ಬೆಂಗಳೂರು: ನಾಳೆ ಅಂದರೆ ಜುಲೈ 28 ಬುಧವಾರ 11 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ ಎಂದು ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲರ ಭೇಟಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಹಂಗಾಮಿ ಸಿಎಂ ಯಡಿಯೂರಪ್ಪ ಮಾರ್ಗದರ್ಶನ ಪಡೆದು ಮುಂದುವರಿಯುತ್ತೇನೆ. ರಾಜಕೀಯ ಗುರುಗಳಾದ ಯಡಿಯೂರಪ್ಪ ಆಶೀರ್ವಾದದಿಂದ ನಾನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಆಗಿದ್ದೇನೆ. ಯಡಿಯೂರಪ್ಪ ಅವರ ದಾರಿಯಲ್ಲಿ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು ನಡೆಯುತ್ತೇನೆ ಎಂದು ಭರವಸೆ ನೀಡಿದರು. ಯಡಿಯೂರಪ್ಪ ರೂಪಿಸಿರುವ ಕಾರ್ಯಕ್ರಮ ಮುಂದುವರಿಸಿ ಉತ್ತಮ ಆಡಳಿತ ನೀಡುತ್ತೇನೆ. ಕಷ್ಟದ ಪರಿಸ್ಥಿತಿಯಲ್ಲಿಯೂ ಯಡಿಯೂರಪ್ಪ ರಾಜ್ಯವನ್ನು ಮುನ್ನಡೆಸಿದ್ದಾರೆ. ಉತ್ತಮ ಹಣಕಾಸು ನಿರ್ವಹಣೆ ಮಾಡಿದ್ದಾರೆ ಎಂದು ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಎಂ ಆಗಿ ಪ್ರವಾಹ, ಕೋವಿಡ್ ಆದ್ಯತೆ ಕೊಡಲಾಗುತ್ತದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದು, ಬುಧವಾರ ತಾವೊಬ್ಬರೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದಾಗಿ ತಿಳಿಸಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಿಗದಿಯಾಗಿದೆ.
from India & World News in Kannada | VK Polls https://ift.tt/3yllU5C