ಏಳು ಮಂದಿ ಅಂತಾರಾಜ್ಯ ಕಾರು ಕಳ್ಳರ ಬಂಧನ; ₹4 ಕೋಟಿ ಮೌಲ್ಯದ 48 ಕಾರುಗಳ ವಶ..!

ಬೆಂಗಳೂರು: ಬಾಣಸವಾಡಿ ಉಪ ವಿಭಾಗದ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಏಳು ಮಂದಿ ಅಂತಾರಾಜ್ಯ ಖದೀಮರನ್ನು ಬಂಧಿಸಿ, ಸುಮಾರು ನಾಲ್ಕು ಕೋಟಿ ರೂ. ಮೌಲ್ಯದ ನಾನಾ ಮಾದರಿಯ 48 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರ ಪ್ರದೇಶ ಮೂಲದ ಶೇಖ್‌ ಮುಕ್ತಿಯಾರ್‌(30), ವಿನೋದ್‌ ಕುಮಾರ್‌(32), ರಮೇಶ್‌ ನಾಯ್ಡು(40), ನರಸಿಂಹ ರೆಡ್ಡಿ(35), ಪ್ರಭಾಕರ್‌(34), ಚಾಕ್ಲಿನರೇಶ್‌(32), ಬೆಂಗಳೂರಿನ ಫ್ರೇಜರ್‌ಟೌನ್‌ನ ರಿಯಾಜ್‌(33) ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನಾಯತ್‌, ಸಲೀಂ, ಜಬಿ ಮತ್ತು ಸುಹೇಲ್‌ನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋವಿಂದಪುರದ ಭೈರಪ್ಪ ಲೇಔಟ್‌ ನಿವಾಸಿ ನೂರ್‌ ಅಹಮ್ಮದ್‌ ಅವರ ಕಾರನ್ನು ಮಾರಾಟ ಮಾಡಿ ಹಣ ಕೊಡಿಸುತ್ತೇನೆ ಎಂದು ಹೇಳಿ ರಿಯಾಜ್‌, ಜಬಿ, ಸುಹೇಲ್‌ ಹಾಗೂ ಇನ್ನಿತರರು ಕಾರು ಪಡೆದುಕೊಂಡಿದ್ದರು. ಆದರೆ, ಹಣ ನೀಡದೆ, ಕಾರನ್ನೂ ಹಿಂದಿರುಗಿಸದೆ ವಂಚಿಸಿರುವುದರ ಜತೆಗೆ ಪ್ರಾಣ ಬೆದರಿಕೆ ಹಾಕಿದ್ದ ಬಗ್ಗೆ ಕೆ.ಜಿ.ಹಳ್ಳಿ ಠಾಣೆ ಪೊಲೀಸರಿಗೆ ನೂರ್‌ ಅಹಮ್ಮದ್‌ ದೂರು ನೀಡಿದ್ದರು. ಹೊಸ ನೋಂದಣಿ: ಆಂಧ್ರಪ್ರದೇಶ ಮೂಲದ ಆರೋಪಿಗಳು ಆರೋಪಿಗಳೊಂದಿಗೆ ಸಂಪರ್ಕ ಬೆಳೆಸಿ, ಕರ್ನಾಟಕ ನೋಂದಣಿ ಸಂಖ್ಯೆಯ ಕಾರುಗಳಿಗೆ ಎನ್‌ಓಸಿ ಇಲ್ಲದೆ ಹೊಸ ನೋಂದಣಿ ಮಾಡಿಸುತ್ತಿದ್ದರು. ಈ ರೀತಿ ತಮ್ಮ ವಶಕ್ಕೆ ಪಡೆದುಕೊಂಡ ಕಾರುಗಳನ್ನು ಮೂಲತಃ ಹಿಂದೂಪುರ ನಿವಾಸಿಯಾದ ಶೇಖ್‌ ಮುಕ್ತಿಯಾರ್‌ ತನ್ನ ಸಹಚರರೊಂದಿಗೆ ಸೇರಿ ಪರಿಚಯವಿದ್ದ ಆಂಧ್ರ ಪ್ರದೇಶದ ಅನಂತಪುರದ ಆರ್‌ಟಿಓ ಕಚೇರಿ ಏಜೆಂಟ್‌ ಹಾಗೂ ಕಾರ್‌ ಡೀಲರ್‌ ಆಗಿರುವ ವಿನೋದ್‌ ಮೂಲಕ ಆತನ ಸಹಚರರಾದ ರಮೇಶ್‌ ನಾಯ್ಡು, ನರಸಿಂಹ ರೆಡ್ಡಿ, ಟಿ.ಪ್ರಭಾಕರ್‌, ಚಾಕ್ಲಿನರೇಶ್‌ಗೆ ನೀಡುತ್ತಿದ್ದರು. ಅನಂತಪುರದ ಎಪಿ-39 ಆರ್‌ಟಿಓ ಕಚೇರಿಯಲ್ಲಿಅಧಿಕಾರಿಗಳ ವಿಶ್ವಾಸ ಬಳಸಿಕೊಂಡು ಎನ್‌ಓಸಿ ಇಲ್ಲದೆಯೇ ಕರ್ನಾಟಕ ನೋಂದಣಿ ಮಾಡಿಸಿ, ಲಕ್ಷಾಂತರ ರೂ.ಗೆ ಮಾರಾಟ ಮಾಡಿ ಹಣ ಹಂಚಿಕೊಳ್ಳುತ್ತಿದ್ದರು. ಶಾಮೀಲಾದ ಆರ್‌ಟಿಓ ಅಧಿಕಾರಿಗಳು ಅಮಾನತು: ಎನ್‌ಓಸಿ ಇಲ್ಲದೆ ರಾಜ್ಯದ ನೋಂದಣಿ ಸಂಖ್ಯೆ ಇರುವ ಕಾರುಗಳಿಗೆ ಹೊಸ ನೋಂದಣಿ ಮಾಡಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅನಂತಪುರ ಡೆಪ್ಯೂಟಿ ಟ್ರಾನ್ಸ್‌ಪೋರ್ಟ್‌ ಕಮಿಷನರ್‌ ಎನ್‌.ಶಿವರಾಮ ಪ್ರಸಾದ್‌, ಪರಿಶೀಲನೆ ನಡೆಸಿ ಕೃತ್ಯಕ್ಕೆ ಸಹಕರಿಸುತ್ತಿದ್ದ ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಮುಂದಿನ ಕ್ರಮಕ್ಕಾಗಿ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೂರ್ವ ವಿಭಾಗದ ಉಪ ಪೊಲೀಸ್‌ ಆಯುಕ್ತ ಶರಣಪ್ಪ ಮಾರ್ಗದರ್ಶನದಲ್ಲಿ ಬಾಣಸವಾಡಿ ಉಪವಿಭಾಗದ ನಿಂಗಪ್ಪ ಬಿ.ಸಕ್ರಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ ಸಂತೋಷ್‌ ಕುಮಾರ್‌ ಅವರನ್ನೊಳಗೊಂಡ ತಂಡ, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆ ನಡೆಸಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಮುರುಘನ್‌ ಅವರು ನಗದು ಬಹುಮಾನ ನೀಡಿ ಪ್ರಶಂಸಿಸಿದ್ದಾರೆ.


from India & World News in Kannada | VK Polls https://ift.tt/3oGJ5li

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...