ಹೊಸದಿಲ್ಲಿ: ಆಸ್ಟ್ರೇಲಿಯಾ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಪರ 2021ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಆಡಲು ಎದುರು ನೋಡುತ್ತಿದ್ದಾರೆ. ಅಂದ ಹಾಗೆ, ಆರ್‌ಸಿಬಿ ಪರ ಕಣಕ್ಕೆ ಇಳಿಯುವ ಮುನ್ನ 2019ರ ಕಠಿಣ ಸಮಯದಲ್ಲಿ ಕೊಹ್ಲಿ ಮಾಡಿದ್ದ ಸಹಾಯವನ್ನು ಇದೀಗ ಆಸೀಸ್ ಆಟಗಾರ ಬಹಿರಂಗಪಡಿಸಿದ್ದಾರೆ. ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿದ ಆಸ್ಟ್ರೇಲಿಯಾ ಆಟಗಾರ, ನಾವಿಬ್ಬರೂ ತುಂಬಾ ವರ್ಷಗಳಿಂದ ಉತ್ತಮ ಸ್ನೇಹಿತರು ಎಂದು ಹೇಳಿದರು. ಇದೀಗ ಕೊಹ್ಲಿ ಹಾಗೂ ಮ್ಯಾಕ್ಸ್‌ವೆಲ್ ಇಬ್ಬರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 14ನೇ ಐಪಿಎಲ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಫೆಬ್ರುವರಿ 18 ರಂದು ನಡೆದಿದ್ದ ಐಪಿಲ್ ಆಟಗಾರರ ಹರಾಜಿನಲ್ಲಿ ಅವರನ್ನು ಆರ್‌ಸಿಬಿ 14.25 ಕೋಟಿ ರೂ. ಗಳಿಗೆ ಖರೀದಿಸಿತ್ತು. 2019ರಲ್ಲಿ ಮಾನಸಿಕ ಆರೋಗ್ಯದ ವಿರುದ್ಧ ಹೋರಾಡುತ್ತಿದ್ದ ವೇಳೆ ವಿರಾಟ್ ಕೊಹ್ಲಿ ನೀಡಿದ್ದ ಸಹಾಯ ಹಾಗೂ ಬೆಂಬಲವನ್ನು ಎಎಪಿಯೊಂದಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಹಂಚಿಕೊಂಡಿದ್ದಾರೆ. "ಅವರು(ಕೊಹ್ಲಿ) ನನ್ನ ನಿಲುವಿಗೆ ದೃಢವಾದ ಬೆಂಬಲಿಗರಾಗಿದ್ದಾರೆ. ಒಂದು ರೀತಿಯಲ್ಲಿ ನನ್ನಲ್ಲಿ ಹಾದುಹೋಗುವ ಬಹಳಷ್ಟು ಸಂಗತಿಗಳು, ಬಹಳಷ್ಟು ನಿರೀಕ್ಷೆ ಮತ್ತು ಒತ್ತಡವನ್ನು ಅವರು ಬಹುಶಃ ಅರ್ಥಮಾಡಿಕೊಂಡಿದ್ದಾರೆ. ಅದು ಅವರಿಗೂ ಸಂಬಂಧಿಸಬಹುದೆಂದು ನನಗೆ ಖಾತ್ರಿಯಿದೆ," ಎಂದು ಹೇಳಿದರು. ಈ ಹಿಂದೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಠಿಣ ಹೋರಾಟ ನಡೆಸುತ್ತಿದ್ದರಿಂದ ಎರಡು ತಿಂಗಳುಗಳ ಕಾಲ ಮ್ಯಾಕ್ಸ್‌ವೆಲ್ ಆಟದಿಂದ ದೂರ ಉಳಿದಿದ್ದರು ಹಾಗೂ ಆ ಅವಧಿಯಲ್ಲಿ ಆಟಕ್ಕೆ ಮರಳುವುದು ಅವರ ಮನಸ್ಸಿನ ಕೊನೆಯ ವಿಷಯ ಎಂದು ಬಹಿರಂಗಪಡಿಸಿದ್ದರು. ಎರಡು ತಿಂಗಳುಗಳ ಕಾಲ ವಿರಾಮ ಪಡೆದಿದ್ದ ಬಳಿಕ ಕ್ಲಬ್ ಹಂತದ ಟೂರ್ನಿಯಾದ ವಿಕ್ಟೋರಿಯಾ ಪ್ರೀಮಿಯರ್ ಕ್ರಿಕೆಟ್ ಸ್ಪರ್ಧೆಯಲ್ಲಿ ಫಿಟ್ಜ್ರಾಯ್-ಡಾನ್‌ಕಾಸ್ಟರ್ ಪರ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ್ದರು. ನಂತರ, 2019-20ರ ಬಿಗ್‌ಬ್ಯಾಷ್ ಲೀಗ್ ಟೂರ್ನಿಯಲ್ಲಿಯೂ ಮೆಲ್ಬೋರ್ನ್ ಸ್ಟಾರ್ಸ್ ಪರ ಗ್ಲೆನ್ ಮಿಂಚಿದ್ದರು. 2014ರಲ್ಲಿ ಸತತ ಬ್ಯಾಟಿಂಗ್ ವೈಫಲ್ಯದಿಂದ ಖಿನ್ನತೆಯ ವಿರುದ್ಧ ಹೋರಾಡಿದ್ದ ಬಗ್ಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇತ್ತೀಚಿಗೆ ಒಪ್ಪಿಕೊಂಡಿದ್ದರು. ಇಂಗ್ಲೆಂಡ್ ಪ್ರವಾಸದ ಕಠಿಣ ಸಮಯದಲ್ಲಿ "ವಿಶ್ವದ ಏಕೈಕ ಒಂಟಿತನ ವ್ಯಕ್ತಿ" ಎಂದು ಭಾವಿಸಿದ್ದೆ ಎಂಬುದನ್ನು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3r4cbNF