ದೀಪಿಕಾ ಕೆ.ಎಮ್. ಬೆಂಗಳೂರು: ಅಮೆರಿಕ, ಚೀನಾದಂತೆ ಲೀಗ್ ಸಂಸ್ಕೃತಿ ಅಳವಡಿಸಿಕೊಂಡ ಪರಿಣಾಮ ಕಳೆದ ಹತ್ತು ವರ್ಷಗಳಲ್ಲಿ ಭಾರತ ಕ್ರೀಡಾ ಕೇಂದ್ರಬಿಂದುವಾಗಿ ಜಗತ್ತಿನ ಗಮನ ಸೆಳೆಯುತ್ತಿದೆ. 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಲೀಗ್ ಸಂಸ್ಕೃತಿ ಆರಂಭಿಸಿದ ಭಾರತವು ಇಂದು ಹತ್ತಕ್ಕೂ ಹೆಚ್ಚು ಲೀಗ್ ಟೂರ್ನಿಗಳ ತವರಾಗಿ ಮಾರ್ಪಟ್ಟಿದೆ. ದೇಶದಲ್ಲಿ ನಶಿಸುತ್ತಿದ್ದ ಕ್ರೀಡೆಗಳ ಉತ್ತೇಜನದ ಜತೆಗೆ ಕ್ರಿಕೆಟ್, ಫುಟ್ಬಾಲ್, ಹಾಕಿ, ಬ್ಯಾಡ್ಮಿಂಟನ್ ನಂತಹ ಕ್ರೀಡೆಗಳನ್ನು ಇನ್ನಷ್ಟು ಜನಪ್ರಿಯಗೊಳಿಸಲು ಯತ್ನಿಸಲಾಗುತ್ತಿದ್ದು ಆಟಗಾರರು ಹಾಗೂ ಸಂಬಂಧ ಪಟ್ಟವರ ಬೆಳವಣಿಗೆಗೆ ಧಾವಿಸಲಾಗಿದೆ. ಫೆಬ್ರವರಿ 5ರಂದು ಹೈದರಾಬಾದ್ ನ ಗಚ್ಚಿ ಬೌಲಿ ಕ್ರೀಡಾಂಗಣದಲ್ಲಿ ನಡೆಯಲಿರುವ 7 ತಂಡಗಳ ಪ್ರೈಮ್ ವಾಲಿಬಾಲ್ ಲೀಗ್ ದೇಶದ ಲೀಗ್ ಟೂರ್ನಿಗೆ ಹೊಸ ಸೇರ್ಪಡೆಯಾಗಿದೆ. ದೇಶದಲ್ಲಿ ನಡೆಯುವ ಎಲ್ಲ ಲೀಗ್ ಟೂರ್ನಿಗಳಲ್ಲಿ ಕರ್ನಾಟಕ ಅಥವಾ ಬೆಂಗಳೂರನ್ನು ಪ್ರತಿನಿಧಿಸುವ ತಂಡವೊಂದು ಇರುವುದು ವಿಶೇಷವಾಗಿದೆ. ಅಂತೆಯೇ ಬೆಂಗಳೂರು ಟಾರ್ಪಿಡೋಸ್ ತಂಡ ಪ್ರೈಮ್ ವಾಲಿಬಾಲ್ ಲೀಗ್ ನ ಭಾಗವಾಗಿದ್ದು, ಮಾಜಿ ಆಟಗಾರ ಕೆ.ಆರ್. ಲಕ್ಷ್ಮಿ ನಾರಾಯಣ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಬೆಂಗಳೂರು ಟಾರ್ಪಿಡೋಸ್ ತಂಡ ರೌಂಡ್ ರಾಬಿನ್ ಮಾದರಿಯಲ್ಲಿ ಫೆಬ್ರವರಿ 8ರಂದು ಕೊಚ್ಚಿ ಬ್ಲೂ ಸ್ಪೈಕರ್ಸ್ ವಿರುದ್ಧ ಅಭಿಯಾನ ಆರಂಭಿಸಲಿದೆ. ತಂಡದ ಸಾಮರ್ಥ್ಯ, ತರಬೇತಿ, ಲೀಗ್ ನ ಮಾದರಿ ಸೇರಿದಂತೆ ಇತರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ. ತಂಡದ ಸಂಯೋಜನೆ ಹೇಗಿದೆ? ಬೆಂಗಳೂರು ಟಾರ್ಪಿಡೋಸ್ ಯುವಕರು ಮತ್ತು ಅನುಭವಿಗಳಿಂದ ಕೂಡಿದ ಸಮಾತೋಲನ ತಂಡವಾಗಿದೆ. ರಾಜ್ಯ ಹಾಗೂ ದೇಶದ ಪ್ರತಿಭಾನ್ವಿತ ಆಟಗಾರರು ತಂಡದಲ್ಲಿರುವುದು ಇತರ ತಂಡಗಳಿಗೆ ಹೋಲಿಸಿದರೆ ಬಲಿಷ್ಠ ಎನಿಸಿದೆ. ತಂಡದ ತರಬೇತಿ ಬಗ್ಗೆ ತಿಳಿಸಿಜನವರಿ ಆರಂಭದಿಂದಲೂ ನಾವು ಅಭ್ಯಾಸ ನಡೆಸುತ್ತಿದ್ದೇವೆ. ಮೈಸೂರಿನಲ್ಲಿ ಆಯೋಜಿಸಲಾಗಿದ್ದ ತರಬೇತಿ ಶಿಬಿರದಲ್ಲಿ ನಿತ್ಯ 4ರಿಂದ 5 ಗಂಟೆ ಕಠಿಣ ತಾಲೀಮು ನಡೆಸಿದ್ದೇವೆ. ವಿದೇಶಿ ಆಟಗಾರರಾದ ನೋಹಾ ಟೈಟಾನಾ, ಕೈಲ್ ಫ್ರೆಂಡ್ ಹೈದರಾಬಾದ್ ಶಿಬಿರಕ್ಕೆ ಸೇರ್ಪಡೆಯಾಗಲಿದ್ದಾರೆ. ಮೊದಲ ಪಂದ್ಯಕ್ಕೂ ಮುನ್ನ ತಂಡದ ಸಂಯೋಜನೆ ಬಗ್ಗೆ ಗಮನ ಹರಿಸಿದ್ದು, ಕಾರ್ಯತಂತ್ರಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಎದುರು ನೋಡುತ್ತಿದೆ. ಯಾವ ತಂಡ ಫೇವರಿಟ್ ?ಉದ್ಘಾಟನಾ ಆವೃತ್ತಿಯ ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ಯಾವುದೇ ತಂಡವನ್ನು ಫೇವರಿಟ್ ಎಂದು ಹೆಸರಿಸಲು ಸಾಧ್ಯವಿಲ್ಲ. ಏಕೆಂದರೆ ಲೀಗ್ ಅನ್ನು ಆಕರ್ಷಿಸಲು ಮತ್ತು ಪಂದ್ಯಕ್ಕೆ ವೇಗ ನೀಡಲು ಕೆಲವೊಂದು ಬದಲಾವಣೆ ತರಲಾಗಿದೆ. ಜತೆಗೆ ಇದು ಮೊದಲ ಟೂರ್ನಿಯಾಗಿದ್ದು ಎಲ್ಲ ತಂಡಗಳು ಸಮತೋಲನದಿಂದ ಕೂಡಿದ್ದು, ಚೊಚ್ಚಲ ಟ್ರೋಫಿಗೆ ಕಾತರಿಸುತ್ತಿವೆ. ಆದಾಗ್ಯೂ ಬೆಂಗಳೂರು ತಂಡ ಹರಾಜಿನಲ್ಲಿ ಕೆಲ ಪ್ರಮುಖ ಆಟಗಾರರನ್ನು ಖರೀದಿಸಿದ್ದು, ಬಲಿಷ್ಠ ಎನಿಸಿದೆ. ಟೀಮ್ ಇಂಡಿಯಾದ ರಂಜೀತ್ ಸಿಂಗ್ , ಕರ್ನಾಟಕದ ಯುವ ಆಟಗಾರರಾದ ವಿನಾಯಕ್, ಗಣೇಶ್ ಮತ್ತು ಸ್ರಜನ್ ಶೆಟ್ಟಿ ತಂಡದಲ್ಲಿದ್ದಾರೆ. 2019ರಲ್ಲಿ ನಡೆದ ವಾಲಿಬಾಲ್ ಲೀಗ್ ಏನಾಯಿತು?2019 ಜನವರಿಯಲ್ಲಿ ವಾಲಿಬಾಲ್ ಲೀಗ್ ಆರಂಭಿಸಲಾಗಿತ್ತು. ಆದರೆ ಭಾರತೀಯ ವಾಲಿಬಾಲ್ ಲೀಗ್ ಮಾನ್ಯತೆ ಕಳೆದುಕೊಂಡ ಕಾರಣ ಸದ್ಯ ಆ ಲೀಗ್ ಕೈಬಿಡಲಾಗಿದೆ. ಹೀಗಾಗಿ ಖಾಸಗಿ ಸಂಸ್ಥೆಯೊಂದು ವಾಲಿಬಾಲ್ ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ಪ್ರೈಮ್ ವಾಲಿಬಾಲ್ ಲೀಗ್ ಹೆಸರಿನಲ್ಲಿ ಹೊಸ ಲೀಗ್ ಆರಂಭಿಸುತ್ತಿದೆ. ಇದು ಕ್ರೀಡೆ, ಆಟಗಾರರು ಹಾಗೂ ಇದನ್ನೇ ನಂಬಿರುವ ಮತ್ತು ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. ಲೀಗ್ ಆಯೋಜನೆ ಹೇಗೆ?ಸದ್ಯ ದೇಶದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್, ಇಂಡಿಯನ್ ಸೂಪರ್ ಲೀಗ್ ನಂತೆಯೇ ಪ್ರೈಮ್ ವಾಲಿಬಾಲ್ ಲೀಗ್ ಸಹ ನಡೆಯಲಿದೆ. ಸಂಪೂರ್ಣ ಬಯೋಬಬಲ್ ವಾತಾವರಣದಲ್ಲಿ ನಡೆಯಲಿರುವ ಕಾರಣ ಪ್ರೇಕ್ಷಕರಿಗೆ ಅವಕಾಶವಿಲ್ಲ. ಆದರೆ ಟಿವಿ ಮತ್ತು ಸಾಮಾಜಿಕ ತಾಣಗಳಲ್ಲಿ ಇದರ ನೇರ ಪ್ರಸಾರ ಇರಲಿದೆ. ಕಬಡ್ಡಿ, ಐಎಸ್ಎಲ್ ವೀಕ್ಷಿಸುತ್ತಿದ್ದ ಕ್ರೀಡಾಭಿಮಾನಿಗಳು ಇದೀಗ ಫೆಬ್ರವರಿ 27ರವರೆಗೆ ವಾಲಿಬಾಲ್ ಪಂದ್ಯಗಳನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.
- ಟೂರ್ನಿ- ಪ್ರೈಮ್ ವಾಲಿಬಾಲ್ ಲೀಗ್
- ಅವಧಿ - ಫೆಬ್ರವರಿ 5ರಿಂದ ಫೆಬ್ರವರಿ 27
- ತಂಡಗಳು - 7
- ಮಾದರಿ- ರೌಂಡ್ ರಾಬಿನ್, ನಾಕೌಟ್
- ಸ್ಥಳ - ಗಚ್ಚಿ ಬೌಲಿ ಕ್ರೀಡಾಂಗಣ, ಹೈದರಾಬಾದ್
- ಬೆಂಗಳೂರು ಟಾರ್ಪಿಡೋಸ್
- ಅಹಮದಾಬಾದ್ ಡಿಫೆಂಡರ್ಸ್
- ಹೈದರಾಬಾದ್ ಬ್ಲಾಕ್ ಹವಾಕ್ಸ್
- ಕೋಲ್ಕೊತಾ ಥಂಡರ್ ಬೋಲ್ಟ್ಸ್
- ಕೋಚ್ಚಿ ಬ್ಲೂ ಸ್ಪೈಕರ್ಸ್
- ಚೆನ್ನೈ ಬ್ಲಿಟ್ಜ್
- ಕ್ಯಾಲಿಕಟ್ ಹೀರೋಸ್
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/iAHLxq10O