣ ಕೇಳಿಕೊಂಡು ಯಾರಾದರೂ ಕರೆ ಮಾಡಿದರೆಂದರೆ ವಂಚನೆ ಗ್ಯಾರಂಟಿ. ಅಂತಹ ಅಪರಿಚಿತರನ್ನು ಬ್ಲಾಕ್‌ ಮಾಡಿ ಸುರಕ್ಷಿತವಾಗಿರಿ. ಇಲ್ಲದಿದ್ದರೆ ನಿಮ್ಮ ಅಕೌಂಟ್‌ನಲ್ಲಿರುವ ಹಣ ಹಂತ-ಹಂತವಾಗಿ ಖಾಲಿ ಆಗುವುದು ಗ್ಯಾರಂಟಿ ! ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಏಕಾಏಕಿ ಅಮೆರಿಕದಿಂದ ಗಿಫ್ಟ್‌ ಕಳುಹಿಸುತ್ತೇವೆಂದ ವಂಚಕರ ಜಾಲಕ್ಕೆ ಸಿಲುಕಿದ 70 ವರ್ಷದ ಥಾಮಸ್‌(ಹೆಸರು ಬದಲಿಸಲಾಗಿದೆ) ಎಂಬುವರು ಬರೋಬ್ಬರಿ 39.73 ಲಕ್ಷ ರೂ. ಕಳೆದುಕೊಂಡಿದ್ದಾರೆ. ವೈಟ್‌ಫೀಲ್ಡ್‌ ಪ್ರದೇಶದಲ್ಲಿ ನೆಲೆಸಿರುವ ಥಾಮಸ್‌, ಖಾತೆ ಹೊಂದಿದ್ದಾರೆ. ಇವರಿಗೆ ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದವರೆಂದು ಹೇಳಿ ರೇವ್‌ ಸಿಸ್ಟರ್‌ ಜೀನಾ, ಜೀಯಾನ ಮತ್ತು ಮ್ಯಾಥ್ಯೂ ಎಂಬುವರು ರಿಕ್ವೆಸ್ಟ್‌ ಕಳುಹಿಸಿ ಸ್ನೇಹ ಬೆಳೆಸಿದ್ದರು. ನಂತರ ವಾಟ್ಸ್‌ಆ್ಯಪ್‌ ನಂಬರ್‌ ಪಡೆದುಕೊಂಡು ಚಾಟಿಂಗ್‌ ಮಾಡುತ್ತಿದ್ದರು. ಕೆಲಕಾಲ ಸಾಮಾನ್ಯರಂತೆ ಮೆಸೇಜ್‌ ಮಾಡಿ ಊಟ, ತಿಂಡಿ, ಆರೋಗ್ಯ, ಉಪ ಜೀವನದ ಕುರಿತು ವಿಚಾರಿಸಿ ಮಾಹಿತಿ ಕಲೆ ಹಾಕಿದ್ದಾರೆ. ನಂತರ 'ನಮ್ಮ ಸ್ನೇಹದ ಪ್ರತೀಕವಾಗಿ ನಿಮಗೆ ಅಮೆರಿಕದಿಂದ ಗಿಫ್ಟ್‌ ಕಳುಹಿಸುತ್ತಿದ್ದೇವೆ. ದಯವಿಟ್ಟು ಅದನ್ನು ಸ್ವೀಕರಿಸಿ' ಎಂದು ಹೇಳಿದ್ದಾರೆ. ಫೀ ಹೆಸರಿನಲ್ಲಿ ಸುಲಿಗೆ ಆರಂಭ 2020ರ ನ.10ರಂದು ಅಪರಿಚಿತ ನಂಬರ್‌ನಿಂದ ಥಾಮಸ್‌ ಅವರ ಮೊಬೈಲ್‌ ನಂಬರ್‌ಗೆ ಕರೆ ಬಂದಿತ್ತು. 'ದಿಲ್ಲಿ ವಿಮಾನ ನಿಲ್ದಾಣದ ಕಸ್ಟಮ್ಸ್‌ನಿಂದ ಕರೆ ಮಾಡುತ್ತಿದ್ದೇನೆ. ನಿಮ್ಮ ಹೆಸರಿಗೆ ಪಾರ್ಸೆಲ್‌ ಬಂದಿದೆ. ಅದನ್ನು ಸ್ವೀಕರಿಸಬೇಕೆಂದರೆ 35 ಸಾವಿರ ರೂ. ಕ್ಲಿಯರೆನ್ಸ್‌ ಶುಲ್ಕ ಕಟ್ಟಬೇಕು. ಹಣ ಕಟ್ಟದೇ ಇದ್ದರೆ ನಿಮ್ಮ ವಿರುದ್ಧ ಮನಿ ಲಾಂಡರಿಂಗ್‌ ಕಾಯಿದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ' ಎಂದು ಬೆದರಿಕೆ ಹಾಕಿದ್ದಾರೆ. ಅಮೆರಿಕದಲ್ಲಿರುವ ಸ್ನೇಹಿತರು ಕಳುಹಿಸಿರಬೇಕು ಎಂದು ಭಾವಿಸಿದ ಥಾಮಸ್‌, ಅವರು ಹೇಳಿದಂತೆ ಖದೀಮರು ನೀಡಿದ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಅದಾದ ನಂತರ ಜಿಎಸ್‌ಟಿ, ಕಸ್ಟಮ್ಸ್‌ ಶುಲ್ಕ, ಏರ್‌ಪೋರ್ಟ್‌ ಶುಲ್ಕ ಸೇರಿದಂತೆ ಒಂದಕ್ಕೆ ಹಣ ಕಳುಹಿಸಿದ ನಂತರ ಮತ್ತೊಂದು ಶುಲ್ಕವೆಂದು ಹೇಳಿ ಹಂತ-ಹಂತವಾಗಿ ಒಟ್ಟು 39.70 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಎಷ್ಟೇ ಹಣ ಕಟ್ಟಿದರೂ ಮತ್ತೊಂದು ಶುಲ್ಕವೆಂದು ಹೇಳುತ್ತಲೇ ಇದ್ದರು. 2020ರ ನವೆಂಬರ್‌ 8ರಿಂದ 2021ರ ಜನವರಿ 31ರ ನಡುವೆ 3 ತಿಂಗಳ ಅಂತರದಲ್ಲಿ 39.70 ಲಕ್ಷ ರೂ. ಹಣ ಕಳೆದುಕೊಂಡ ಥಾಮಸ್‌ ಅವರಿಗೆ ವಂಚನೆಯಾಗುತ್ತಿದೆ ಎಂದು ಗೊತ್ತಾಗಿದೆ. ಅಂತಿಮವಾಗಿ ವೈಟ್‌ಫೀಲ್ಡ್‌ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ. ಮಣಿಪುರ, ಅಲಹಾಬಾದ್‌, ಹೊಸದಿಲ್ಲಿ, ಮಿಜೋರಾಂ, ಉತ್ತರ ಪ್ರದೇಶ, ಗುಜರಾತ್‌ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಬ್ಯಾಂಕ್‌ ಖಾತೆಗಳಿಗೆ ಖದೀಮರು ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.


from India & World News in Kannada | VK Polls https://ift.tt/3pIXT3v

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...