ಬೆಂಗಳೂರು: ಬಿಜೆಪಿ ಸಂಸದೀಯ ಮಂಡಳಿ ಸಭೆ ಮಂಗಳವಾರ ಬೆಳಗ್ಗೆ ದಿಲ್ಲಿಯಲ್ಲಿ ನಡೆಯಲಿದ್ದು, ರಾಜ್ಯದ ಮುಂದಿನ ಸಿಎಂ ಯಾರೆನ್ನುವುದು ನಿರ್ಧಾರವಾಗಲಿದೆ. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, , , ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಡಾ. ಸಿ.ಎನ್.ಅಶ್ವತ್ಥನಾರಾಯಣ, ಸಂಸದ ಶಿವಕುಮಾರ್ ಉದಾಸಿ ಮುಂತಾದವರ ಹೆಸರು ಕೇಳಿ ಬಂದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಮುಂದಿನ ಸಿಎಂ ಯಾರಾಗಬಹುದು ಎಂಬ ಬಗ್ಗೆ ಶಾಸಕರ ವಲಯದಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ. ಅತ್ತ ದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮಾಲೋಚನೆ ನಡೆಸಿದರು. ಸಂಭಾವ್ಯ ಮುಖ್ಯಮಂತ್ರಿಗಳು 1. ಪ್ರಹ್ಲಾದ ಜೋಷಿ ಪ್ರಧಾನಿ ಮೋದಿ ಸಂಪುಟದಲ್ಲಿ ಸಂಸದೀಯ ವ್ಯವಹಾರ, ಗಣಿ, ಕಲ್ಲಿದ್ದಲು ಖಾತೆ ಸಚಿವ. ಹಲವು ಸಂಸದೀಯ ಸ್ಥಾಯಿ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ. ನಾಲ್ಕನೇ ಬಾರಿಗೆ ಸಂಸದ. 2. ಬಸನಗೌಡ ಪಾಟೀಲ್ ಯತ್ನಾಳ್ ಈ ಹಿಂದೆ ಎನ್‌ಡಿಎ ಸರಕಾರದಲ್ಲಿ ವಾಜಪೇಯಿ ಕ್ಯಾಬಿನೆಟ್‌ನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ. ಸಂಘ ಪರಿವಾರದ ಮೂಲದವರು. ಹಿಂದುತ್ವದ ಫೈರ್ ಬ್ರ್ಯಾಂಡ್. ಲಿಂಗಾಯತರಲ್ಲಿ ಬಹುಸಂಖ್ಯಾತರಾದ ಪಂಚಮಸಾಲಿ ಸಮಾಜದ ಮುಂಚೂಣಿ ನಾಯಕ. 3. ಮುರುಗೇಶ್ ನಿರಾಣಿ ಈ ಹಿಂದಿನ ಬಿಜೆಪಿ ಸರಕಾರದಲ್ಲಿ 5 ವರ್ಷ ಕೈಗಾರಿಕಾ ಸಚಿವ. ಈ ಬಾರಿ ಗಣಿ ಮತ್ತು ಭೂವಿಜ್ಞಾನ ಸಚಿವ. ರಾಜಕಾರಣದ ಜತೆಗೆ ಉದ್ಯಮ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮಾಜದವರು. 4. ಅರವಿಂದ ಬೆಲ್ಲದ್ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಿಂದ ಮೂರನೇ ಬಾರಿಗೆ ಆಯ್ಕೆ. ಹೊಸ ಮುಖಕ್ಕೆ ಅವಕಾಶದ ನಿರೀಕ್ಷೆ ಹಿನ್ನೆಲೆಯಲ್ಲಿ ಇವರ ಹೆಸರು ಮುಂಚೂಣಿಗೆ ಬಂದಿದೆ. ಲಿಂಗಾಯತ ಪಂಚಮಸಾಲಿ ಸಮಾಜದವರು. 5. ಸಿ.ಟಿ.ರವಿ ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ತಮಿಳುನಾಡು ಚುನಾವಣೆ ಉಸ್ತುವಾರಿಯಾಗಿ ಅನುಭವ. ರಾಜ್ಯ ಸಂಪುಟದಲ್ಲಿ ಸಚಿವರಾಗಿದ್ದರು. ಸಂಘ ಪರಿವಾರದ ಹಿನ್ನೆಲೆ. ಹಿಂದುತ್ವ ಪ್ಲಸ್ ಒಕ್ಕಲಿಗರ ಕೋಟಾ. 6. ಬಸವರಾಜ ಬೊಮ್ಮಾಯಿ ರಾಜಕಾರಣದಲ್ಲಿ ಸಾಕಷ್ಟು ಅನುಭವ. ಜಲಸಂಪನ್ಮೂಲ, ಗೃಹ, ಕಾನೂನು, ಸಂಸದೀಯ ಸಚಿವರಾಗಿ ಉತ್ತಮ ಕಾರ್ಯ ನಿರ್ವಹಣೆ ತೋರಿದ ಅನುಭವ. ಯಡಿಯೂರಪ್ಪ ಆಪ್ತ ವಲಯದವರು. ಲಿಂಗಾಯತ ಸಮಾಜದವರು. 7. ಆರ್.ಅಶೋಕ್ ಬಿಜೆಪಿ ಸಂಘಟನೆಯಲ್ಲಿ ಸಾಕಷ್ಟು ಪರಿಶ್ರಮ ವಹಿಸಿದವರು. ಈ ಹಿಂದೆ ಡಿಸಿಎಂ ಆಗಿದ್ದ ಅನುಭವ. ಯಡಿಯೂರಪ್ಪ ಆಪ್ತರು. ಒಕ್ಕಲಿಗ ಸಮುದಾಯದವರು. 8. ಡಾ.ಸಿ.ಎನ್.ಅಶ್ವತ್ಥನಾರಾಯಣ ಉಪಮುಖ್ಯಮಂತ್ರಿಯಾಗಿ ಆಗಿ ಕಾರ್ಯ ನಿರ್ವಹಿಸಿದ ಅನುಭವ. ಒಕ್ಕಲಿಗ ಸಮಾಜಕ್ಕೆ ಸೇರಿದವರು. 9 . ಶಿವಕುಮಾರ ಉದಾಸಿ ಮೂರನೇ ಬಾರಿಗೆ ಹಾವೇರಿ ಕ್ಷೇತ್ರದ ಸಂಸದರು. ಲಿಂಗಾಯತ ಸಮಾಜದವರು. ಹೈಕಮಾಂಡ್‌ಗೆ ಹತ್ತಿರ ಇರುವವರು. ಸಿಎಂ ಯಾರಾಗುತ್ತಾರೆಂಬುದರ ಮೇಲೆ ಡಿಸಿಎಂ ನಿರ್ಧಾರ ಈ ಬಾರಿ 4 ರಿಂದ 5 ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಸುವ ಬಗ್ಗೆ ಮಾತು ಕೇಳಿ ಬರುತ್ತಿದೆ. ಡಿಸಿಎಂ ಹುದ್ದೆಯೊಂದಿಗೆ ಸಂಪುಟ ಸೇರುವುದಕ್ಕೂ ಹಲವೂ ಆಕಾಂಕ್ಷಿಗಳಿದ್ದಾರೆ. ಈ ಪೈಕಿ ಕೆಲವರ ಹೆಸರು ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲೂಇದೆ. ಇಂತಹ ನಾಯಕರು ಸಿಎಂ ಆಗದಿದ್ದರೆ ಡಿಸಿಎಂ ಸ್ಥಾನವಂತೂ ಖಚಿತ ಎಂಬುದೊಂದು ಲೆಕ್ಕಾಚಾರ. ಬಿಎಸ್‌ವೈ ಸಂಪುಟದಲ್ಲಿದ್ದ ಮೂವರು ಡಿಸಿಎಂಗಳ ಭವಿಷ್ಯದ ಬಗ್ಗೆ ಖಚಿತತೆ ಇಲ್ಲ. ಹಾಗಾಗಿ ಈ ಹುದ್ದೆಗೆ ಹೊಸಬರ ಹೆಸರು ಸೇರ್ಪಡೆಯಾಗುತ್ತಿದೆ. ಅಂಥವರಲ್ಲಿ ಅರವಿಂದ ಲಿಂಬಾವಳಿ, ಬಿ.ವೈ.ವಿಜಯೇಂದ್ರ, ಬಿ.ಶ್ರೀರಾಮುಲು, ವಿ.ಸುನೀಲ್ ಕುಮಾರ್, ಸಿ.ಪಿ.ಯೋಗೇಶ್ವರ್ ಮುಂತಾದವರ ಹೆಸರು ಕೇಳಿ ಬರುತ್ತಿದೆ. ಇನ್ನು ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಸಿ.ಟಿ.ರವಿ, ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ್ ಹೆಸರುಗಳು ಸಿಎಂ ಹುದ್ದೆಗೂ ಕೇಳಿ ಬರುತ್ತಿದೆ. ಡಿಸಿಎಂ ಹುದ್ದೆ ಸಂಬಂಧದಲ್ಲೂ ಈ ಮುಖಂಡರ ಹೆಸರು ಕೇಳಿ ಬರುತ್ತಿದೆ. ಡಿಸಿಎಂ ಸಂಭಾವ್ಯರ ಕಿರು ಪರಿಚಯ 1. ಅರವಿಂದ ಲಿಂಬಾವಳಿ ಉನ್ನತ ಶಿಕ್ಷಣ, ಆರೋಗ್ಯ, ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಅನುಭವ. 3ನೇ ಬಾರಿಗೆ ಶಾಸಕ. ಒಂದು ಬಾರಿ ಪರಿಷತ್ ಸದಸ್ಯ. ಸಂಘಟನೆ ಹಿನ್ನೆಲೆಯಿಂದ ಬಂದವರು. 2. ಬಿ.ವೈ.ವಿಜಯೇಂದ್ರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಉಪಚುನಾವಣೆ ಉಸ್ತುವಾರಿ ವಹಿಸಿ ಅಭ್ಯರ್ಥಿಗಳನ್ನು ಗೆಲ್ಲಿಸಿದ ಶ್ರೇಯಸ್ಸು. ಪ್ರಮುಖವಾಗಿ ಬಿಜೆಪಿ ಸಂಘಟನೆಯಿಲ್ಲದ ಕೆಆರ್‌ಪೇಟೆ, ಶಿರಾದಲ್ಲಿ ಗೆಲುವು ದಾಖಲು. ಲಿಂಗಾಯತ ಸಮಾಜದ ಭರವಸೆಯ ನಾಯಕ ಎಂಬ ನಿರೀಕ್ಷೆ. 3. ಬಿ.ಶ್ರೀರಾಮುಲು ಆರೋಗ್ಯ, ಸಮಾಜ ಕಲ್ಯಾಣ ಸಚಿವರಾಗಿ ಅನುಭವ. ವಾಲ್ಮೀಕಿ ಜನಾಂಗದ ಪ್ರಮುಖ ನಾಯಕ. ಎಸ್‌ಟಿ ಮತಗಳನ್ನು ಸೆಳೆಯಲು ಪಕ್ಷಕ್ಕೆ ಸಹಕಾರಿಯಾಗಿರುವ ನಾಯಕ. 4. ವಿ.ಸುನೀಲ್ ಕುಮಾರ್ ಮೂರನೇ ಬಾರಿಗೆ ಶಾಸಕ. ಹಿಂದುಳಿದ ವರ್ಗಕ್ಕೆ ಸೇರಿದ ಭರವಸೆಯ ನಾಯಕ. ಜತೆಗೆ ಹಿಂದುತ್ವದ ಫೈರ್ ಬ್ರ್ಯಾಂಡ್ ಇಮೇಜ್. ಸಂಘಟನೆಯಲ್ಲಿ ಕೆಲಸ ಮಾಡಿದ ಅನುಭವ. 5. ಸಿ.ಪಿ.ಯೋಗೇಶ್ವರ್ ಪದೇ ಪದೆ ಪಕ್ಷ ಬದಲಿಸಿದರೂ ಹಳೆ ಮೈಸೂರು ಭಾಗದಲ್ಲಿ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ವಿರುದ್ಧ ತೊಡೆ ತಟ್ಟಿ ನಿಂತವರು. ಈ ಭಾಗದಲ್ಲಿ ಆಕ್ರಮಣಶೀಲ ಒಕ್ಕಲಿಗ ನಾಯಕನ ತಲಾಶ್‌ನಲ್ಲಿ ಬಿಜೆಪಿಯಿದೆ. ಇದು ಇವರ ಹೆಸರನ್ನು ಚಲಾವಣೆಗೆ ತಂದಿದೆ.
from India & World News in Kannada | VK Polls https://ift.tt/3i8bKzC