ಬೆಂಗಳೂರು: ''ಮೋದಿಯವರು ದೇಶ ಕಟ್ಟುವ ಕಾಯಕಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಹಲವು ವರ್ಷದಿಂದ ತುಕ್ಕು ಹಿಡಿದಿದ್ದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಾರದರ್ಶಕತೆಗೆ ಒತ್ತು ನೀಡಿದ್ದಾರೆ. ದ್ವಿತೀಯ ಅವಧಿಯ ಆಡಳಿತದ ಪ್ರಾರಂಭದಲ್ಲೆ ಪ್ರಪಂಚದ ಅಗ್ರಗಣ್ಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ,'' ಎಂದು ಮುಖ್ಯಮಂತ್ರಿ ಗುಣಗಾನ ಮಾಡಿದರು. ಮೋದಿಯವರ ಮೊದಲ ಅವಧಿಯ 5 ವರ್ಷದಲ್ಲಿ ಜಾರಿಗೊಳಿಸಿದ ಹತ್ತು ಹಲವು ಯೋಜನೆಗಳ ಬಗ್ಗೆ ಸಿಎಂ ಬಿಎಸ್‌ವೈ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ದ್ವಿತೀಯ ಅವಧಿಯ ಮೊದಲ ವರ್ಷದಲ್ಲಿ ಕೈಗೊಂಡ ಕ್ರಮಗಳ ಬಗ್ಗೆಯೂ ಪಟ್ಟಿ ಮಾಡಿದರು. ತ್ರಿವಳಿ ತಲಾಖ್ ರದ್ದು, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ತೆರವು, ಪೌರತ್ವ ತಿದ್ದುಪಡಿ ಕಾಯಿದೆ, ಕಿಸಾನ್ ಸಮ್ಮಾನ್, ಸ್ಪರ್ಧಾತ್ಮಕ ಆರ್ಥಿಕತೆಗಾಗಿ ಕಾರ್ಪೋರೇಟ್ ತೆರಿಗೆ ಭಾರ ತಗ್ಗಿಸಿರುವುದು, ಒನ್ ನೇಷನ್-ಒನ್ ರೇಷನ್ ಕಾರ್ಡ್, ಬ್ಯಾಂಕ್ ವಿಲೀನ ಬಗ್ಗೆಯೂ ಪ್ರಸ್ತಾಪಿಸಿದರು. ಕೋವಿಡ್-19ರ ನಿರ್ವಹಣೆಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರಕಾರ ಸಮರ್ಥ ಕ್ರಮ ಕೈಗೊಂಡಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ ಜನಜೀವನವನ್ನು ರಕ್ಷಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಸ್ವಾವಲಂಬಿ ಭಾರತ ನಿರ್ಮಾಣಕ್ಕೆ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಿದ್ದು, 5.94 ಕೋಟಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಿಎಂ ಹೇಳಿದರು. ರಾಜ್ಯಕ್ಕೆ ಕೇಂದ್ರದ ಸಹಾಯ ರಾಜ್ಯಕ್ಕೆ ಇನ್ನಷ್ಟು ಅನುದಾನದ ವಿಶ್ವಾಸ ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ನೆರವಿನ ಬಗ್ಗೆ ವಿವರ ನೀಡಿದ ಸಿಎಂ ಬಿ.ಎಸ್.ಯಡಿಯೂರಪ್ಪ ಕೇಂದ್ರ ಸರಕಾರದಿಂದ ಇನ್ನೂ ಹೆಚ್ಚಿನ ಅನುದಾನ ಬರುವ ವಿಶ್ವಾಸವಿದೆ ಎಂದರು. ಕೇಂದ್ರದಿಂದ 1 ವರ್ಷದಲ್ಲಿ ಅನುದಾನ ಮತ್ತು ಇತರ ಉದ್ದೇಶಗಳಿಗೆ ಹಣ ವರ್ಗಾವಣೆ ಸೇರಿ 17,249 ಕೋಟಿ ರೂ. ಬಂದಿದೆ. ಪ್ರಾಯೋಜಿತ ಯೋಜನೆಗಳಿಗೆ 10,079 ಕೋಟಿ ರೂ. ಬಂದಿದೆ. ಪ್ರವಾಹ ಪರಿಹಾರಕ್ಕೆ 1869 ಕೋಟಿ ರೂ. ಲಭ್ಯವಾಗಿದೆ. ಕಿಸಾನ್ ಸಮ್ಮಾನ್‌ನಡಿ 49,12,445 ರೈತರಿಗೆ ಧನಸಹಾಯ ದೊರಕಿದೆ. ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆಯಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿಯಾಗುತ್ತಿದೆ. ಬೆಳಗಾವಿ- ಧಾರವಾಡ- ಮೈಸೂರು- ಕುಶಾಲನಗರ-ಶಿಕಾರಿಪುರ-ರಾಣೆ ಬೆನ್ನೂರು ರೈಲು ಮಾರ್ಗಕ್ಕೆ 3085 ಕೋಟಿ ರೂ. ದೊರಕಿದೆ. ಕೋಲಾರದಲ್ಲಿ ರೈಲ್ವೆ ವರ್ಕ್ಶಾಪ್ ತೆರಯಲು 485 ಕೋಟಿ ರೂ. ನೆರವು ಸಿಕ್ಕಿದೆ. 2022ರ ಒಳಗೆ ರಾಜ್ಯದ ಎಲ್ಲ ರೈಲ್ವೆ ಮಾರ್ಗಗಳು ಡಬ್ಲಿಂಗ್ ಆಗಲಿವೆ ಎಂದು ಹೇಳಿದರು. ಕೋವಿಡ್ ಸಂಕಷ್ಟ ಕಾಲದಲ್ಲಿ ರಾಜ್ಯದ ಬಡವರ ಹಸಿವು ನೀಗಿಸಲು ಕೇಂದ್ರ ಸರಕಾರ 8 ಲಕ್ಷ ಟನ್ ಆಹಾರ ಪದಾರ್ಥ ನೀಡಿದೆ ಎಂದರು.
from India & World News in Kannada | VK Polls https://ift.tt/2TXIVK4