ಬೆಂಗಳೂರು: ರಾಜೀನಾಮೆ ಬಳಿಕ ಯಡಿಯೂರಪ್ಪ ಅವರ ನಡೆ ಏನು? ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಇಳಿಸಿದ ಬಳಿಕ, ಯಾವುದಾದರೂ ರಾಜ್ಯದ ಹುದ್ದೆಗೆ ನೇಮಿಸಲಾಗುತ್ತದೆ ಎಂಬ ಸುದ್ದಿ ಹಲವಾರು ತಿಂಗಳಿನಿಂದ ಹರಡುತ್ತಿತ್ತು. ಪಕ್ಷಕ್ಕಾಗಿ ಸಾಕಷ್ಟು ಶ್ರಮಿಸಿದ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಲು ಕೇಂದ್ರ ನಾಯಕತ್ವ ರಾಜ್ಯಪಾಲರ ಹುದ್ದೆ ನೀಡುತ್ತದೆ ಎನ್ನಲಾಗಿತ್ತು. ಆದರೆ, ತಾವು ರಾಜ್ಯಪಾಲ ಸ್ಥಾನ ಸೇರಿದಂತೆ ಯಾವುದೇ ಹುದ್ದೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಾಜಪೇಯಿ ಕೇಂದ್ರ ಸಚಿವ ಸ್ಥಾನದ ಆಹ್ವಾನ ನೀಡಿದಾಗಲೂ ಬೇಡ ಎಂದಿದ್ದೆ. ಈಗಲೂ ಯಾವುದೇ ಹುದ್ದೆ ಬೇಡ. ರಾಜ್ಯದಲ್ಲಿ ಪಕ್ಷದ ಸಂಘಟನೆ ಮಾಡುತ್ತೇನೆ, ರಾಜ್ಯಪಾಲನಾಗುವುದಿಲ್ಲ. ಯಾವುದೇ ಸ್ಥಾನಮಾನ ಕೇಳಿಲ್ಲ, ಯಾವುದೇ ಸ್ಥಾನಮಾನ ತೆಗೆದುಕೊಳ್ಳುವುದಿಲ್ಲ ಎಂದು ಅವರು ತಿಳಿಸಿದರು. ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿ ಹೊರಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ, ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡುತ್ತಾರೆ ಎಂಬ ಸುದ್ದಿಯ ಬಗ್ಗೆ ಪ್ರಶ್ನಿಸಿದಾಗ, ತಾವು ಯಾವುದೇ ಹುದ್ದೆ ಒಪ್ಪಿಕೊಳ್ಳುವುದಿಲ್ಲ ಎಂದರು. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಯಾವ ಎಲ್ಲ ಕೆಲಸಗಳನ್ನು ಮಾಡಬೇಕೋ, ಅದನ್ನು ನಾಳೆಯಿಂದಲೇ ಶುರು ಮಾಡುತ್ತೇನೆ. ಪಕ್ಷದ ಅಧ್ಯಕ್ಷನಾಗಿ, ಮುಖ್ಯಮಂತ್ರಿಯಾಗಿ ನನಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದಾರೆ. ಹೀಗಾಗಿ ಉಳಿದ ಸಮಯದಲ್ಲಿ ಪಕ್ಷಕ್ಕಾಗಿ ದುಡಿಯುವುದನ್ನು ಮುಂದುವರಿಸುತ್ತೇನೆ ಎಂದು ತಿಳಿಸಿದರು. ಪಕ್ಷದ ಎಲ್ಲ ಮುಖಂಡರೂ ನಮ್ಮ ಜತೆ ಇದ್ದಾರೆ. ಮುಂದಿನ ಮುಖ್ಯಮಂತ್ರಿಗೂ ಅವರ ಸಹಕಾರ ಇರುತ್ತದೆ. ರಾಜ್ಯದ ಜನತೆ ಕೂಡ ಹಿಂದಿನಂತೆಯೇ ಸಹಕಾರ ನೀಡಲಿದ್ದಾರೆ ಎಂಬ ಭರವಸೆ ಇದೆ ಎಂದು ಹೇಳಿದರು.
from India & World News in Kannada | VK Polls https://ift.tt/3eVDsOq