ವಿಶ್ವ ದಾಖಲೆಯ 5ನೇ ವಿಶ್ವಕಪ್‌ ಗೆದ್ದ ಯಂಗ್‌ ಇಂಡಿಯಾ!

ನಾರ್ತ್‌ ಸೌಂಡ್‌ (ವೆಸ್ಟ್‌ ಇಂಡೀಸ್‌): ಶೇಖ್‌ ರಶೀದ್‌ (50 ರನ್‌, 84 ಎಸೆತ, 6 ಫೋರ್‌) ಮತ್ತು ನಿಶಾಂತ್‌ ಸಿಂಧೂ (50*) ಅವರ ಜವಾಬ್ದಾರಿಯುತ ಅರ್ಧಶತಕ ಹಾಗೂ ಮತ್ತು ರವಿ ಕುಮಾರ್‌ ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ವಿಶ್ವ ಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಸೋಲಿಸಿ, ದಾಖಲೆಯ ಐದನೇ ಬಾರಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿತು. ಇದಕ್ಕೂ ಮುನ್ನ ಯಂಗ್‌ ಇಂಡಿಯಾ 2000, 2008, 2012 ಮತ್ತು 2018ರ ಆವೃತ್ತಿಗಳಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು. ಇಲ್ಲಿನ ಸರ್‌ ವಿವಿಯನ್‌ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಲೋ ಸ್ಕೋರಿಂಗ್‌ ರೋಚಕ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ್ದ ಇಂಗ್ಲೆಂಡ್‌ ಕಿರಿಯರ ತಂಡ ಯಂಗ್‌ ಇಂಡಿಯಾ ದಾಳಿಗೆ ತತ್ತರಿಸಿ 44.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 189 ರನ್‌ಗಳ ಅಲ್ಪ ಮೊತ್ತ ಗಳಿಸುವಷ್ಟಕ್ಕೆ ಸೀಮಿತಗೊಂಡಿತು. ಬಳಿಕ 190 ರನ್‌ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಭಾರತದ ಯುವ ಪಡೆ ತಂಡ 47.4 ಓವರ್‌ಗಳಲ್ಲಿ6 ವಿಕೆಟ್‌ಗಳ ನಷ್ಟಕ್ಕೆ 195 ರನ್‌ ಚೆಚ್ಚಿ ವಿಜಯೋತ್ಸವ ಆಚರಿಸಿತು. ಈ ಮೂಲಕ ಕಿರಿಯರ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ 7 ಫೈನಲ್‌ಗಳಲ್ಲಿ ಭಾರತ ತಂಡ 5 ಬಾರಿ ಟ್ರೋಫಿ ಗೆದ್ದಂತ್ತಾಗಿದೆ. ಅತ್ತ 1998ರ ನಂತರ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ್ದ ಇಂಗ್ಲೆಂಡ್‌ ರನ್ನರ್ಸ್‌ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದಕ್ಕೂ ಮುನ್ನ ಜೋಶುವಾ ಬಾಯ್ಡನ್‌ ವಿಕೆಟ್‌ ಪಡೆದ ರಾಜ್‌ಬಾವಾ ಕಿರಿಯರ ವಿಶ್ವ ಕಪ್‌ ಟೂರ್ನಿಯ ಫೈನಲ್‌ನಲ್ಲಿ ಭಾರತದ ಪರ ಅತ್ಯಧಿಕ ವಿಕೆಟ್‌ ಪಡೆದ ಬೌಲರ್‌ ಎಂಬ ಗೌರವಕ್ಕೆ ಭಾಜನರಾದರು. ಐದನೇ ಟ್ರೋಫಿ ಎತ್ತಿ ಹಿಡಿಯುವ ಹಂಬಲದೊಂದಿಗೆ ಅಖಾಡಕ್ಕಿಳಿದ ಯಶ್‌ ಧುಲ್‌ ಬಳಗ, ಆರಂಭದಿಂದಲೇ ಪರಿಣಾಮಕಾರಿ ಬೌಲಿಂಗ್‌ ಪ್ರದರ್ಶಿಸಿತು. ಶಿಸ್ತಿನ ದಾಳಿ ಸಂಘಟಿಸಿದ ರವಿ ಕುಮಾರ್‌ ಮತ್ತು ರಾಜ್‌ ಬಾವಾ ಅವರ ಬಲದಿಂದ ಮೇಲುಗೈ ಸಾಧಿಸಿದ ಯಂಗ್ ಇಂಡಿಯಾ ಬಾಯ್ಸ್‌, 24.3 ಓವರ್‌ಗಳಲ್ಲಿ 91 ರನ್‌ಗಳಿಗೆ ಎದುರಾಳಿಯ 7 ವಿಕೆಟ್‌ ಉರುಳಿಸಿ 100 ರನ್‌ ಒಳಗೆ ಆಲೌಟ್‌ ಮಾಡಲು ಯತ್ನಿಸಿದರು. ಬಲಗೈ ಮಧ್ಯಮ ವೇಗಿ ರಾಜ್‌ ಅಂಗದ್‌ ಬಾವಾ (31ಕ್ಕೆ 5) ಮತ್ತು ಎಡಗೈ ಮಧ್ಯಮ ವೇಗಿ ರವಿ ಕುಮಾರ್‌ (34ಕ್ಕೆ 4) ಅವರ ಕರಾರುವಾಕ್‌ ಬೌಲಿಂಗ್‌ ಪ್ರದರ್ಶನದಿಂದ ಮಿಂಚಿದ ಭಾರತ ತಂಡ ಇಂಗ್ಲೆಂಡ್‌ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿತು. ಭಾರತಕ್ಕೆ 5ನೇ ಟ್ರೋಫಿ ಕಿರಿಯರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ 5 ಬಾರಿ ಟ್ರೋಫಿ ಗೆದ್ದು ಅತ್ಯಂತ ಯಶಸ್ವಿ ತಂಡವೆನಿಸಿದೆ. ಆಸ್ಟ್ರೇಲಿಯಾ ಮೂರು ಬಾರಿ ಗೆದ್ದು ಎರಡನೇ ಯಶಸ್ವಿ ತಂಡವಾಗಿದ್ದು, ಪಾಕಿಸ್ತಾನ ಎರಡು ಬಾರಿ ಗೆದ್ದಿದೆ. ಉಳಿದಂತೆ ಬಾಂಗ್ಲಾದೇಶ, ಸೌತ್‌ ಆಫ್ರಿಕಾ, ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಂಡ್‌ ತಲಾ ಒಂದು ಬಾರಿ ಗೆದ್ದಿವೆ. ಸಂಕ್ಷಿಪ್ತ ಸ್ಕೋರ್‌ ಇಂಗ್ಲೆಂಡ್‌: 44.5 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲ್‌ಔಟ್‌ (ಜಾರ್ಜ್‌ ಥಾಮಸ್‌ 27, ಜೇಮ್ಸ್‌ ರೀವ್‌ 95, ಜೇಮ್ಸ್‌ ಸೇಲ್ಸ್‌ 34*; ರವಿ ಕುಮಾರ್‌ 34ಕ್ಕೆ 4, ರಾಜ್‌ ಅಂಗದ್‌ ಬಾವಾ 31ಕ್ಕೆ 5, ಕೌಶಲ್‌ ತಾಂಬೆ 29ಕ್ಕೆ 1). ಇಂಡಿಯಾ: 47.4 ಓವರ್‌ಗಳಲ್ಲಿ 6 ವಿಕೆಟ್‌ಗೆ 195 ರನ್‌ (ಹರ್ನೂರ್‌ ಸಿಂಗ್‌ 21, ಶೇಖ್‌ ರಶೀದ್‌ 50, ಯಶಸ್‌ ಧುಲ್‌ 17, ನಿಶಾಂತ್‌ ಸಿಂಧೂ ಅಜೇಯ 50, ರಾಜ್‌ ಬಾವಾ 35, ದಿನೇಶ್‌ ಬಾಣಾ ಅಜೇಯ 13; ಜೊಶುವಾ ಬೈಡೆನ್ 24ಕ್ಕೆ 2, ಜೇಮ್ಸ್‌ ಸೇಲ್ಸ್ 51ಕ್ಕೆ 2, ಥಾಮಸ್‌ ಆಸ್ಪಿನ್‌ವಾಲ್‌ 42ಕ್ಕೆ 2). ಪಂದ್ಯಶ್ರೇಷ್ಠ: ರಾಜ್‌ ಬಾವಾ (ಭಾರತ)ಟೂರ್ನಿ ಶ್ರೇಷ್ಠ: ಡೆವೋಲ್ಟ್‌ ಬ್ರೆವಿಸ್‌ (ದಕ್ಷಿಣ ಆಫ್ರಿಕಾ)


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/lNm4TrI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...