ಬೆಂಗಳೂರು: ಹೈಕೋರ್ಟ್‌ನ ಬೆಂಗಳೂರಿನ ಪ್ರಧಾನ ಪೀಠದಲ್ಲಿನ ಕಚೇರಿಗಳಿಗೆ ಸ್ಥಳಾವಕಾಶದ ಕೊರತೆ ನೀಗಿಸಲು ಸರಕಾರ ಮೂರು ವಾರಗಳಲ್ಲಿ ಸಮಗ್ರ ಯೋಜನೆಯನ್ನು ಸಲ್ಲಿಸಬೇಕು ಎಂದು ಹೈಕೋರ್ಟ್ ಬುಧವಾರ ಆದೇಶ ನೀಡಿದೆ. ತುಮಕೂರಿನ ವಕೀಲ ರಮೇಶ್ ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ ‘ಸರಕಾರ ಫೆ.14ರೊಳಗೆ ಹೈಕೋರ್ಟ್ ಕಟ್ಟಡದಲ್ಲಿನ ಕಚೇರಿಗಳಿಗೆ ಉಂಟಾಗಿರುವ ಸ್ಥಳಾವಕಾಶದ ಕೊರತೆ ನೀಗಿಸುವ ಯೋಜನೆ ಸಲ್ಲಿಸಬೇಕು. ಇಲ್ಲವಾದರೆ ಅಡ್ವೊಕೇಟ್ ಜನರಲ್ ಕಚೇರಿ ಕಾರ್ಯನಿರ್ವಹಿಸುತ್ತಿರುವ ಕೆಜಿಐಡಿ ಮತ್ತು ವಕೀಲರ ಪರಿಷತ್ ಇರುವ ಚುನಾವಣಾ ಆಯೋಗದ ಹಳೆಯ ಕಟ್ಟಡವನ್ನು ತೆರವುಗೊಳಿಸಲು ನ್ಯಾಯಾಂಗ ಆದೇಶ ಹೊರಡಿಸಬೇಕಾಗುತ್ತದೆ’ ಎಂದು ಎಚ್ಚರಿಸಿತು. ಕಳೆದ ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಸರಕಾರದ ಮುಖ್ಯ ಕಾರ್ಯದರ್ಶಿಯವರೊಂದಿಗೆ ಮಾತುಕತೆ ನಡೆಸಿ ಸ್ಥಳಾವಕಾಶ ಒದಗಿಸುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಹೇಳಿ ನಾಲ್ಕು ವಾರ ಕಾಲಾವಕಾಶ ಪಡೆದುಕೊಂಡಿದ್ದರು. ಆದರೆ, ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ. ಇದನ್ನು ಗಮನಿಸಿದರೆ ಎಜಿಗೆ ಈ ಸಮಸ್ಯೆ ಬಗೆಹರಿಸಲು ಆಸಕ್ತಿ ಇಲ್ಲದಂತೆ ಕಾಣುತ್ತಿದೆಯಲ್ಲಾ? ಎಂದು ನ್ಯಾಯಪೀಠ ಹೇಳಿತು. ಅದಕ್ಕೆ ಸರಕಾರಿ ವಕೀಲರು, ಇಲ್ಲ, ಸರಕಾರದ ಜೊತೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಅದಕ್ಕೆ ನಾಲ್ಕು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಆಗ ನ್ಯಾಯಪೀಠ, ಕೇವಲ ಎರಡು ವಾರ ಕಾಲಾವಕಾಶ ನೀಡಲಾಗುವುದು. ಅಷ್ಟರಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ, ಇಲ್ಲವೇ ನ್ಯಾಯಾಲಯವೇ ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೇಳಿ ವಿಚಾರಣೆಯನ್ನು ಫೆ.14ಕ್ಕೆ ಮುಂದೂಡಿತು. ಎಜಿ ಕಚೇರಿ ಬೇಕಿದ್ದರೆ ವಿಧಾನಸೌಧದಿಂದಲೇ ಕಾರ್ಯನಿರ್ವಹಿಸಲಿ: ವಿಚಾರಣೆ ವೇಳೆ ಸಿಜೆ, ‘ಹೈಕೋರ್ಟ್‌ಗೆ ಮೂಲಸೌಕರ್ಯ ಒದಗಿಸುವುದಕ್ಕಿಂತ ಮುಖ್ಯ ಕೆಲಸ ಇನ್ಯಾವುದಿದೆ’ ಎಂದು ಖಾರವಾಗಿ ಸರಕಾರವನ್ನು ಪ್ರಶ್ನಿಸಿದರು. ಅಲ್ಲದೆ, ಹೈಕೋರ್ಟ್‌ನ ಕೆಲವು ಭಾಗ ಮತ್ತು ಹಳೆಯ ಕೆಜಿಐಡಿ ಕಟ್ಟಡದಲ್ಲಿ ಎಜಿ ಕಚೇರಿ ನಿರ್ವಹಣೆ ಮಾಡುತ್ತಿದ್ದು, ಅದನ್ನು ಅಲ್ಲಿಂದ ತೆರವು ಮಾಡಿದರೆ ಕಾರ್ಯ ನಿರ್ವಹಿಸುವುದು ಕಷ್ಟಕರವಾಗಲಿದೆ ಎಂದು ಸರಕಾರಿ ವಕೀಲರು ಹೇಳಿದರು. ಆಗ ಸಿಜೆ ಲಘು ಧಾಟಿಯಲ್ಲಿ ‘ಬೇಕಿದ್ದರೆ ಅಡ್ವೊಕೇಟ್ ಜನರಲ್ ಕಚೇರಿ ವಿಧಾನಸೌಧದಿಂದಲೇ ಕಾರ್ಯನಿರ್ವಹಿಸಲಿ’ ಎಂದು ಹೇಳಿದರು.
from India & World News in Kannada | VK Polls https://ift.tt/0erglB2