
ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಮಂಗಳವಾರ ನಡೆಯುವ ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮಳೆಯ ಹಿನ್ನಲೆಯಲ್ಲಿ ತೇವಯುಕ್ತವಾದ ಔಟ್‌ಫೀಲ್ಡ್‌ನಿಂದಾಗಿ ಟಾಸ್ ವಿಳಂಬವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಸೆಮಿಫೈನಲ್ಸ್ ಆಸೆ ಜೀವಂತವಾಗಿರಿಸಿಕೊಂಡಿರುವ ಪಾಕಿಸ್ತಾನ ತಂಡ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಬುಧವಾರ ಅಜೇಯ ನ್ಯೂಜಿಲೆಂಡ್‌ನ ಸವಾಲು ಎದುರಿಸಲಿದ್ದು, 'ಮಾಡು ಇಲ್ಲವೇ ಮಡಿ' ಪರಿಸ್ಥಿತಿ ಎದುರಿಸುತ್ತಿದೆ. ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ 89 ರನ್‌ಗಳ ಸೋಲನುಭವಿಸಿದ ಪಾಕಿಸ್ತಾನ ತಂಡ ವ್ಯಾಪಕ ಟೀಕೆಗಳಿಗೆ ಗುರಿಯಾಗಿತ್ತು. ಆದರೆ ಆ ನಂತರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 49 ರನ್ ಗೆಲುವು ಸಾಧಿಸಿರುವ ಪಾಕ್, ಸೆಮಿಫೈನಲ್ಸ್ ಹಂತವನ್ನು ಜೀವಂತವಾಗಿರಿಸಿಕೊಂಡಿದೆ. ಕೇವಲ ಎರಡು ಪಂದ್ಯಗಳಲ್ಲಿ ಗೆದ್ದಿರುವ ಪಾಕಿಸ್ತಾನ, ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಆರು ಪಂದ್ಯಗಳಿಂದ ಒಟ್ಟು 5 ಅಂಕಗಳನ್ನು ಸಂಪಾದಿಸಿದೆ. ಸರ್ಫರಾಜ್ ಬಳಗ ಉಪಾಂತ್ಯ ಪ್ರವೇಶಿಸಬೇಕಾದರೆ ಕಿವೀಸ್ ಒಳಗೊಂಡಂತೆ ಉಳಿದ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಬೇಕಿದೆ. ಜತೆಗೆ ಇತರ ಪಂದ್ಯಗಳ ಫಲಿತಾಂಶ ಕೂಡ ಪಾಕಿಸ್ತಾನದ ಪರವಾಗಿ ಇರಬೇಕು. ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಆಗ್ರಸ್ಥಾನದಲ್ಲಿರುವ ವೇಗಿ ಮೊಹಮ್ಮದ್ ಆಮಿರ್ (15 ವಿಕೆಟ್) ತಂಡದ ಪಾಕ್ ತಂಡದ ಸ್ಟಾರ್ ಆಟಗಾರ ಎನಿಸಿಕೊಂಡಿದ್ದಾರೆ. ಆರಂಭಿಕ ಪಂದ್ಯಗಳಲ್ಲಿ ಕಡೆಗಣಿಸಲ್ಪಟ್ಟಿದ್ದ ಹ್ಯಾರಿಸ್ ಸೊಹೆಲ್ ದಕ್ಷಿಣ ಆಫ್ರಿಕಾ ಎದುರು ಕೇವಲ 59 ಎಸೆತಗಳಲ್ಲಿ 89 ರನ್ ಗಳಿಸುವ ಮೂಲಕ ಉತ್ತಮ ಲಯ ಕಂಡುಕೊಂಡಿದ್ದಾರೆ. ಇವರಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧ ತಲಾ ಮೂರು ವಿಕೆಟ್ ಉರುಳಿಸಿದ್ದ ಶದಬ್ ಖಾನ್ ಮತ್ತು ವಹಾಬ್ ರಿಯಾಜ್ ಸಹ ಪಾಕಿಸ್ತಾನದ ಪ್ರಮುಖ ಅಸ್ತ್ರಗಳೆನಿಸಿದ್ದಾರೆ. ಅತ್ತ ಟೂರ್ನಿಯಲ್ಲಿ ಭಾರತ ಹೊರತುಪಡಿಸಿದರೆ ಅಜೇಯ ದಾಖಲೆಯೊಂದಿಗೆ ಶ್ರೇಷ್ಠ ಫಾರ್ಮ್‌ನಲ್ಲಿರುವ ನ್ಯೂಜಿಲೆಂಡ್ ತಂಡ ಬುಧವಾರ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಆದರೆ ಕಿವೀಸ್ ವಿಶ್ವಕಪ್ ಮುಖಾಮುಖಿಯಲ್ಲಿ ಪಾಕಿಸ್ತಾನ ವಿರುದ್ಧ 2-6ರಷ್ಟು ಹಿನ್ನಡೆ ಹೊಂದಿದೆ. ಸದ್ಯ ಆರು ಪಂದ್ಯಗಳಿಂದ 11ಅಂಕ ಹೊಂದಿರುವ ಕಿವೀಸ್, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದ್ದು, ಸೆಮಿಫೈನಲ್ಸ್‌ಗೆ ಸನಿಹಗೊಂಡಿದೆ. ಕೇನ್ ವಿಲಿಯಮ್ಸನ್ ನೇತೃತ್ವದ 'ಬ್ಲ್ಯಾಕ್ ಕಾಫ್ಸ್' ಶ್ರೇಷ್ಠ ಲಯದಲ್ಲಿದ್ದು, ತನ್ನ ಗೆಲುವಿನ ನಾಗಾಲೋಟ ಕಾಯ್ದುಕೊಳ್ಳಲು ಎದುರು ನೋಡುತ್ತಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31RmAQy