ಬೆಂಗಳೂರು: ಭೂಮಿ ಬಿರಿಯಿತೇನೋ ಎನ್ನುವಂತೆ ಕಿವಿಗಡಚಿಕ್ಕುವ ಸದ್ದಿನೊಂದಿಗೆ ಆರ್ಭಟಿಸುತ್ತಾ ಬಂದ ರಫೇಲ್ ಯುದ್ಧ ವಿಮಾನದ ರುದ್ರ ನರ್ತನ... ಅಂಬರವನ್ನು ಚುಂಬಿಸುತ್ತ ಸಾಗಿದ ತೇಜಸ್ ಲಘು ಯುದ್ಧ ವಿಮಾನದ ಉರುಳು ಸೇವೆ! ಬಾನಲ್ಲಿ ಪಲ್ಟಿ ಹೊಡೆದು ಚಮತ್ಕಾರ ತೋರಿದ ಲಘು ಯುದ್ಧ ವಿಮಾನಗಳು. ಸೂರ್ಯ ಕಿರಣ್-ಸಾರಂಗ್ ತಂಡಗಳು ಜಂಟಿಯಾಗಿ ಪ್ರದರ್ಶಿಸಿದ ಚಿನ್ನಾಟ. ಮುಗಿಲೆತ್ತರಕ್ಕೇರಿ ಸರ್ರನೆ ನೆಲದತ್ತ ಮುಖ ಮಾಡಿ, ಕ್ಷಣಾರ್ಧದಲ್ಲಿ ದಿಕ್ಕು ಬದಲಿಸಿ ಮಿಂಚಿನ ವೇಗದಲ್ಲಿ ಹಾರಿದ ಸುಖೋಯ್! ಕೋವಿಡ್ ಬಳಿಕ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿಆರಂಭವಾದ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನದಲ್ಲಿ ಕಂಡುಬಂದ ಉಕ್ಕಿನ ಹಕ್ಕಿಗಳ ರಂಗಿನಾಟಗಳ ಝಲಕ್ ಇದು. ಏರೋ ಇಂಡಿಯಾ-2021ರ 13ನೇ ಆವೃತ್ತಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಧ್ಯುಕ್ತ ಚಾಲನೆ ನೀಡಿದರು. ಶುಕ್ರವಾರದವರೆಗೆ ರೆಕ್ಕೆ ಬಡಿಯದ ಲೋಹದ ಹಕ್ಕಿಗಳ ರುದ್ರರಮಣೀಯ ಕಸರತ್ತು ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಎಲ್‌ಯುಎಚ್ ಹೆಲಿಕಾಪ್ಟರ್‌ಗಳು ರಾಷ್ಟ್ರಧ್ವಜ, ಭಾರತೀಯ ವಾಯುಸೇನೆ ಮತ್ತು ಏರೋ ಇಂಡಿಯಾ-2021ರ ಧ್ವಜ ಹೊತ್ತು ಮೊದಲು ಪ್ರದರ್ಶನಕ್ಕೆ ನಾಂದಿ ಹಾಡಿದವು. ಬಳಿಕ ರಫೇಲ್, ತೇಜಸ್, ಧನುಷ್, ತ್ರಿಶೂಲ್, ಸಾರಂಗ್, ಸೂರ್ಯ ಕಿರಣ್, ಸುಖೋಯ್ ಯುದ್ಧ ವಿಮಾನಗಳ ಆಟ ಶುರುವಾಯಿತು. ಭುವಿ ನಡುಗುವಂತೆ ಆರ್ಭಟ ಮಾಡುತ್ತ ಶರವೇಗದಲ್ಲಿಸಾಗಿ ಬಂದು ಮುಗಿಲೆತ್ತರಕ್ಕೇರಿ ಕಣ್ಣಳತೆಯಿಂದ ಯುದ್ಧ ವಿಮಾನಗಳು ಮಾಯವಾದವು. ವೈಮಾನಿಕ ಪ್ರದರ್ಶನವು ವೈಮಾನಿಕ ಕ್ಷೇತ್ರದಲ್ಲಿನ ಬೆಳವಣಿಗೆ ಸಾದರಪಡಿಸುವುದರ ಜತೆಗೆ ಸೇನಾ ಪಡೆಯ ಶಕ್ತಿ ಸಾಮರ್ಥ್ಯವನ್ನೂ ಅನಾವರಣಗೊಳಿಸಿತು. ಈ ಬಾರಿ ಎಚ್‌ಎಲ್ ಆತ್ಮನಿರ್ಭರ್ ನೀಲ ಆಗಸದಲ್ಲಿ ಚಿತ್ತಾರ ಮೂಡಿಸಿತು. ಲಘು ಯುದ್ಧ ಹೆಲಿಕಾಪ್ಟರ್ ಹಾಕ್-ಐ, ಐಜೆಟಿ, ಡಾರ್ನಿಯರ್ ವಿಮಾನಗಳ ಬಳಗವು ವೈಮಾನಿಕ ಕ್ಷೇತ್ರದಲ್ಲಿದೇಸಿ ಹೆಜ್ಜೆ ಗುರುತು ಮೂಡಿಸುವ ಭರವಸೆ ನೀಡಿದವು. ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಯನ್ನೊಳಗೊಂಡ 'ನೇತ್ರಾ' ವಿಮಾನವು ರಾಜ ಗಾಂಭೀರ್ಯದಿಂದ ಸಾಗಿತು. ಸಿ-17 ಗ್ಲೋಬ್ ಮಾಸ್ಟರ್ ಮತ್ತು ಸುಖೋಯ್ ವಿಮಾನಗಳು ಆಕಾಶದಲ್ಲಿಅಕ್ಷರಗಳ ಚಿತ್ತಾರ ಮೂಡಿಸಿದವು. ತೇಜಸ್ ಯುದ್ಧ ವಿಮಾನಗಳು ಅಬ್ಬರಿಸುತ್ತ ನಭದಲ್ಲಿಚಿಮ್ಮಿದವು. ತೇಜಸ್ ಜತೆ ಸಾಗಿದ ಅಮೆರಿಕದ ಬಿ1ಬಿ ಲ್ಯಾನ್ಸರ್ ಬಾಂಬರ್ ವಿಮಾನದ ಪ್ರದರ್ಶನವು ಆಕರ್ಷಣೀಯವಾಗಿತ್ತು.
from India & World News in Kannada | VK Polls https://ift.tt/3rlFpaA