'ಗೆಲ್ಲಬಹುದಾದ ಎರಡು ಪಂದ್ಯಗಳಲ್ಲಿ ಸೋತಿದ್ದೇವೆ' : ತಮಗೆದುರಾಗುತ್ತಿರುವ ಸಮಸ್ಯೆ ತಿಳಿಸಿದ ಕೆ.ಎಲ್‌ ರಾಹುಲ್‌!

ಹೊಸದಿಲ್ಲಿ: ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡದ ನಾಯಕ ಕೆ.ಎಎಲ್‌ ರಾಹುಲ್‌ ರೂಪಿಸಿದ್ದ ಯೋಜನೆ ಎರಡನೇ ಬಾರಿಯೂ ವಿಫಲವಾಯಿತು. ಕಳೆದ ಪಂದ್ಯದಲ್ಲಿ 223 ರನ್‌ಗಳಿಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಟ್ಟಿ ಹಾಕುವಲ್ಲಿ ವಿಫಲವಾಗಿದ್ದ ಪಂಜಾಬ್‌, ಮತ್ತೊಮ್ಮೆ ಎದುರು ವಿಫಲವಾಯಿತು. ಗುರುವಾರ ರಾತ್ರಿ ಮುಂಬೈ ಇಂಡಿಯನ್ಸ್ ವಿರುದ್ಧ 48 ರನ್‌ಗಳ ಭಾರಿ ಅಂತರದಲ್ಲಿ ಸೋಲು ಅನುಭವಿಸಿದ ಬಳಿಕ ಪ್ರತಿಕ್ರಿಯಸಿದ ಕೆ.ಎಲ್‌ ರಾಹುಲ್‌, ತಾವು ಮಾಡಿದ್ದ ತಪ್ಪನ್ನು ಮುಂದಿನ ಪಂದ್ಯಗಳಲ್ಲಿ ತಿದ್ದಿಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಶತಕ ಹಾಗೂ ಅರ್ಧಶತಕಗಳನ್ನು ಸಿಡಿಸಿದ್ದ ಕೆ.ಎಲ್‌ ರಾಹುಲ್‌ ಮುಂಬೈ ಇಂಡಿಯನ್ಸ್ ವಿರುದ್ಧ ಅದೇ ಲಯವನ್ನು ಮುಂದುವರಿಸುವಲ್ಲಿ ವಿಫಲರಾದರು. ರಾಹುಲ್‌ ಚಹರ್‌ ಅವರ ಎಸೆತವನ್ನು ಗ್ರಹಿಸುವಲ್ಲಿ ವಿಫಲರಾದ ನಾಯಕ ಕೆ.ಎಲ್‌ ರಾಹುಲ್‌(17), ಕ್ಲೀನ್‌ ಬೌಲ್ಡ್ ಆದರು. ಒಂದು ತುದಿಯಲ್ಲಿ ಅದ್ಭುತ ಬ್ಯಾಟಿಂಗ್‌ ಮಾಡುತ್ತಿದ್ದ ನಿಕೋಲಸ್‌ ಪೂರನ್‌ ಅವರಿಗೆ ಮತ್ತೊಂದು ತುದಿಯಿಂದ ಯಾರೂ ಬೆಂಬಲ ನೀಡಲಿಲ್ಲ. ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡದಲ್ಲಿ ಡೆತ್‌ ಬೌಲಿಂಗ್‌ ಸಮಸ್ಯೆಯಿದೆ ಎಂಬುದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಎದ್ದು ಕಾಣುತ್ತಿತ್ತು. ಮುಂಬೈ ಇಂಡಿಯನ್ಸ್‌ ತಂಡದ ಕ್ವಿಂಟನ್‌ ಡಿ ಕಾಕ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಅವರ ವಿಕೆಟ್‌ಗಳನ್ನು ಪಡೆದ ಪಂಜಾಬ್‌ ಬೌಲರ್‌ಗಳು, ನಾಯಕ ರೋಹಿತ್‌ ಶರ್ಮಾ ಅವರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅವರು 45 ಎಸೆತಗಳಲ್ಲಿ 75 ರನ್‌ಗಳನ್ನು ಸಿಡಿಸಿದರು. ಅಲ್ಲದೆ, ಇನಿಂಗ್ಸ್‌ನ ಕೊನೆಯಲ್ಲಿ ಕೇವಲ 23 ಎಸೆತಗಳಲ್ಲಿ 67 ರನ್‌ಗಳನ್ನು ಸಿಡಿಸಿದ ಕೀರನ್‌ ಪೊಲಾರ್ಡ್ ಹಾಗೂ ಹಾರ್ದಿಕ್‌ ಪಾಂಡ್ಯ ಜೋಡಿಯನ್ನು ಕಟ್ಟಿ ಹಾಕುವಲ್ಲಿಯೂ ಪಂಜಾಬ್‌ ಬೌಲರ್‌ಗಳ ಕೈಯಲ್ಲಿ ಸಾಧ್ಯವಾಗಲಿಲ್ಲ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಬಹುತೇಕ ಗೆಲುವಿನ ಹಾದಿಯಲ್ಲಿತ್ತು. ಆದರೆ, ಕೆ.ಎಲ್‌ ರಾಹುಲ್‌ ಮಾಡಿದ ಕೆಲ ಸಣ್ಣ ತಪ್ಪುಗಳಿಂದ ಅಂತಿಮವಾಗಿ ಸೋಲು ಒಪ್ಪಬೇಕಾಗಿತ್ತು. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಪಂಜಾಬ್‌ ಇದೀಗ ಮೂರು ಪಂದ್ಯಗಳಲ್ಲಿ ಜಯ ದಾಖಲಿಸಿರುತ್ತಿತ್ತು. ಪಂದ್ಯದ ಬಳಿಕ ಮಾತನಾಡಿದ 28 ರ ಹರೆಯದ ಕೆ.ಎಲ್‌ ರಾಹುಲ್‌, ಬೌಲರ್‌ಗಳ ಡೆತ್ ಬೌಲಿಂಗ್ ಬಗ್ಗೆ ವಿಷಾದಿಸಿದರು ಮತ್ತು ಅವರು ಬಲವಾಗಿ ಹಿಂತಿರುಗಬೇಕಾಗಿದೆ ಎಂದು ಒಪ್ಪಿಕೊಂಡರು. ಹೆಚ್ಚುವರಿ ಬೌಲಿಂಗ್ ಆಯ್ಕೆಯು ಸೂಕ್ತವಾಗಬಹುದು. ಟೀಮ್‌ ಮ್ಯಾನೇಜ್‌ಮೆಂಟ್‌ ಒಟ್ಟಿಗೆ ಕುಳಿತು ಈ ವಿಷಯದ ಭವಿಷ್ಯದ ಬಗ್ಗೆ ಚರ್ಚಿಸುತ್ತೇವೆ ಎಂದು ಬಲಗೈ ಬ್ಯಾಟ್ಸ್‌ಮನ್ ಅಭಿಪ್ರಾಯಪಟ್ಟರು. "ಇದು ನಿರಾಶಾದಾಯಕ ಎಂದು ನಾನು ಹೇಳುವುದಿಲ್ಲ ಆದರೆ ಸ್ಪಷ್ಟವಾಗಿ ಇದು ನಿರಾಶಾದಾಯಕವಾಗಿದೆ. ನಾವು ಸುಲಭವಾಗಿ ನಾಲ್ಕರಲ್ಲಿ ಮೂರು ಗೆಲುವು ಸಾಧಿಸಬಹುದಿತ್ತು. ಈ ಪಂದ್ಯದ ಕೊನೆಯಲ್ಲಿ ನಾವು ಚೆನ್ನಾಗಿ ಬೌಲಿಂಗ್‌ ಮಾಡಿಲ್ಲ. ತಪ್ಪುಗಳಿಂದ ಕಲಿತು ಮುಂದಿನ ಪಂದ್ಯಗಳಿಗೆ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡುತ್ತೇವೆ. ಮತ್ತೊಂದು ಬೌಲಿಂಗ್ ಆಯ್ಕೆ ಇದ್ದಿದ್ದರೆ ಚೆನ್ನಾಗಿರುತಿತ್ತು. ಆಲ್‌ರೌಂಡರ್ ವಿಭಾಗ ಅದ್ಭುತವಾಗಿದೆ. ಆದರೆ ನಾವು ತರಬೇತುದಾರರೊಂದಿಗೆ ಕುಳಿತು ಹೆಚ್ಚುವರಿ ಬೌಲರ್ ಅಥವಾ ಅದೇ ತಂಡವನ್ನು ಮುಂದುವರಿಸಬೇಕೇ ಎಂದು ನಿರ್ಧರಿಸುತ್ತೇವೆ, " ಎಂದು ಕೆ.ಎಲ್‌ ರಾಹುಲ್‌ ತಿಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2SkIZ57

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...