ಕೋವಿಡ್ ನಂತರ ಇತರ ಕಾಯಿಲೆಗಳ ಚಿಕಿತ್ಸೆಗೆ ನೂಕುನುಗ್ಗಲು: ಬೆಂಗಳೂರಿನಲ್ಲಿ ಕ್ಲಿನಿಕ್‌, ಒಪಿಡಿ ರಷ್‌

ಶಿವಾನಂದ ಹಿರೇಮಠ್‌ : ಕೋವಿಡ್‌ ಸೋಂಕಿನ ಅಲೆ ಕುಸಿತ ಮತ್ತು ನಿರ್ಬಂಧಗಳನ್ನು ಸಡಿಲಗೊಳಿಸಿದ ಪರಿಣಾಮ, ಎರಡು ತಿಂಗಳ ನಂತರ ಕಾರ್ಯಾರಂಭ ಮಾಡಿರುವ ಕ್ಲಿನಿಕ್‌, ಒಪಿಡಿ ಕೇಂದ್ರಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ದಂತ ವೈದ್ಯರು, ನೇತ್ರ ತಜ್ಞರು, ಮೂಳೆ ಚಿಕಿತ್ಸಕರು ಮತ್ತು ಇತರೆ ತಜ್ಞ ವೈದ್ಯರಿಗಾಗಿ ಎರಡು ತಿಂಗಳ ಕಾಲ ಕಾಯುತ್ತಿದ್ದ ರೋಗಿಗಳು ವೈದ್ಯರ ಬಳಿ ಸಮಯ ಪಡೆದು ಕ್ಲಿನಿಕ್‌ಗಳತ್ತ ಧಾವಿಸಿ ಪರೀಕ್ಷೆಗೆ ಒಳಪಡುತ್ತಿದ್ದಾರೆ. ಅನೇಕರು ಕೋವಿಡ್‌ನ ಎರಡನೇ ಅಲೆ ಪರಿಣಾಮ ಚಿಕಿತ್ಸೆ ಮತ್ತು ಪರೀಕ್ಷೆಗೆ ಒಳಪಡದೆ ಹಿಂದಡಿ ಇಟ್ಟಿದ್ದರು. ಈಗ ಕೋವಿಡ್‌ ಮೂರನೇ ಅಲೆ ಉಲ್ಬಣಿಸುವುದಾಗಿ ತಜ್ಞರು ಎಚ್ಚರಿಸಿದ ಬೆನ್ನಲ್ಲೇ ಆತಂಕ ಮತ್ತು ಆತುರದಲ್ಲಿರುವ ರೋಗಿಗಳು ಮುಂಚಿತವಾಗಿಯೇ ಚಿಕಿತ್ಸೆ ಪಡೆಯಲು ಬಯಸಿ ಕ್ಲಿನಿಕ್‌ ಮತ್ತು ಒಪಿಡಿಗಳಲ್ಲಿ ಕ್ಯೂ ನಿಲ್ಲುವ ಪ್ರಸಂಗ ಸಾಮಾನ್ಯವಾಗಿ ಗೋಚರಿಸುತ್ತಿವೆ. ನಗರದಲ್ಲಿ ಕಣ್ಣು, ಮೂಗು, ಕಿವಿ (ಇಎನ್‌ಟಿ) ತಜ್ಞರ ಕ್ಲಿನಿಕ್‌ಗಳಲ್ಲಿ ಜನಸಂದಣಿ ಸಾಮಾನ್ಯವಾಗಿ ಹೆಚ್ಚಾಗಿದೆ. ಕಣ್ಣಿನ ಸೋಂಕು, ಬ್ಲ್ಯಾಕ್‌ ಫಂಗಸ್‌ ಲಕ್ಷಣಗಳಲ್ಲಿ ಒಂದಾಗಿರುವುದರಿಂದ ಕೋವಿಡ್‌ನಿಂದ ಗುಣಮುಖ ಹೊಂದಿದ ಜನರೂ ಕಣ್ಣಿನ ಪರೀಕ್ಷೆಗೆ ಒಳಪಡುತ್ತಿದ್ದಾರೆ. ಕಣ್ಣಿನ ಪೊರೆ, ಮಧುಮೇಹ, ರೆಟಿನೋಪತಿ ಮತ್ತು ಇತರ ಸಮಸ್ಯೆಗಳ ಚಿಕಿತ್ಸೆ ಪಡೆಯುವರ ಪಟ್ಟಿ ನಗರದಲ್ಲಿ ದೊಡ್ಡದಿದೆ. ಕೋವಿಡ್‌ ಸಂದರ್ಭದಲ್ಲಿ ಅನೇಕ ದಂತ ವೈದ್ಯರು ಆನ್‌ಲೈನ್‌ನಲ್ಲಿ ರೋಗಿಗಳ ಜತೆ ಸಮಾಲೋಚನೆ ನಡೆಸುತ್ತಿದ್ದರು. ಆದರೆ, ಹಲ್ಲಿನ ಚಿಕಿತ್ಸೆಗೆ ಅನ್‌ಲಾಕ್‌ಗಾಗಿ ರೋಗಿಗಳು ಕಾಯಲೇ ಬೇಕಿತ್ತು ಎನ್ನುತ್ತಾರೆ ವಿಜಯನಗರದ ಹಿರಿಯ ನಾಗರಿಕರಾದ ಜಿ.ಎಸ್‌. ಜಾನಕಿ. 'ಲಾಕ್‌ಡೌನ್‌ ಸಂದರ್ಭದಲ್ಲಿ ಹಲ್ಲುಗಳು ಮುರಿದು ಹೋಗಿದ್ದವು. ದಂತ ವೈದ್ಯರು ಕ್ಲಿನಿಕ್‌ ಮುಚ್ಚಿದ್ದರಿಂದ ಚಿಕಿತ್ಸೆಗೆ ಯಾವುದೇ ಮಾರ್ಗವಿರಲಿಲ್ಲ. ದಂತ ಸಮಸ್ಯೆ ಇರುವ ಕಾರಣ ಆಹಾರ ಪದ್ಧತಿಯಲ್ಲೂ ಬದಲಾವಣೆ ಮಾಡಿಕೊಂಡಿದ್ದೆ. ದ್ರವ ರೂಪದ ಆಹಾರ, ಇಡ್ಲಿ ಮತ್ತು ರಾಗಿ ಮುದ್ದೆಯಂತಹ ಮೃದುವಾದ ಆಹಾರ ತಿನ್ನುವ ಮೂಲಕ ಎರಡು ವಾರಗಳನ್ನು ಕಳೆದಿದ್ದೇನೆ. ಲಾಕ್‌ಡೌನ್‌ ತೆರವುಗೊಳಿಸಿದ ನಂತರ ಮಾಡಿದ ಮೊದಲ ಕೆಲಸವೆಂದರೆ ದಂತವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದದ್ದು' ಎಂದು ಅವರು ಹೇಳಿದರು. ರೋಗ ಲಕ್ಷಣಗಳ ಗಂಭೀರತೆ ಆಧಾರದಲ್ಲೂ ವೈದ್ಯರೂ ಸಮಯ ನಿಗದಿಪಡಿಸುತ್ತಿದ್ದಾರೆ. 'ನಾವು ಪ್ರತಿ ಪ್ರಕರಣದ ತೀವ್ರತೆಯ ಆಧಾರದ ಮೇಲೆ ರೋಗಿಗಳಿಗೆ ಸಮಯ ನಿಗದಿಪಡಿಸುತ್ತಿದ್ದೇವೆ. ಕೋವಿಡ್‌ ಅಲೆ ತಗ್ಗಿದ ಬಳಿಕವೂ ದಂತ ಚಿಕಿತ್ಸಾಲಯಗಳಲ್ಲಿ ಹಲವು ಬ್ಲ್ಯಾಕ್‌ ಫಂಗಸ್‌ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಕಳೆದ ಒಂದೇ ವಾರದಲ್ಲಿ4 ಬ್ಲ್ಯಾಕ್‌ ಫಂಗಸ್‌ ಪ್ರಕರಣಗಳು ಪತ್ತೆಯಾಗಿವೆ. ಫಂಗಸ್‌ ಸೋಂಕು ದವಡೆ ಮತ್ತು ಒಸಡುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಹಲ್ಲಿನ ಸಮಸ್ಯೆ ಎಂದು ಹಲವರು ಭಾವಿಸುತ್ತಾರೆ. ಸ್ವಯಂಪ್ರೇರಿತರಾಗಿ ಒಪಿಡಿಗೆ ಆಗಮಿಸಿ ಚಿಕಿತ್ಸೆ ಪಡೆಯಲು ಮುಂದಾಗುತ್ತಿರುವುದು ಸಹಕಾರಿ ಆಗಿದೆ. ರೋಗ ಲಕ್ಷಣ ಪತ್ತೆ ಮಾಡಿ ಉಲ್ಬಣಿಸಬಹುದಾದ ಗಂಭೀರ ಪರಿಣಾಮದಿಂದ ಜನರನ್ನು ರಕ್ಷಿಸಲು ವೈದ್ಯರಿಗೆ ಅನುಕೂಲವಾಗಿದೆ. ಹೀಗಾಗಿ, ಹೆಚ್ಚಿನ ಕಾಲಾವಕಾಶವನ್ನು ಒಪಿಡಿಗೆ ನೀಡಲಾಗುತ್ತಿದೆ' ಎಂದು ಬೆಂಗಳೂರಿನ ಭಾರತೀಯ ದಂತ ಸಂಘದ ಕಾರ್ಯದರ್ಶಿ ಡಾ. ಸುದರ್ಶನ್‌ ಸಜ್ಜನ್‌ ತಿಳಿಸಿದ್ದಾರೆ. 'ಅನ್‌ಲಾಕ್‌ ನಂತರ ಕೆ. ಸಿ. ಜನರಲ್‌ ಹೊರ ವಿಭಾಗದಲ್ಲಿ ಏಕಾಏಕಿ ಶೇ.20 ರೋಗಿಗಳ ಹೆಚ್ಚಳ ಕಂಡಿದೆ. ದಿನೇ ದಿನೇ ಸಂಖ್ಯೆ ಹೆಚ್ಚಾಗುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಸೇವೆ ಒದಗಿಸಲು ಹೆಚ್ಚಿನ ವೈದ್ಯ ಸಿಬ್ಬಂದಿಯನ್ನು ನೇಮಿಸಲಾಗಿದೆ' ಎಂದು ಕೆ.ಸಿ. ಜನರಲ್‌ ಆಸ್ಪತ್ರೆ ವೈದ್ಯಕೀಯ ಅಧಿಕಾರಿ ಡಾ. ಬಿ. ಆರ್‌. ಮೋಹನ್‌ ತಿಳಿಸಿದ್ದಾರೆ. 'ಕೆಲ ತಿಂಗಳಿಂದ ಆನ್‌ಲೈನ್‌ ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳು ತಮ್ಮ ಕಣ್ಣುಗಳನ್ನು ಪರೀಕ್ಷಿಸಲು ಮುಂದಾಗುತ್ತಿದ್ದಾರೆ. ಕಣ್ಣಿನ ಚಿಕಿತ್ಸೆಗೆ ಒಳಪಡಬೇಕಿದ್ದ ಹಲವು ರೋಗಿಗಳಲ್ಲಿ ಬ್ಲ್ಯಾಕ್‌ ಫಂಗಸ್‌ ಭಯ ಕಾಡುತ್ತಿದೆ. ಕಣ್ಣಿನ ಪೊರೆ, ಮಧುಮೇಹ, ರೆಟಿನೋಪತಿ ಮತ್ತು ಇತರ ಸಮಸ್ಯೆಗಳ ಚಿಕಿತ್ಸೆಗಾಗಿ ಕಾಯುತ್ತಿರುವ ರೋಗಿಗಳ ದೀರ್ಘ ಸರತಿ ಇದೆ' ಎಂದು ಕರ್ನಾಟಕ ನೇತ್ರ ಸೊಸೈಟಿ ಅಧ್ಯಕ್ಷ ಡಾ. ರಾಜಶೇಖರ್‌ ತಿಳಿಸಿದ್ದಾರೆ.


from India & World News in Kannada | VK Polls https://ift.tt/3ybuxzj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...