ಆರೋಗ್ಯ ಸೌಕರ್ಯಕ್ಕೆ 1242 ಕೋಟಿ; ಬಿಬಿಎಂಪಿಯಿಂದ ಪ್ರಸ್ತಾವನೆ ಸಲ್ಲಿಕೆ!

ನಾಗಪ್ಪ ನಾಗನಾಯಕನಹಳ್ಳಿ ಬೆಂಗಳೂರು: ಕೋವಿಡ್‌ನ ಎರಡನೇ ಅಲೆಯಿಂದ ಪಾಠ ಕಲಿತಿರುವ ಬಿಬಿಎಂಪಿಯು, ನಗರದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ರೂಪುರೇಷೆ ಸಿದ್ಧಪಡಿಸಿದೆ. ಇದಕ್ಕಾಗಿ ಅಂದಾಜು 1242.27 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಿದೆ. ಕೊರೊನಾ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಪಾಲಿಕೆಯು ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಹಂತ ಹಂತವಾಗಿ ಆರೋಗ್ಯ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಅನುಮೋದನೆ ಕೋರಿ ಸರಕಾರಕ್ಕೆ ಸಲ್ಲಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ), 6 ರೆಫರೆಲ್‌ ಆಸ್ಪತ್ರೆಗಳಿವೆ. 198 ವಾರ್ಡ್‌ಗಳ ಪೈಕಿ 57 ಕಡೆ ಪಿಎಚ್‌ಸಿಗಳೇ ಇಲ್ಲ. ಹೀಗಾಗಿ, ಈ ವಾರ್ಡ್‌ಗಳ ಜನರು ಚಿಕಿತ್ಸೆಗಾಗಿ ದೂರದಲ್ಲಿರುವ ಪಿಎಚ್‌ಸಿಗಳಿಗೆ ತೆರಳಬೇಕಾದ ಸ್ಥಿತಿ ಇದೆ. ಪರಿಣಾಮ, ಬಡವರು, ಕೂಲಿ ಕಾರ್ಮಿಕರು ದುಬಾರಿ ದರ ತೆತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ ಕಾರಣ, ಹೊಸದಾಗಿ 57 ಪಿಎಚ್‌ಸಿಗಳ ನಿರ್ಮಾಣಕ್ಕೆ 115.50 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ರಾಜ್ಯ ಕೋವಿಡ್‌ ಕಾರ್ಯಪಡೆಯು ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ದ್ವಿತೀಯ ಹಂತದ ಆಸ್ಪತ್ರೆಯನ್ನು ನಿರ್ಮಿಸಲು ಶಿಫಾರಸು ಮಾಡಿತ್ತು. ಆ ಹಿನ್ನೆಲೆಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ತಲಾ ಒಂದು ದ್ವಿತೀಯ ಹಂತದ ಆಸ್ಪತ್ರೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದಲ್ಲದೇ ಹೊಸದಾಗಿ 4 ತೃತೀಯ ಹಂತದ ಆಸ್ಪತ್ರೆಗಳನ್ನು ನಿರ್ಮಿಸುವ ಅಗತ್ಯವಿರುವುದಾಗಿ ಪಾಲಿಕೆಯು ಪ್ರಸ್ತಾವನೆಯಲ್ಲಿ ತಿಳಿಸಿದೆ. ವಿಕ್ಟೋರಿಯಾ, ಬೌರಿಂಗ್‌, ಕೆ.ಸಿ.ಜನರಲ್‌ ಆಸ್ಪತ್ರೆ ಸೇರಿದಂತೆ ಹಲವು ಸಾರ್ವಜನಿಕ ಆಸ್ಪತ್ರೆಗಳನ್ನು ಸರಕಾರವೇ ನಿರ್ವಹಣೆ ಮಾಡುತ್ತಿದೆ. ಆದರೆ, ಈ ರೀತಿಯ ಆಸ್ಪತ್ರೆಗಳು ಎಲ್ಲೆಡೆ ಇಲ್ಲ. ಪಾಲಿಕೆಯ ಹೊರವಲಯದಲ್ಲಿರುವ ಜನರಿಗೆ ಉಚಿತ ಚಿಕಿತ್ಸಾ ಸೇವೆ ಸಿಗದಂತಾಗಿದೆ. ಹೀಗಾಗಿ, ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಎಲ್ಲೆಡೆ ಗುಣಮಟ್ಟದ ಕಲ್ಪಿಸುವ ಸಂಬಂಧ ವಿಸ್ತೃತ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಕೆಲವೆಡೆ ಆಸ್ಪತ್ರೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ವ್ಯಾಪ್ತಿಯಲ್ಲಿ ಬರುವ 27 ವಿಧಾನಸಭಾ ಕ್ಷೇತ್ರಗಳಲ್ಲಿ 3200 ಹಾಸಿಗೆ ಸಾಮರ್ಥ್ಯದ 27 ದ್ವಿತೀಯ ಹಂತದ ಆಸ್ಪತ್ರೆಗಳು, 2750 ಹಾಸಿಗೆಗಳ 4 ತೃತೀಯ ಹಂತದ ಆಸ್ಪತ್ರೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಮಕ್ಕಳ ಚಿಕಿತ್ಸೆಗೂ ಸೂಕ್ತ ಮೂಲಸೌಕರ್ಯ ಒದಗಿಸುವ ಸಲುವಾಗಿ 7 ಹೆರಿಗೆ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. 31 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಭೌತಿಕ ಚಿಕಿತ್ಸಾ ಕೇಂದ್ರಗಳನ್ನು (ಟ್ರಯಾಜಿಂಗ್‌) ತೆರೆಯಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಆಸ್ಪತ್ರೆಗಳ ಉನ್ನತೀಕರಣಕ್ಕೆ 714.94 ಕೋಟಿ ಕೋವಿಡ್‌ನ ಎರಡನೇ ಅಲೆಯ ಮಹಾಮಾರಿಯು ಸೃಷ್ಟಿಸಿದ ಅಲ್ಲೋಲ ಕಲ್ಲೋಲದಿಂದ ಜನರು ತತ್ತರಿಸಿ ಹೋದರು. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಒದ್ದಾಡಿದರು. ಹಲವರು ಪ್ರಾಣವಾಯು ಆಕ್ಸಿಜನ್‌ ಲಭಿಸದೆ ಜೀವಬಿಟ್ಟರು. ಇದರಿಂದ ಎಚ್ಚೆತ್ತುಕೊಂಡಿರುವ ಪಾಲಿಕೆಯು ಆಸ್ಪತ್ರೆಗಳನ್ನು ಉನ್ನತೀಕರಿಸಲು ತೀರ್ಮಾನಿಸಿದೆ. ಕೊರೊನಾ ಮೂರನೇ ಅಲೆಯು ಮಕ್ಕಳಿಗೆ ಅಪಾಯ ತಂದೊಡ್ಡಲಿದೆ ಎಂದು ತಜ್ಞ ವೈದ್ಯರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿಆರೋಗ್ಯ ಮೂಲಸೌಕರ್ಯಗಳ ಸುಧಾರಣೆಗೆ ಒತ್ತು ನೀಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದ 57 ವಾರ್ಡ್‌ಗಳಲ್ಲಿ ಹೊಸದಾಗಿ ಪಿಎಚ್‌ಸಿಗಳ ನಿರ್ಮಾಣ, ದ್ವಿತೀಯ ಹಂತದ ಆಸ್ಪತ್ರೆಗಳು, ತೃತೀಯ ಹಂತದ ಆಸ್ಪತ್ರೆಗಳ ನಿರ್ಮಾಣ, ಹೆರಿಗೆ ಆಸ್ಪತ್ರೆಗಳ ಉನ್ನತೀಕರಣ, ಟ್ರಯಾಜಿಂಗ್‌ ಸೆಂಟರ್‌ಗಳ ಸ್ಥಾಪನೆಗಾಗಿ 714.94 ಕೋಟಿ ರೂ. ವ್ಯಯಿಸುತ್ತಿದೆ. ವೈದ್ಯಕೀಯ ಸಲಕರಣೆಗಳನ್ನು ಅಳವಡಿಸುವ ಸಲುವಾಗಿಯೇ 115.70 ಕೋಟಿ ರೂ. ಖರ್ಚು ಮಾಡುತ್ತಿದೆ. ವಾರ್ಷಿಕ ನಿರ್ವಹಣೆಗೆ 527.33 ಕೋಟಿ ಹೊಸದಾಗಿ ನಿರ್ಮಿಸುವ 57 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 20 ದ್ವಿತೀಯ ಹಂತದ ಆಸ್ಪತ್ರೆಗಳು, 4 ತೃತೀಯ ಹಂತದ ಆಸ್ಪತ್ರೆಗಳು, 7 ಹೆರಿಗೆ ಆಸ್ಪತ್ರೆಗಳ ನಿರ್ವಹಣೆ ಮತ್ತು ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸಿ ಜಾಗೃತಿ ಮೂಡಿಸುವ ಆಶಾ, ಎಎನ್‌ಎಂ ಕಾರ್ಯಕರ್ತರ ನಿಯೋಜನೆಗಾಗಿ ವಾರ್ಷಿಕ 527.33 ಕೋಟಿ ರೂ. ಖರ್ಚಾಗಲಿದೆ. ಇದರಲ್ಲಿ ವೈದ್ಯಕೀಯ ಸಿಬ್ಬಂದಿಯ ವೇತನ, ಔಷಧ ಖರೀದಿಯ ವೆಚ್ಚವೂ ಸೇರಿದೆ ಎಂದು ಬಿಬಿಎಂಪಿಯು ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ. ''ಕೋವಿಡ್‌ ಮತ್ತು ಇತರೆ ಸಾಂಕ್ರಾಮಿಕ ಕಾಯಿಲೆಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಸಲುವಾಗಿ ಆರೋಗ್ಯ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಅನುಮೋದನೆಗಾಗಿ ಸರಕಾರಕ್ಕೆ ಸಲ್ಲಿಸಲಾಗಿದೆ. ವಿಧಾನಸಭಾ ಕ್ಷೇತ್ರವಾರು ದ್ವಿತೀಯ ಹಂತದ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಕೆಲವೆಡೆ ಆಸ್ಪತ್ರೆ ಕಟ್ಟಡಗಳನ್ನು ನಿರ್ಮಿಸುವ ಕಾರ್ಯವು ಪ್ರಗತಿಯಲ್ಲಿದೆ,''. ಗೌರವ್‌ಗುಪ್ತ, ಬಿಬಿಎಂಪಿ ಮುಖ್ಯ ಆಯುಕ್ತ ಆರೋಗ್ಯ ಮೂಲಸೌಕರ್ಯಗಳ ಉನ್ನತೀಕರಣ ಅಂದಾಜು ವೆಚ್ಚ (ಕೋಟಿ ರೂ.ಗಳಲ್ಲಿ)
  • 57 ಪಿಎಚ್‌ಸಿಗಳ ನಿರ್ಮಾಣ 115.50
  • 12 ದ್ವಿತೀಯ ಹಂತದ ಆಸ್ಪತ್ರೆಗಳು 349
  • 4 ತೃತೀಯ ಹಂತದ ಆಸ್ಪತ್ರೆಗಳು 238.20
  • 7 ಹೆರಿಗೆ ಆಸ್ಪತ್ರೆಗಳ ಸುಧಾರಣೆ 10.61
  • 31 ಪಿಎಚ್‌ಸಿಗಳಲ್ಲಿಟ್ರಯಾಜಿಂಗ್‌ ಸೆಂಟರ್‌ 1.63
ಒಟ್ಟು 714.94 ಆಸ್ಪತ್ರೆಗಳ ವಾರ್ಷಿಕ ನಿರ್ವಹಣೆ ವೆಚ್ಚ ಅಂದಾಜು ಖರ್ಚು (ಕೋಟಿಗಳಲ್ಲಿ)
  • 57 ಪಿಎಚ್‌ಸಿಗಳು 11.80
  • 20 ದ್ವಿತೀಯ ಹಂತದ ಆಸ್ಪತ್ರೆಗಳು 97.80
  • 4 ತೃತೀಯ ಹಂತದ ಆಸ್ಪತ್ರೆಗಳು 400
  • ಹೆರಿಗೆ ಆಸ್ಪತ್ರೆಗಳು 15.36
  • ಆಶಾ, ಎಎನ್‌ಎಂ ಕಾರ್ಯಕರ್ತರ ಗೌರವಧನ 2.37
ಒಟ್ಟು 527.33


from India & World News in Kannada | VK Polls https://ift.tt/2WgddLQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...