ಬೆಂಗಳೂರು: ಕಳೆದ ಬುಧವಾರವಷ್ಟೇ (30-10-2019) ಇಹಲೋಕ ತ್ಯಜಿಸಿದ ನ್ಯಾ. ವೆಂಕಟಾಚಲ, ಎಂದೆಂದಿಗೂ ಜನಮಾನಸದಲ್ಲಿ ಹಸಿರಾಗಿರುತ್ತಾರೆ. ಭ್ರಷ್ಟರ ವಿರುದ್ಧದ ಖಡಕ್ ನಿಲುವು, ಅವ್ಯವಸ್ಥೆ ವಿರುದ್ಧದ ಹೋರಾಟ, ಜನಪರ, ಜೀವಪರ ಕಾಳಜಿಗಳನ್ನು ಹೊಂದಿದ್ದ ಅವರ ಬಗ್ಗೆ ಬೆಳಕು ಚೆಲ್ಲುವಂಥಾ ಲೇಖನವೊಂದು ಇಲ್ಲಿದೆ. ನ್ಯಾ. ವೆಂಕಟಾಚಲ ಅವರೊಂದಿಗೆ ಕಾರ್ಯನಿರ್ವಹಿಸಿದ್ದ ನಿವೃತ್ತ ಅಧಿಕಾರಿ ಜೆಬಿಆರ್ ಸ್ವಾಮಿಯವರು, ಹತ್ತಿರದಿಂದ ಕಂಡ ತಮ್ಮ ಅನುಭವಗಳನ್ನು ಲೇಖನವನ್ನಾಗಿಸಿದ್ದಾರೆ. ಅದು 2005. ಲೋಕಾಯುಕ್ತರಾಗಿದ್ದ ಶ್ರೀ ಎನ್. ವೆಂಕಟಾಚಲ ಅವರು ತುರುವೇಕೆರೆಗೆ ಭೇಟಿ ನೀಡಿದ್ದರು. ನಾನಾಗ ತುಮಕೂರು ಜಿಲ್ಲೆಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದೆ. ಸಾರ್ವಜನಿಕ ಸಭೆಗೆ ಮೊದಲು, ಅಲ್ಲಿಯ ಐಬಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಚಿಕ್ಕ ಸಭೆ ನಡೆಯಿತು. ಆ ದಿನಗಳಲ್ಲಿ ಅತ್ಯಂತ ಸೆನ್ಸೇಷನಲ್ ಆಗಿದ್ದ ಒಂದು ರೇಡ್ ಪ್ರಕರಣದಲ್ಲಿ ಅಪರಾಧಿಗೆ ಜಾಮೀನು ನೀಡಿತ್ತು. ಜೊತೆಗೆ, ವಶಪಡಿಸಿಕೊಂಡಿದ್ದ ಆಭರಣ ಮತ್ತು ನಗದು ಹಣದಲ್ಲಿ ಕೆಲವನ್ನು ವಾಪಸ್ ಕೊಡುವಂತೆ ಆದೇಶ ನೀಡಿತ್ತು. ಮಾಧ್ಯಮಗಳು ಅದನ್ನು ವೈಭವೀಕರಿಸಿ, ಆತ ನಿರಪರಾಧಿ ಎಂಬಂತೆ ಬಿಂಬಿಸಿದ್ದವು. ತನಿಖೆ ನಡೆಸಿದ್ದ ಅಧಿಕಾರಿಗೆ ತಪ್ಪಿತಸ್ತ ಭಾವ ಕಾಡುತ್ತಿತ್ತು. ವಶಪಡಿಸಿಕೊಳ್ಳಲಾಗಿದ್ದ ವಸ್ತುಗಳನ್ನು ಕೋರ್ಟ್ ಬಿಡುಗಡೆ ಮಾಡಿದೆ ಎಂದರೆ, ತಾನು ಸರಿಯಾಗಿ ತನಿಖೆ ಮಾಡಿಲ್ಲ ಎಂದು ಲೋಕಾಯುಕ್ತರು ಎಲ್ಲಿ ಛೀಮಾರಿ ಹಾಕುತ್ತಾರೋ ಎಂಬ ಹೆದರಿಕೆಯಲ್ಲಿ ಆ ಅಧಿಕಾರಿ ಇದ್ದರು. ‘ನಾವು ಎಲ್ಲ ರೀತಿಯ ಆಕ್ಷೇಪಣೆಗಳನ್ನೂ ಸಲ್ಲಿಸಿದ್ದೆವು ಸಾರ್. ಆದರೂ ಕೋರ್ಟ್ ಹೀಗೆ ಆರ್ಡರ್ ಮಾಡಿಬಿಟ್ಟಿದೆ ಸರ್’ ಎಂದರು. ಸಮಾಧಾನಿಸುವ ದನಿಯಲ್ಲಿ ಲೋಕಾಯಕ್ತರು ಹೇಳಿದರು: ‘ಇರಲಿ ಬಿಡಿ. ಕಾನೂನು ಹೋರಾಟದಲ್ಲಿ ಇವೆಲ್ಲವೂ ಆಗುತ್ತವೆ. ಅಪರಾಧಿಗೆ ಶಿಕ್ಷೆ ಆಗೋದಕ್ಕಿಂತ, ಈ ತನಿಖೆಯ ಹೆಜ್ಜೆ ಹೆಜ್ಜೆಯಲ್ಲಿ ಎಲ್ಲವುದಕ್ಕೂ ಅವನು ಉತ್ತರ ಕೊಡಬೇಕಲ್ಲಾ? ಆ ಪ್ರಕ್ರಿಯೆ ಶಿಕ್ಷೆಗಿಂತ ದೊಡ್ಡದು. ಈ ಕೇಸಿನಲ್ಲಿ ನೀವು ನಾಲ್ಕು ವರ್ಷ ತನಿಖೆ ಮಾಡಿದ್ದೀರಾ? ಈ ನಾಲ್ಕು ವರ್ಷದ ಅವಧಿಯಲ್ಲಿ ಅವನ ವಿಚಾರಣೆ, ಆಸ್ತಿ ಪಾಸ್ತಿಗಳಿಗೆ ಸರಿಯಾದ ಲೆಕ್ಕ ಕೊಡಬೇಕು. ಈ ಟೆನ್ಷನ್‌ನಲ್ಲಿಯೇ ಹೈರಾಣಾಗಿರುತ್ತಾನೆ. ಅದೇ ದೊಡ್ಡ ಶಿಕ್ಷೆ ಬಿಡಿ’ ಅಂದರು. ‘ಹೌದು ಸರ್. ನಾವು ರೈಡ್ ಮಾಡಿದ್ದ ಕಾಲದಲ್ಲಿ ಅವನು ಭಾರೀ ರೋಫ್ ದಾರಿಕೆ ಮನುಷ್ಯನಾಗಿದ್ದ. ಹಡಬಿಟ್ಟಿ ದುಡ್ಡಿನ ಹಮ್ಮು ವಿಪರೀತ ಇತ್ತು. ಈಗ ಹೈ ಬಿಪಿ, ಶುಗರ್, ಕಿಡ್ನಿ ಫೆಲ್ಯೂರ್ ಹೀಗೆ ಏನೇನೋ ಖಾಯಿಲೆಗಳು ಮುತ್ತಿಕೊಂಡಿವೆ. ಗಡ್ಡ ಮೀಸೆ ಬಿಟ್ಟಕೊಂಡು ಭಿಕಾರಿ ಥರಾ ಆಗಿ ಬಿಟ್ಟಿದ್ದಾನೆ. ಎಲ್ಲೂ ಹೊರಗಡೆ ಓಡಾಡೋದೂ ಇಲ್ಲವಂತೆ’ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ವೆಂಕಟಾಚಲ ಅವರು, ‘ಹೌದೂರಿ. ಅಂತಿಮವಾಗಿ ಕೋರ್ಟ್ ನೀಡುವ ಶಿಕ್ಷೆಗಿಂತ, ತನಿಖೆಯ ವೇಳೆ ಅವನ ವಹಿವಾಟುಗಳ ಬಗ್ಗೆ ತನಿಖಾಧಿಕಾರಿ ಹಾಕುವ ಪ್ರಶ್ನೆಗಳೇ ಅಗ್ನಿಕುಂಡವಾಗಿರುತ್ತದೆ. ಆದ್ದರಿಂದ, ಆರೋಪಿಗಳಿಗೆ ಪ್ರಶ್ನೆಗಳನ್ನು ಕೇಳುವಾಗ ಸರಿಯಾಗಿ ಸಿದ್ಧತೆ ಮಾಡಿಕೊಂಡಿರಬೇಕು. ಉತ್ತರ ಕೊಡುವುದಕ್ಕೆ ಅಪರಾಧಿ ತಡಬಡಾಯಿಸಿ, ಇನ್ನು ಹೇಳದಿದ್ದ ವಿಧಿಯಿಲ್ಲ ಅನ್ನಿಸಬೇಕು. ಹಾಗೆ ನಿಮ್ಮ ಪ್ರಶ್ನೆಗಳಿರಬೇಕು. ನಿಮಗೆಲ್ಲ ಒಂದು ಮಾತನ್ನು ಇನ್ನೊಮ್ಮೆ ಹೇಳ್ತೀನಿ. ಪ್ರತಿ ತಿಂಗಳು ಇಂತಿಷ್ಟೇ ಕೇಸುಗಳನ್ನು ಹಾಕಲೇ ಬೇಕು ಅನ್ನುವ ಅಂಕಿ ಅಂಶಗಳು ನನಗೆ ಬೇಕಾಗಿಲ್ಲ. ಅದು ನ್ಯಾಯವಾದ ಕೇಸೇ ಅನ್ನೋದನ್ನು FIR ರಿಜಿಸ್ಟರ್ ಮಾಡುವ ಮೊದಲು ಖಚಿತ ಪಡಿಸಿಕೊಳ್ಳಿ. ಸರ್ಕಾರದ ಕೆಲಸ ಮಾಡಿಕೊಡುವ ಸಲುವಾಗಿಯೇ ಆತ ಲಂಚಕ್ಕಾಗಿ ಒತ್ತಾಯ ಮಾಡಿದ್ದಾನೆ ಎಂಬುದು ದೃಢಪಡಬೇಕು. ಅದನ್ನು ಸರಿಯಾಗಿ ನಿಮಗೋಸ್ಕರ ವೆರಿಫೈ ಮಾಡಿಕೊಳ್ಳಿ. ಪ್ರತಿ ಕೇಸಿಗೂ ನೀವೇ ಮೊದಲ ಜಡ್ಜ್. ನಿಮಗೆ ನ್ಯಾಯಸಮ್ಮತ ಅನ್ನಿಸಿದ ಮೇಲೆ ಎಸ್‌ಪಿ, ಐಜಿಪಿ ಗಮನಕ್ಕೆ ತನ್ನಿ. ಅವರು ಓಕೆ ಅಂದ ಮೇಲೆ ಮುಂದುವರೆಯಿರಿ. ಯಾವುದೇ ಕಾರಣಕ್ಕೂ ಅನ್ಯಾಯದ ಕೇಸು ಹಾಕಕೂಡದು. ಹುಷಾರ್’ ಎಂದು ಖಡಕ್ ಎಚ್ಚರಿಕೆ ನೀಡಿದರು. ಲೋಕಾಯುಕ್ತರ ಮಾತು ಎಂದರೆ ಸಾಮಾನ್ಯವೇ? He himself is the moving court! ಅವರ ಮಾತೇ ಕೋರ್ಟ್ ಆರ್ಡರ್! ಸಾರ್ವಜನಿಕ ಅಹವಾಲುಗಳನ್ನು ಜನರು ಇದ್ದಲ್ಲಿಗೇ ಹೋಗಿ ಪಡೆದು ವಿಚಾರಣೆ ಮಾಡುವ ಪರಿಪಾಠವನ್ನು ಅವರು ಆರಂಭಿಸಿದರು. ಲೋಕಾಯುಕ್ತದ ಐದಾರು ನ್ಯಾಯಾಧೀಶರುಗಳು, ಸಿಬ್ಬಂದಿ ಅವರ ಜೊತೆಗಿರುತ್ತಿದ್ದರು. ಯಾವುದೇ ಇಲಾಖೆಯಲ್ಲಿ ವಿಳಂಬ, ಕಿರುಕುಳ ಆಗುತ್ತಿದ್ದರೆ ಜನ ನೇರವಾಗಿ ಲೋಕಾಯುಕ್ತರ ಬಳಿ ಸಭೆಯಲ್ಲಿ ದೂರು ಹೇಳಬಹುದಿತ್ತು. ಆಯಾ ಇಲಾಖೆಯ ಮುಖ್ಯಾಧಿಕಾರಿಗಳನ್ನು ಕರೆಸಿ ಅಲ್ಲೇ ತೀರ್ಮಾನವನ್ನು ನೀಡುತ್ತಿದ್ದರು. ಇಂತಿಷ್ಟು ದಿನದಲ್ಲಿ ಕೆಲಸ ಮಾಡಿಕೊಡುವಂತೆ ಗಡುವು ವಿಧಿಸುತ್ತಿದ್ದರು. ಕಿರುಕುಳ ನೀಡಿದ್ದ ಸರ್ಕಾರಿ ನೌಕರನನ್ನು ಸಭೆಗೇ ಕರೆಸಿ ಛೀಮಾರಿ ಹಾಕಿ, ಆ ಕ್ಷಣವೇ ನೊಂದವರ ಕೆಲಸ ಮಾಡಿ, ವರದಿ ಮಾಡುವಂತೆ ತಾಕೀತು ಮಾಡುತ್ತಿದ್ದರು. ಅವರ ಕ್ಯಾಂಪ್ ಮುಗಿಯುವುದರೊಳಗೆ ಬಹುತೇಕ ನೊಂದವರ ಕೆಲಸಗಳು ಆಗಿರುತ್ತಿದ್ದವು. ಲೋಕಾಯುಕ್ತರು ಒಂದು ಊರಿಗೆ ಭೇಟಿ ನೀಡುತ್ತಾರೆ ಎಂದರೆ ಸಾಕು ಸರ್ಕಾರಿ ಕಛೇರಿಗಳೆಲ್ಲವೂ ಕರೆಂಟ್ ಹೊಡೆದಂತೆ ನಡುಗುತ್ತಿದ್ದವು. ಕಛೇರಿಗಳ ಕಡತಗಳು ತಂತಾನೇ ಧೂಳು ಕೊಡವಿಕೊಂಡು ಸ್ವಚ್ಛವಾಗುತ್ತಿದ್ದವು. ಜಸ್ಟೀಸ್ ವೆಂಕಟಾಚಲ ಅವರದ್ದು ತಿದ್ದುವ ಮನೋಭಾವ. ಶಿಕ್ಷಿಸುವುದು ಕಡಿಮೆ. ಕೆಲಸ ಆಗುವುದು ಮುಖ್ಯ. ತಪ್ಪಿತಸ್ಥ ಅಧಿಕಾರಿಗಳನ್ನು ಅಲ್ಲಲ್ಲೇ ಗದರಿಸಿ ಕೆಲಸ ತೆಗೆಯುತ್ತಿದ್ದರೇ ಹೊರತು ಶಿಕ್ಷಿಸಿದ್ದು ಕಡಿಮೆ. ಬಹುಶಃ ಭಾರತದಲ್ಲಿ ಈ ಬಗೆಯ ಮುಕ್ತ ವಿಚಾರಣೆ ನಡೆಸಿ, ಅಲ್ಲಲ್ಲಿಯೇ ಪರಿಹಾರ ಕೊಡುತ್ತಿದ್ದ ಸಭೆಗಳನ್ನು ನಡೆಸಿದವರಲ್ಲಿ ಅವರೇ ಮೊದಲಿಗರಿರಬೇಕು. ತುಮಕೂರಿನಲ್ಲಿ ಇಂಥಾದೊಂದು ಸಭೆ ನಡೆಯುತ್ತಿದ್ದಾಗ, ಹಿಂದುಳಿದ ವರ್ಗಗಳ ಹಾಸ್ಟೆಲ್ ಅವ್ಯವಹಾರ, ಅವ್ಯವಸ್ಥೆಯ ಬಗ್ಗೆ ದೂರಿದರು. ‘ಈ ತಕ್ಷಣವೇ ನೀವು ಅಲ್ಲಿಗೆ ಹೋಗಿ ನೋಡಿ ಪರಿಶೀಲಿಸಿ. ನಾನೂ ಬರ್ತೇನೆ’ ಎಂದು ತಿಳಿಸಿದರು. ಅಲ್ಲಿ ನೋಡಿದರೆ ಹಳೆಯ ಕೊಳೆತ ತರಕಾರಿಗಳು, ಮುಸುರೆ ಉಳಿದು ನಾರುತ್ತಿದ್ದ ಪಾತ್ರೆಗಳು, ಎಲ್ಲವೂ ಗಲೀಜು. ಅಲ್ಲಿದ್ದ ಸಿಬ್ಬಂದಿಗಳನ್ನು ಅಲ್ಲೇ ಕುಕ್ಕರುಬಡಿಸಿ (ಕುಕ್ಕರುಗಾಲಿನಲ್ಲಿ ಕೂರಿಸಿ) ಕಾಯತೊಡಗಿದೆ. ಸಭೆ ಮುಗಿಸಿ, ಊಟವನ್ನೂ ಮಾಡದೆ ನೇರ ಅಲ್ಲಿಗೇ ಬಂದರು. ಅದಾಗಲೇ ಮಧ್ಯಾಹ್ನ ಮೂರೂವರೆ ಗಂಟೆ. ಹಾಸ್ಟೆಲ್‌ನ ಅವ್ಯವಸ್ಥೆ ನೋಡಿ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡರು. ಇಲಾಖೆಯ ಮುಖ್ಯಾಧಿಕಾರಿಯೇ ಬಂದು ವಿದ್ಯಾರ್ಥಿಗಳಿಗೆ ಉತ್ತಮ ಸ್ವಚ್ಛ ಆಹಾರ ಕೊಡುವುದನ್ನು ಮೇಲ್ವಿಚಾರಣೆ ಮಾಡತಕ್ಕದ್ದೆಂದು ತಿಳಿಸಿದರು. ಅಲ್ಲಿ ನಡೆದಿರುವ ಅವ್ಯವಸ್ಥೆಯ ಬಗ್ಗೆ ಕೇಸು ದಾಖಲಿಸುವಂತೆ ನನಗೆ ಹೇಳಿದ್ದಷ್ಟೇ ಅಲ್ಲ, ಪ್ರತಿವಾರವೂ ಆ ಹಾಸ್ಟೆಲ್‌ಗೆ ಭೇಟಿ ನೀಡಿ ಆಹಾರದ ಗುಣಮಟ್ಟವನ್ನು ಪರಿಶೀಲಿಸುವಂತೆ ಆದೇಶಿಸಿದರು. ಅದೊಂದು ಭೇಟಿಯಿಂದಾಗಿ ಹಾಸ್ಟೆಲ್ ವ್ಯವಸ್ಥೆ ಬದಲಾಗಿ ವಿದ್ಯಾರ್ಥಿಗಳಿಗೆ ಉತ್ತಮ ಊಟ, ವಸತಿ ಸಿಕ್ಕುವಂತಾಯಿತು. ಜಸ್ಟೀಸ್ ಶ್ರೀ ಎನ್. ವೆಂಕಟಾಚಲ ಅವರ ಕೈಕೆಳಗೆ ಬರೋಬ್ಬರಿ ನಾಲ್ಕೂವರೆ ವರ್ಷ ಕೆಲಸ ಮಾಡಿದ್ದೆ. ಅದಾಗಲೇ ಎಪ್ಪತ್ತೈದು ವರ್ಷ ಮೀರಿದ್ದ ಹಿರಿಯ ಜೀವ ಅದು. ಲೋಕಾಯುಕ್ತ ಕಛೇರಿಯಲ್ಲಿ ಲಿಫ್ಟ್ ಇದ್ದರೂ, ನಾಲ್ಕಂತಸ್ತಿನ ಮೆಟ್ಟಿಲುಗಳನ್ನು ಹತ್ತಿ ಬರುತ್ತಿದ್ದ ಗಟ್ಟಿ ಮನುಷ್ಯ. ಒಂದೊಂದು ಅಂತಸ್ತಿನ ಕಛೇರಿಗಳನ್ನೂ ಒಮ್ಮೆ ಇಣುಕಿ ಹೋಗುತ್ತಿದ್ದರು. ಇಡೀ ಲೋಕಾಯುಕ್ತ ಕಛೇರಿ ತಲ್ಲಣಿಸಿ ಹೋಗುತ್ತಿತ್ತು. ಅವರೆಲ್ಲಿ ಬಂದಾರೋ ಎಂದು ಅಧಿಕಾರಿ, ಸಿಬ್ಬಂದಿ ವರ್ಗ ಸಮಯಕ್ಕೆ ಸರಿಯಾಗಿ ಬರುತ್ತಿದ್ದರು. ಕೆಲಸಗಳು ಸುಸೂತ್ರವಾಗಿ ಸಾಗುತ್ತಿದ್ದವು. ಮೇಲಧಿಕಾರಿ ಚುರುಕಾಗಿದ್ದರೆ ಸಿಬ್ಬಂದಿಯೂ ಹೇಗೆ ಚುರುಕಾಗುತ್ತಾರೆಂಬುದಕ್ಕೆ ವೆಂಕಟಾಚಲರ ಆಡಳಿತ ಸಾಕ್ಷಿ. ಅವರಿಂದಾಗಿ ಕರ್ನಾಟಕ ಲೋಕಾಯುಕ್ತ ಹೊಸ ಕಾಯಕಲ್ಪ ಪಡೆಯಿತು. ಭ್ರಷ್ಟರು ಕನಸಿನಲ್ಲಿಯೂ ಬೆಚ್ಚುವಂತಾಯಿತು. ಭ್ರಷ್ಟರನ್ನು ಬಲಿ ಹಾಕಬಲ್ಲ ಅಂಥಾದೊಂದು ಬಲಿಷ್ಟ ಸಂಸ್ಥೆ ಇದೆ ಎಂಬುದೇ ಜನ ಸಾಮಾನ್ಯರಿಗೆ ಅದುವರೆಗೆ ತಿಳಿದಿರಲಿಲ್ಲ. ಜಸ್ಟೀಸ್ ವೆಂಕಟಾಚಲ ಅವರು ಹಾಕಿಕೊಟ್ಟ ಅಡಿಪಾಯದಿಂದಾಗಿ, ಮುಂದೆ ಜಸ್ಟೀಸ್ ಶ್ರೀ ಸಂತೋಷ್ ಹೆಗ್ಡೆಯವರು ಪರಿಣಾಮಕಾರಿಯಾಗಿ ಕೆಲಸ ಮಾಡಲು ನೆರವಾಯಿತು. ನೆನಪಾಗುವ ಅವರ ಇನ್ನೊಂದು ಮಾತು: ‘ಒಬ್ಬ ಸರ್ಕಾರಿ ನೌಕರ ಒಂದು ಒಳ್ಳೆಯ ಮನೆ ಕಟ್ಟಿದ್ದಾನೆ ಅಂದರೆ ಕಟ್ಟಿಕೊಳ್ಳಲಿ ಬಿಡ್ರೀ. ಸ್ವಂತ ಮನೆಯಲ್ಲಿ ಆರಾಮಾಗಿ ಚೆನ್ನಾಗಿ ಬದುಕಲಿ. ಆದರೆ, ನಾಲ್ಕಾರು ಕಾಂಪ್ಲೆಕ್ಸ್‌ಗಳನ್ನು ಕಟ್ಟಿ ಮೆರೆಯುತ್ತಿದ್ದಾನೆ ಅಂದರೆ ಒಂದು ಕಣ್ಣಿಡಿ’ ಇಂತಹ ಅದೆಷ್ಟೋ ಮಾತುಗಳು, ಸ್ವಚ್ಛತೆ ಮತ್ತು ಕೊಳಕುಗಳ ನಡುವೆ ಮಾನವೀಯ ಅಂತಃಕರಣ ಹಾಗೂ ನ್ಯಾಯಪರತೆ ಇಟ್ಟುಕೊಂಡಿದ್ದವರು ನ್ಯಾ. ವೆಂಕಟಾಚಲ.
from India & World News in Kannada | VK Polls https://ift.tt/36plLRi