ಚೆನ್ನೈ: ಕಳೆದ ಮೂರು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಮಾಜಿ ನಾಯಕ ಎಬಿ ಡಿವಿಲಿಯರ್ಸ್, ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯುವ ಐಸಿಸಿ ಟೂರ್ನಿಯಲ್ಲಿ ರಾಷ್ಟ್ರೀಯ ತಂಡದ ಪರ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ಪರ 2017ರಲ್ಲಿ ಕೊನೆಯ ಬಾರಿ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದ್ದ ಎಬಿ ಡಿವಿಲಿಯರ್ಸ್ ಭಾರತದಲ್ಲಿ ಈ ಬಾರಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳಲು ಸಿದ್ದನಿದ್ದೇನೆಂಬ ಅಂಶವನ್ನು ತಿಳಿಸಿದ್ದಾರೆ. ಎಬಿ ಡಿವಿಲಿಯರ್ಸ್ 2018ರ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ಪರ ಕೊನೆಯ ಏಕದಿನ ಪಂದ್ಯವಾಡಿದ್ದರು ಹಾಗೂ 2017ರಲ್ಲಿ ಅಕ್ಟೋಬರ್‌ನಲ್ಲಿ ಕೊನೆಯ ಟಿ20 ಪಂದ್ಯವಾಡಿದ್ದರು. ಆದರೆ, ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಬಿಡಿ ತೋರುತ್ತಿರುವ ಫಾರ್ಮ್‌ನಿಂದಾಗಿ ಟಿ20 ವಿಶ್ವಕಪ್ ಆಫ್ರಿಕಾ ತಂಡಕ್ಕೆ ಮರಳುವ ಸಾಧ್ಯತೆ ಇದೆ. "ಬೌಷರ್ ಬಳಿ ನಾನು ಇನ್ನೂ ಚರ್ಚೆ ನಡೆಸಿಲ್ಲ. ಐಪಿಎಲ್ ವೇಳೆ ಯಾವುದೋ ಒಂದು ಸಮಯದಲ್ಲಿ ನಾವು ಮಾತನಾಡಲು ಎದುರು ನೋಡುತ್ತಿದ್ದೇವೆ," ಎಂದು ಭಾನುವಾರ ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಹೇಳಿದ ಡಿವಿಲಿಯರ್ಸ್, "ಕೊನೆಯ ವರ್ಷ ಅವರು(ಬೌಷರ್) ನನ್ನ ಬಳಿ ಕೇಳಿದ್ದರು. ನಿಮಗೆ ಆಸಕ್ತಿ ಇದೆಯೇ ಎಂದು ಕೇಳಿದ್ದಕ್ಕೆ ನಾನು ಹೌದು ಖಂಡಿತಾ ಇದೆ ಎಂದು ಹೇಳಿದ್ದೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿನ ಫಾರ್ಮ್, ಫಿಟ್ನೆಸ್, ಸನ್ನಿವೇಶವನ್ನು ಅರಿತುಕೊಂಡು ಬೌಷರ್ ನನ್ನನ್ನು ರಾಷ್ಟ್ರೀಯ ತಂಡಕ್ಕೆ ಪರಿಗಣಿಸಬಹುದು," ಎಂದು ಎಬಿಡಿ ತಿಳಿಸಿದ್ದಾರೆ. "ನನಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಇಲ್ಲವಾದರೆ ಪರವಾಗಿಲ್ಲ. ಆದರೆ, ನಾನು ತಂಡದಲ್ಲಿದ್ದರೆ ಸಂಗತಿಗಳು ಹೇಗಿರುತ್ತವೆ ಎಂಬುದನ್ನು ನೋಡಲು ಅದ್ಭುತವಾಗಿರುತ್ತದೆ. ಐಪಿಎಲ್ ಟೂರ್ನಿಯ ಕೊನೆಯಲ್ಲಿ ಬೌಷರ್ ಅವರ ಕರೆಗೋಸ್ಕರ ಕಾಯುತ್ತಿದ್ದೇನೆ ಹಾಗೂ ಅದಕ್ಕೆ ತಕ್ಕಂತೆ ಮುನ್ನಡೆಯುತ್ತೇನೆ," ಎಂದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ತಿಳಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ಕೇವಲ 9 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಂತರ ಅದ್ಭುತ ಬ್ಯಾಟಿಂಗ್ ಮಾಡಿದ ಗ್ಲೆನ್ ಮ್ಯಾಕ್ಸ್‌ವೆಲ್ 49 ಎಸೆತಗಳಲ್ಲಿ 78 ರನ್ ಗಳಿಸಿದರೆ, ಎಬಿ ಡಿವಿಲಿಯರ್ಸ್ 34 ಎಸೆತಗಳಲ್ಲಿ ಅಜೇಯ 76 ರನ್ ಗಳಿಸಿದ್ದರು. ಆ ಮೂಲಕ ಬೆಂಗಳೂರು ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್ ಕಳೆದುಕೊಂಡು 204 ರನ್ ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ 166 ರನ್‌ಗಳಿಗೆ ಸೀಮಿತವಾಗಿತ್ತು ಹಾಗೂ 38 ರನ್‌ಗಳಿಂದ ಸೋಲು ಅನುಭವಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳುವ ಸಲುವಾಗಿ ನಾನು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿದ್ದ ಎಂಬುದನ್ನು ಡಿವಿಲಿಯರ್ಸ್ ಹೇಳಿದರು. "ತಂಡದಲ್ಲಿ ನಾನು ಯಾವುದೇ ಕ್ರಮಾಂಕದಲ್ಲಿ ಆಡಲು ಸಿದ್ದನಿದ್ದೇನೆ. ತಂಡದ ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿ ಗೆಲ್ಲಿಸಿಕೊಡುವುದು ನನಗೆ ತುಂಬಾ ಮುಖ್ಯ. ಆದರೆ, ಓಪನಿಂಗ್ ಮಾಡಬೇಕು, ಹೆಚ್ಚಿನ್ ರನ್ ಗಳಿಸಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆಯಬೇಕು. ಎಂಬಿತ್ಯಾದಿ ಅಂಶಗಳು ನನಗೆ ಮುಖ್ಯ ಅಲ್ಲವೇ ಅಲ್ಲ. ತಂಡದ ಗೆಲುವಿಗೋಸ್ಕರ ಆಡಬೇಕೆಂಬುದು ನನ್ನ ಗುರಿ," ಎಂದು ತಿಳಿಸಿದರು. "ನಾನು ಬ್ಯಾಟಿಂಗ್ ಮಾಡುವ ಮುನ್ನ ನನ್ನ ಪಾತ್ರದ ಬಗ್ಗೆ ಸಂವಹನ ನಡೆಸುತ್ತೇನೆ ಹಾಗೂ ಅದಕ್ಕೆ ತಕ್ಕಂತೆ ಮಾನಸಿಕವಾಗಿ ತಯಾರಿ ನಡೆಸುತ್ತೇನೆ. ಸನ್ನಿವೇಶಕ್ಕೆ ತಕ್ಕಂತೆ 5 ಅಥವಾ 6ನೇ ಕ್ರಮಾಂಕದಲ್ಲಿ ಆಡುತ್ತೇನೆ. ಆರ್‌ಸಿಬಿ ಅಗತ್ಯಕ್ಕೆ ತಕ್ಕಂತೆ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ನಾನು ಸಿದ್ದ," ಎಂದು ಎಬಿ ಡಿವಿಲಿಯರ್ಸ್ ಹೇಳಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3txflKW