ಬರ್ಮಿಂಗ್ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್ನಲ್ಲಿ ಸಮಯೋಚಿತ ಶತಕದ ನೆರವಿನಿಂದ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧ ಆರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಸೆಮಿಫೈನಲ್ ಪ್ರವೇಶ ಸಾಧ್ಯತೆಯನ್ನು ಜೀವಂತವಾಗಿರಿಸಿದೆ. ಇನ್ನೊಂದೆಡೆ ಕಿವೀಸ್ ವಿಶ್ವಕಪ್ನಲ್ಲಿ ಮೊದಲ ಸೋಲಿಗೆ ತುತ್ತಾಗಿದೆ. ಅತ್ತ ಶತಕ ವೈಭವ ಮೆರೆದಿರುವ ಬಾಬರ್ ವೆಸ್ಟ್ಇಂಡೀಸ್ನ ಬ್ಯಾಟಿಂಗ್ ದೈತ್ಯ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ ದಕ್ಷಿಣ ಆಫ್ರಿಕಾದ ಹಾಶೀಮ್ ಆಮ್ಲಾ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗದಲ್ಲಿ 3000 ರನ್ ದಾಖಲೆಯನ್ನು ಬರೆದಿದ್ದಾರೆ. ಬಾಬರ್ ತಮ್ಮ 68ನೇ ಇನ್ನಿಂಗ್ಸ್ನಲ್ಲಿ ಈ ಸ್ಮರಣೀಯ ದಾಖಲೆ ಬರೆದಿದ್ದಾರೆ. ವಿಂಡೀಸ್ನ ಮಾಜಿ ದಿಗ್ಗಜ ರಿಚರ್ಡ್ಸ್ 69 ಇನ್ನಿಂಗ್ಸ್ಗಳಲ್ಲಿ ಇದೇ ಸಾಧನೆ ಮಾಡಿದ್ದರು. ಇನ್ನು ಅಗ್ರಸ್ಥಾನದಲ್ಲಿರುವ ಆಮ್ಲಾ 57 ಇನ್ನಿಂಗ್ಸ್ಗಳಲ್ಲೇ ದಾಖಲೆ ತಲುಪಿದ್ದರು. 127 ಎಸೆತಗಳನ್ನು ಎದುರಿಸಿದ ಬಾಬರ್ 11 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿ ಅಜೇಯರಾಗುಳಿದಿದ್ದರು. ಈ ಮೂಲಕ ಏಕದಿನ ವಿಶ್ವಕಪ್ನಲ್ಲಿ 32 ವರ್ಷಗಳ ಬಳಿಕ ಪಾಕಿಸ್ತಾನ ಪರ ಸೆಂಚುರಿ ಬಾರಿಸಿದ ಮೊತ್ತ ಮೊದಲ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಎಂಬ ಹಿರಿಮೆಗೂ ಪಾತ್ರವಾಗಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2X8aB2i