
ಆರ್.ಶ್ರೀಧರ್ ರಾಮನಗರ: ಹಣ್ಣು, ತರಕಾರಿಗಳನ್ನು ನೇರವಾಗಿ ರೈತರಿಂದ ಖರೀದಿಸಿ ಮಾರಾಟ ಮಾಡುವ ಹಾಪ್ ಕಾಮ್ಸ್ ಮಳಿಗೆಗಳ ಕೊರತೆ ಜಿಲ್ಲೆಯ ತೋಟಗಾರಿಕೆ ಬೆಳೆಗಾರರ ನಿದ್ದೆಗೆಡಿಸಿದೆ. ಜಿಲ್ಲೆಯಲ್ಲಿ ಹಲಸು, ಮಾವು, ಟೊಮೆಟೊ, ಬಾಳೆ, ದಾಳಿಂಬೆ, ನಿಂಬೆ, ಪಪ್ಪಯಾ, ನುಗ್ಗೆ ಹಾಗೂ 30 ಜಾತಿಯ ತರಕಾರಿಗಳನ್ನು ರೈತರು ಬೆಳೆಯುತ್ತಿದ್ದಾರೆ. ಇದಕ್ಕೆ ಸೂಕ್ತ ಮಾರುಕಟ್ಟೆ ಸಿಗದ ಕಾರಣ ಮಧ್ಯವರ್ತಿಗಳಿಗೆ ನೀಡುವುದು ಅನಿವಾರ‍್ಯವಾಗಿದೆ. ಇರುವುದು ಒಂದೇ ಕೇಂದ್ರ ಜಿಲ್ಲೆಯಲ್ಲಿ ಚನ್ನಪಟ್ಟಣ ತಾಲೂಕಿನಲ್ಲಿ ಇರುವುದು ಒಂದೇ ಹಾಪ್‌ಕಾಮ್ಸ್ ಖರೀದಿ ಕೇಂದ್ರ. ಇದರಿಂದ ಸ್ಥಳೀಯ ರೈತರಿಗೆ ಮಾತ್ರ ಅನುಕೂಲ. ಉಳಿದ ತಾಲೂಕುಗಳಲ್ಲಿ ತೋಟಗಾರಿಕೆ ಬೆಳೆಗಳ ಮಾರಾಟಕ್ಕೆ ರೈತರು ಸಮೀಪವಿರುವ ಬೆಂಗಳೂರು, ತುಮಕೂರು ಮಾರುಕಟ್ಟೆಗಳಿಗೆ ತೆರಳಬೇಕು. ನಗರಗಳಲ್ಲೇ ಹೆಚ್ಚು ಬೆಂಗಳೂರು ಹಾಪ್ ಕಾಮ್ಸ್ ವಲಯದ ವ್ಯಾಪ್ತಿಗೆ ಬರುವ ರಾಮನಗರ, ಬೆಂಗಳೂರುನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೊಲಾರ ಜಿಲ್ಲೆಗಳಲ್ಲಿ ಒಟ್ಟು 310 ಹಾಪ್ ಕಾಮ್ಸ್ ಮಳಿಗೆಗೆಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ 257ಕ್ಕೂ ಹೆಚ್ಚಿನ ಮಳಿಗೆಗಳು ನಗರ ಪ್ರದೇಶದಲ್ಲಿವೆಯೇ ಹೊರತು ಗ್ರಾಮೀಣ ಪ್ರದೇಶಗಳತ್ತ ಸುಳಿದಿಲ್ಲ. ಸೊಸೈಟಿ ತೀರ್ಮಾನ ಅಂತಿಮ ಜಿಲ್ಲಾ ತೋಟಗಾರಿಕೆ ಇಲಾಖೆಯೆನೋ ತಾಲೂಕು ಹಂತದಲ್ಲಿ ಹಾಪ್‌ಕಾಮ್ಸ್ ಕೇಂದ್ರ ತೆರೆಯಲು ಉಚಿತ ಜಾಗ ನೀಡುವುದಾಗಿ ತಿಳಿಸಿ ಹಾಪ್‌ಕಾಮ್ಸ್ ಸೊಸೈಟಿಗೆ ಮನವಿ ಮಾಡಿಕೊಂಡಿದೆ. ಆದರೆ ಸೊಸೈಟಿ ಸಾಧಕ ಬಾಧಕ ಅರಿತು ಸರಕಾರದ ಅನುಮತಿ ಪಡೆದು ತೀರ್ಮಾನಿಸಿ ನಿರ್ಧಾರ ಕೈಗೊಳ್ಳಬೇಕಿದೆ ಎನ್ನುತ್ತಾರೆ ಬೆಂಗಳೂರು ಹಾಪ್‌ಕಾಮ್ಸ್ ಸಂಸ್ಥೆ ನಿರ್ದೇಶಕರು. ಪ್ರಾಯೋಗಿಕ ಯೋಜನೆಗೆ ಸಿದ್ದತೆ ? ರೈತರಿಂದ ಕೊಂಡ ಮತ್ತು ತರಕಾರಿಗಳನ್ನು ಬೆಂಳೂರು ಮಹಾನಗರದ ಆಸ್ಪತ್ರೆ, ಬಹುಮಳಿಗೆ ಕಟ್ಟಡಗಳು, ಹೋಟಲ್, ಅಂಗಡಿ, ಜನಸಂದಣಿ ಇರವ ಸ್ಥಳಗಳಲ್ಲಿ ಮಾರಾಟ ಮಾಡಲು ಹಾಪ್‌ಕಾಮ್ಸ್ ಸಿದ್ದತೆ ನಡೆಸಿದ್ದು, ಇದಕ್ಕಾಗಿ ಸಂಚಾರಿ ಮಳಿಗೆಗಳನ್ನು ಸಿದ್ದಪಡಿಸುತ್ತಿದೆ. ಇದೇ ತಂತ್ರವನ್ನು ಗ್ರಾಮೀಣ ಭಾಗಗಳ ರೈತರಿಂದ ಉತ್ಪನ್ನ ಖರೀದಿಗೂ ವಿಸ್ತರಿಸಬೇಕು. ಸಂಚಾರಿ ಖರೀದಿ ಕೇಂದ್ರಗಳನ್ನು ಆರಂಭಿಸುವ ಯೋಜನೆಯೂ ಹಾಪ್‌ಕಾಮ್ಸ್ ಮುಂದಿದೆ. ಸಿರಿಧಾನ್ಯದ ಮಾರಾಟಸಿರಿಧಾನ್ಯಗಳು ಆರೋಗ್ಯಕರ ಗುಣ ವೈಶಿಷ್ಟ್ಯದಿಂದಾಗಿ ವ್ಯಾಪಕ ಜನಪ್ರಿಯತೆ ಗಳಿಸುತ್ತಿದೆ. ಬೇಡಿಕೆ ಹೆಚ್ಚುತ್ತಿರುವ ಕಾರಣ ರೈತರಿಗೆ ಅನುಕೂಲವಾಗಲಿ ಎಂದು ಹಾಪ್ ಕಾಮ್ಸ್ ಗಳಲ್ಲಿ ಧಾನ್ಯಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲು ರಾಜ್ಯ ಸರಕಾರ ಯೋಜಿಸಿದೆ. ಹಾಪ್ ಕಾಮ್ಸ್ ಹಾಗೂ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮಳಿಗೆಗಳ ಮೂಲಕ ಸಿರಿಧಾನ್ಯಗಳ ಮಾರಾಟ ನಡೆಸುವ ಪ್ರಸ್ತಾಪ ಸರಕಾರದ ಮುಂದಿದೆ. ಇಂತಹ ಕ್ರಮವು ಗ್ರಾಹಕರಿಗೆ ಧಾನ್ಯಗಳು ಸಮರ್ಪಕ ಬೆಲೆಗೆ ಸಿಗಲು ಸಹಕಾರಿಯಾಗಲಿದೆ. ರೈತರಿಗೆ ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಆದಾಯವನ್ನು ಪಡೆಯಲು ಸಹ ಇದು ಅನುಕೂಲಕರವಾಗಿದೆ. ಆದರೆ ಮೊದಲು ಹಾಪ್‌ಕಾಮ್ಸ್ ಮಳಿಗೆಗಳನ್ನು ತಾಲೂಕು ಕೇಂದ್ರಗಳಲ್ಲಿ ಸ್ಥಾಪನೆಯಾದರೆ ರಾಜ್ಯ ಸರಕಾರದ ಸಿರಿಧಾನ್ಯ ಮಾರಾಟ ಯೋಜನೆಗೆ ಅರ್ಥಬರಲಿದೆ. 5 ಜಿಲ್ಲೆಗಳನ್ನೊಳಗೊಂಡ ಹಾಪ್‌ಕಾಮ್ಸ್ ವಲಯದಲ್ಲಿ ಹೆಚ್ಚಿನ ಹಣ್ಣು, ಬೆಳೆಯುವ ಭಾಗಗಳನ್ನು ಗುರುತಿಸಿ ಅಂತಹ ತಾಲೂಕುಗಳಲ್ಲಿ ಹಂತಹಂತವಾಗಿ ಖರೀದಿ ಕೇಂದ್ರಗಳನ್ನು ತೆರೆಯುವ ಯೋಜನೆ ಇದೆ. ಸೊಸೈಟಿ ತೀರ್ಮಾನದ ಮಾಹಿತಿ ನೀಡುತ್ತೇವೆ. ಪ್ರಸಾದ್, ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು. ಸರಕಾರ ತಾಲೂಕು ಕೇಂದ್ರಗಳಿಗೊಂದು ಹಾಪ್‌ಕಾಮ್ಸ್ ನಿರ್ಮಿಸಿಕೊಟ್ಟರೆ ರೈತರ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಶಕ್ತಿ ತುಂಬಿದಂತಾಗುತ್ತದೆ. ರೈತರು ತಮ್ಮ ಬೆಳೆಗಳನ್ನು ನೂರಾರು ಕಿಲೋಮೀಟರ್ ವರೆಗೆ ಸಾಗಿಸಿ ಮಾರಾಟ ಮಾಡುವುದು ತಪ್ಪಲಿದೆ. ಚಂದ್ರಣ್ಣ, ರೈತ ಸಂಕೀಘಟ್ಟ
from India & World News in Kannada | VK Polls https://ift.tt/37HB4XG