ನಾಗರಾಜು ಅಶ್ವತ್ಥ್ ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಾಕ್‌ಡೌನ್ ಬಳಿಕವಂತೂ ಮೀಟರ್‌ಬಡ್ಡಿ ದಂಧೆಗೆ ಜೀವ ಬಂದಿದೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ನೇಕಾರರು, ಸಣ್ಣ ವ್ಯಾಪಾರಿಗಳು ಕಳೆದ ವರ್ಷ ಕುಟುಂಬ ನಿರ್ವಹಣೆಗೆಂದು ಲಕ್ಷಾಂತರ ರೂ. ಸಾಲ ಪಡೆದಿದ್ದು, ಸದ್ಯ ಬಡ್ಡಿ ಕಟ್ಟಲಾಗದೆ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಕೆಲವೆಡೆ ಮೀಟರ್ ಬಡ್ಡಿ ದಂಧೆಯ ತೀವ್ರತೆಗೆ ಸಾವಿನ ಪ್ರಕರಣಗಳು ವರದಿಯಾಗುತ್ತಿದ್ದು, ಸರಕಾರ ದಂಧೆಗೆ ಕಡಿವಾಣ ಹಾಕಬೇಕಿದೆ. ಮೀಟರ್‌ಬಡ್ಡಿ ಜೀವಂತ: ರಾಜ್ಯದಲ್ಲಿ ಸಾಮಾನ್ಯವರಿಗೆ ನೆರವಾಗಲೆಂದು ‘ಬಡವರ ಬಂಧು’ ಯೋಜನೆ ಮೂಲಕ 2-10 ಸಾವಿರ ರೂ. ಸಾಲ ಸೌಲಭ್ಯವಿದೆ. ಆದರೆ, ಡಿಸಿಸಿ ಬ್ಯಾಂಕ್ ಸುತ್ತ ದಾಖಲೆ, ಅರ್ಜಿ ಹಿಡಿದು ಅಲೆಯುವ ತಲೆ ನೋವೇಕೆ ಎಂದು ಸಣ್ಣ ವ್ಯಾಪಾರಿಗಳು ಬಡ್ಡಿ ಹಣ ಪಡೆಯುತ್ತಿದ್ದಾರೆ. ಇದಕ್ಕೆ ಜಾಗೃತಿಯ ಕೊರತೆಯಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಡ್ಡಿ ದಂಧೆಕೋರರು ಎಪಿಎಂಸಿ, ಮಾರುಕಟ್ಟೆಗಳ ಬೀದಿ ಬದಿ ವ್ಯಾಪಾರಿಗಳಿಗೆ ಬೆಳಗ್ಗೆ 5 ಗಂಟೆಗೆ ಸಾಲ ನೀಡುತ್ತಾರೆ. ಬೆಳಗ್ಗೆ ಕೊಡುವಾಗಲೇ ಸಾಲದಲ್ಲಿ ಶೇ.10-15 ಬಡ್ಡಿ ದರ ಕಡಿತಗೊಳಿಸಿ ನೀಡಿ, ಸಂಜೆ ಮರಳಿ ವಾಪಸ್ ಪಡೆಯುತ್ತಾರೆ. ಜತೆಗೆ, ನೇಕಾರರು, ಸಣ್ಣ ವ್ಯಾಪಾರಸ್ಥರಿಗೆ ಮಾಸಿಕ ಶೇ.10 ಬಡ್ಡಿ ದರಕ್ಕೆ ಸಾಲ ನೀಡುವ ಫೈನಾನ್ಸ್ ಪದ್ಧತಿ ಜೀವಂತವಾಗಿದೆ. ಖಾಕಿಯ ಶ್ರೀರಕ್ಷೆ?: ರಾಜ್ಯದಲ್ಲಿ ಬಡ್ಡಿ ದಂಧೆಕೋರರ ರಕ್ಷಣೆಗೆ ಖಾಕಿ ನಿಂತಿದೆ ಎನ್ನುವ ಆರೋಪಗಳಿವೆ. ಇಲಾಖೆಯ ಸಹಾಯವಾಣಿ ಇದ್ದರೂ ದೂರುಗಳು ಮಾತ್ರ ಠಾಣೆ ಮೆಟ್ಟಿಲೇರುತ್ತಿಲ್ಲ. ಇದಕ್ಕೆ ಕಾರಣ ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಬಡ್ಡಿ ದಂಧೆಯಲ್ಲಿ ತೊಡಗಿರುವ ಗುಮಾನಿಗಳಿಂದಾಗಿ ಜನರು ಠಾಣೆಗಳತ್ತ ಮುಖ ಮಾಡುತ್ತಿಲ್ಲ. ಇದನ್ನೆ ಬಂಡವಾಳವಾಗಿಸಿಕೊಳ್ಳುವ ಕಾರ್ಪೊರೇಟರ್‌ಗಳು, ರಾಜಕಾರಣಿಗಳು, ಫೈನಾನ್ಸ್ ಕಂಪನಿಗಳು ಮನಸೋ ಇಚ್ಛೆ ಬಡ್ಡಿ ದರ ಫಿಕ್ಸ್ ಮಾಡಿ ಜನರನ್ನು ಸುಲಿಗೆ ಮಾಡುತ್ತಿರುವುದು ವಾಸ್ತವ. ದಂಧೆಗೆ ಬಲಿ: ರಾಜ್ಯದಲ್ಲಿ ಅನೇಕರು ಮೀಟರ್ ಬಡ್ಡಿಗೆ ಬೇಸತ್ತು ಸಾವಿನ ಕದ ತಟ್ಟುತ್ತಿದ್ದಾರೆ. ಜ.9ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿ ಯುವಕ ರಾಘವೇಂದ್ರ ಮೀಟರ್ ಬಡ್ಡಿ ದಂಧೆಗೆ ಸಿಲುಕಿ ಸೆಲ್ಫಿ ವೀಡಿಯೊ ಮಾಡಿ ಸಾವಿಗೆ ಶರಣಾಗಿದ್ದ. ತಾನು ಪಡೆದಿದ್ದ 8 ಲಕ್ಷ ರೂ. ಸಾಲಕ್ಕೆ ಲಕ್ಷಾಂತರ ರೂ. ಬಡ್ಡಿ ಸೇರಿಸಿ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಯುವಕ ವೀಡಿಯೊದಲ್ಲಿ ತಿಳಿಸಿದ್ದ. ಇದೇ ರೀತಿಯ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗುತ್ತಿವೆ.
from India & World News in Kannada | VK Polls https://ift.tt/3rs1wMj