
ಮೈಸೂರು: ವಿಶ್ವವಿಖ್ಯಾತ ಜಂಬೂ ಸವಾರಿ ಆರಂಭಕ್ಕೆ ಅರಮನೆಯ ಆವರಣ ಸಜ್ಜಾಗಿದೆ. ಇಂದು ಮಧ್ಯಾಹ್ನ 2:59 ರಿಂದ 3:20ರೊಳಗಿನ ಶುಭ ಮಕರ ಲಗ್ನದಲ್ಲಿ ಸಿಎಂ ಯಡಿಯೂರಪ್ಪ ಅವರು ನಂದಿಧ್ವಜಕ್ಕೆ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಲಿದ್ದಾರೆ. ನಂತರ 3:40 ರಿಂದ 4:15 ರೊಳಗಿನ ಶುಭ ಕುಂಭ ಲಗ್ನದಲ್ಲಿ ಅಭಿಮನ್ಯುವಿನ ಮೇಲೆ ಚಿನ್ನದ ಅಂಬಾರಿಯಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಂದ ಪುಷ್ಪಾರ್ಚನೆ ನಡೆಸಲಾಗುತ್ತದೆ. ಈ ಹಿನ್ನೆಲೆ ಇಂದು ಬೆಳಗ್ಗಿನ ಜಾವದಿಂದಲೇ ಜಂಬೂಸವಾರಿ ಹೊರಲಿರುವ ಆನೆಗಳಿಗೆ ಅರಮನೆಯ ಆವರಣದಲ್ಲಿ ಸ್ನಾನ ಮಾಡಿಸಿ ಸಿಂಗರಿಸಲಾಗುತ್ತಿದೆ. ಅಲ್ಲದೇ ಆನೆಗಳ ಮೇಲೆ ಕಲಾವಿದ ನಾಗಲಿಂಗಪ್ಪ ನೇತೃತ್ವದಲ್ಲಿ ಗಜಪಡೆಗೆ ಬಣ್ಣ ಹಚ್ಚುವ ಕೆಲಸವನ್ನು ಸಹ ಆರಂಭಿಸಿದ್ದಾರೆ. ಹುಣಸೂರು ಮೂಲದ ಒಟ್ಟು 5 ಕಲಾವಿದರು ದಸರಾ ಆನೆಗಳಿಗೆ ಈ ಬಾರಿಯೂ ಸಹ ವಿಶೇಷ ಬಣ್ಣಗಳಿಂದ ಅಲಂಕರಿಸುತ್ತಿದ್ದಾರೆ. ಆನೆಗಳ ಕಿವಿ ಮೇಲೆ ಶಂಖ, ಚಕ್ರ, ಸೊಂಡಿಲ ಮೇಲೆ ಗಂಡಭೇರುಂಡ, ಹೂವು, ಎಲೆ, ಬಳ್ಳಿ, ದಂತದ ಹಿಂಭಾಗ ಗಿಳಿ, ಎಲೆ, ಕೆನ್ನೆಯ ಮೇಲೆ ಹೂವು, ಬಳ್ಳಿ, ಮೊಗ್ಗು, ಎಲೆ, ಕಾಲುಗಳ ಮೇಲೆ ಪಕ್ಷಿ, ಎಲೆ, ಹೂವು, ಮೊಗ್ಗು, ಬಳ್ಳಿ, ಆನೆಗಳ ಬಾಲದ ಗಾತ್ರಕ್ಕೆ ತಕ್ಕಂತೆ ಪಕ್ಷಿಚಿತ್ರ ಹಾಗೂ ಹೂವು ಬಳ್ಳಿಗಳ ಅಲಂಕಾರ ಮಾಡುತ್ತಾರೆ. ಇದಾದ ಬಳಿಕ ಆನೆಯ ಕಣ್ಣಿನ ಸುತ್ತ ಎಲೆ ಆಕೃತಿ, ಹಣೆಯ ಮೇಲೆ ನಾಮ ಮತ್ತು ಸುರುಳಿ ಚಿತ್ರವನ್ನು ಜಾಗರೂಕವಾಗಿ ಬಿಡಿಸುತ್ತಾರೆ. ಈ ಕಲಾವಿದ ನಾಗಲಿಂಗಪ್ಪ ಕಳೆದ 16 ವರ್ಷಗಳಿಂದ ದಸರಾ ಆನೆಗಳಿಗೆ ಚಿತ್ತಾರ ಮೂಡಿಸುತ್ತಿದ್ದಾರೆ.
from India & World News in Kannada | VK Polls https://ift.tt/2HyvPzP