ಬೆಳಗಾವಿ, ಗೋಕಾಕ ಭಾಗದಲ್ಲಿ ಗುಡುಗು, ಮಿಂಚು ಸಹಿತ ಮಳೆ ಅಬ್ಬರಿಸಿತು. ಸುತಗಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ 2 ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಬೆಳಗಾವಿ ಮಾರ್ಕೆಟ್‌ನಲ್ಲಿ ಅಂಗಡಿಗಳಿಗೆ ನೀರು ನುಗ್ಗಿ ವಹಿವಾಟಿಗೆ ತೊಂದರೆಯಾಯಿತು. ದಾವಣಗೆರೆ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಮಳೆಯಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದು ಎರಡು ದಿನಗಳಿಂದ ಮಳೆಯಾಗುತ್ತಿದೆ. ಸೋಮವಾರವೂ ಮಳೆ ಮುಂದುವರಿಯಿತು. ಗಾಳಿಗೆ ಕೆಲಕಡೆ ಬಾಳೆ ಬೆಳೆ ನೆಲಕಚ್ಚಿದೆ.
ಬಾಗಲಕೋಟೆ ಜಿಲ್ಲೆಯ ಎಲ್ಲ ಭಾಗವನ್ನು ಮೋಡ ಆವರಿಸಿದ್ದು ಬಹುತೇಕ ಕಡೆ ವರುಣ ತನ್ನ ಆರ್ಭಟ ತೋರಿಸಿದ್ದಾನೆ. ಬಾಗಲಕೋಟೆ ನಗರದಲ್ಲಿ ಸಂಜೆ ಬೀಸಿದ ಭಾರಿ ಗಾಳಿ ಹಾಗೂ ಮಳೆ ವಾಹನ ಸವಾರರ ಸಂಚಾರಕ್ಕೆ ತಡೆಯೊಡ್ಡಿತು. ಮುಧೋಳ ತಾಲೂಕಿನ ಕೆಲವೆಡೆ ಗಾಳಿಗೆ ಶೆಡ್‌ಗಳು ಹಾರಿ ಹೋಗಿವೆ. ಚಾಮರಾಜನಗರ ಜಿಲ್ಲಾ ಕೇಂದ್ರ ಸೇರಿದಂತೆ ನಾನಾ ಕಡೆ ಸೋಮವಾರ ಮಧ್ಯಾಹ್ನ ಬಿರುಸಿನ ಮಳೆ ಸುರಿಯಿತು. ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿಉತ್ತಮ ಮಳೆಯಾಗುತ್ತಿದ್ದು, ಬಿಸಿಲಬೇಗೆಯಿಂದ ತತ್ತರಿಸಿದ ಜನತೆ ಮಳೆಯಿಂದ ಹರ್ಷಗೊಂಡಿದ್ದಾರೆ. ಹಾಸನ ಹಾಗೂ ಕೊಡಗಲ್ಲೂ ಸ್ವಲ್ಪ ಮಳೆಯಾಗಿದೆ.
ರಾಜ್ಯದ ಕರಾವಳಿಗೆ ಮುಂಗಾರು ಪ್ರವೇಶಿಸುತ್ತಿರುವ ಬೆನ್ನಲ್ಲೇ ಅರಬ್ಬಿ ಸಮುದ್ರದಲ್ಲಿಉಂಟಾಗಿರುವ ವಾಯುಭಾರ ಕುಸಿತ 'ನಿಸರ್ಗ' ಚಂಡಮಾರುತವಾಗಿ ಪರಿವರ್ತಿತವಾಗಲಿದೆ. ಇದರ ಪರಿಣಾಮ ಕರಾವಳಿ ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವೆಡೆ ಈಗಾಗಲೇ ಮಳೆಯಾಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದ ಇನ್ನಷ್ಟು ಬಿರುಸಾದ ಮಳೆಯಾಗುವ ಸಾಧ್ಯತೆ ಇದೆ. ಇದೀಗ ಮುಂಗಾರು ಆಗಮನ ನಿರೀಕ್ಷೆ ಹಾಗೂ ವಾಯುಭಾರ ಕುಸಿತದ ಪರಿಣಾಮ ಮುಂದಿನ 48 ಗಂಟೆಗಳಲ್ಲಿ ಅಲ್ಲಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಗಾರು ಮಳೆ ಸೋಮವಾರ ಕೇರಳದ ಕಣ್ಣೂರು ಜಿಲ್ಲೆವರೆಗೂ ಪ್ರವೇಶಿಸಿದೆ. ಮುಂದಿನ 24 ಗಂಟೆಗಳಲ್ಲಿರಾಜ್ಯದ ಕರಾವಳಿಗೆ ಮುಂಗಾರು ಪ್ರವೇಶ ಆಗಲಿದೆ.
- ಡಾ. ಎಸ್.ಎಂ. ಗವಾಸ್ಕರ್, ಹವಾಮಾನ ಇಲಾಖೆ ಅಧಿಕಾರಿ
ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಕೆಲ ಭಾಗಗಳಲ್ಲಿ ಸೋಮವಾರ ಧಾರಾಕಾರ ಮಳೆ ಸುರಿದಿದ್ದು, ಮುಂಗಾರು ಹಂಗಾಮಿನ ಬಿತ್ತನೆಗೆ ಅಣಿಯಾಗಿರುವ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸತತ ಎರಡನೇ ದಿನ ಉತ್ತಮ ಮಳೆ ಸುರಿಯಿತು. ಹಾವೇರಿ, ಹಾನಗಲ್ ಸೇರಿದಂತೆ ಜಿಲ್ಲೆಯ ನಾನಾ ಕಡೆಗಳಲ್ಲಿ ಮುಂಗಾರು ಬಿತ್ತನೆಗೆ ಹದ ಮಳೆ ಬಿದ್ದಿದೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಭಾರಿ ಮಳೆ ಸುರಿಯಿತು. ಲಕ್ಷೆತ್ರ್ಮೕಶ್ವರದಲ್ಲಿಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಪಟ್ಟಣದಲ್ಲಿ ಕೆಲವು ಮನೆಗಳ ಗೋಡೆಗಳು ಬಿದ್ದಿವೆ.
'ನಿಸರ್ಗ' ಚಂಡಮಾರುತದ ಪ್ರಭಾವದಿಂದಾಗಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌ನ ಕರಾವಳಿ ತೀರದಲ್ಲಿ ಬುಧವಾರ ಹಾಗೂ ಗುರುವಾರ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಆಗ್ನೇಯ ಹಾಗೂ ಪೂರ್ವ-ಮಧ್ಯ ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಇನ್ನಷ್ಟು ಹೆಚ್ಚಿದ್ದು ಅದು ನಿಸರ್ಗ ಚಂಡಮಾರುತವಾಗಿ ಏರ್ಪಡುವ ನಿರೀಕ್ಷೆ ಇದ್ದು, ಈ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ ಎಂದು ಇಲಾಖೆ ಹೇಳಿದೆ. ಸದ್ಯ ಮುಂಬಯಿಯಿಂದ ನೈರುತ್ಯ ಭಾಗದಲ್ಲಿ 690 ಕಿ.ಮೀ ದೂರದಲ್ಲಿ ಹಾಗೂ ಸೂರತ್‌ನಿಂದ ನೈರುತ್ಯ ಭಾಗದಿಂದ 920 ಕಿ.ಮೀ ದೂರದಲ್ಲಿ ವಾಯುಭಾರ ಕುಸಿತವಾಗಿದೆ. ಮುಂದಿನ 12 ಗಂಟೆಗಳಲ್ಲಿ ಇದು ಚಂಡಮಾರುತದ ರೂಪ ಪಡೆಯಲಿದೆ. ಗುರುವಾರ (ಜೂನ್ 3) ಗಂಟೆಗೆ 125 ಕಿ.ಮೀ ವೇಗದಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್ ಕರಾವಳಿ ತೀರಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಇಲಾಖೆ ಎಚ್ಚರಿಸಿದೆ. ಈ ಮಧ್ಯೆ ಮುಂದಿನ 48 ಗಂಟೆ ಕಾಲ ಸಮುದ್ರಕ್ಕೆ ಇಳಿಯದಂತೆ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್‌ನ ಮೀನುಗಾರರಿಗೆ ಇಲಾಖೆ ಮುನ್ಸೂಚನೆ ನೀಡಿದೆ.
from India & World News in Kannada | VK Polls https://ift.tt/3cloGfH