
ಅಮರಾವತಿ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ವಿರುದ್ಧ ಹಾಲಿ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ನೇತೃತ್ವದ ಸರಕಾರ ಸಮರ ಸಾರಿದ್ದು, ನಾಯ್ಡು ಅವರ ಝಡ್ ಪ್ಲಸ್ ಭದ್ರತೆ ಹಿಂತೆಗೆದುಕೊಂಡ ಬೆನ್ನಿಗೇ ಅವರು ನಿರ್ಮಿಸಿದ್ದ 'ಪ್ರಜಾವೇದಿಕೆ' ಕಟ್ಟಡವನ್ನು ನೆಲಸಮಗೊಳಿಸಿದೆ. ನಾಯ್ಡು ತಮ್ಮ ನಿವಾಸದ ಪಕ್ಕದಲ್ಲೇ ಜನರ ಕುಂದು ಕೊರತೆ ಆಲಿಸಲು 'ಪ್ರಜಾ ವೇದಿಕೆ' ಹೆಸರಿನಲ್ಲಿ ಕಟ್ಟಡ ನಿರ್ಮಿಸಿಕೊಂಡಿದ್ದರು. ಕೃಷ್ಣಾ ನದಿ ದಂಡೆಯಲ್ಲಿ ನಿರ್ಮಾಣವಾಗಿರುವ ಇದು ಅಕ್ರಮ ಕಟ್ಟಡವೆಂದು ಹೇಳಿರುವ ಜಗನ್ ಸರಕಾರ, ಮಂಗಳವಾರ ರಾತ್ರಿಯೇ ಕಟ್ಟಡ ಕೆಡವಲು ಆದೇಶಿಸಿದೆ. ಅದರಂತೆ ಬುಧವಾರ ಬೆಳಗ್ಗೆಯೇ ಕಟ್ಟಡ ಕೆಡಹುವ ಕಾರ್ಯಾಚರಣೆ ನಡೆದಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಧಿಕಾರಿಗಳ ಜತೆಗೆ ಜಗನ್ ಮೊದಲ ಸಭೆಯನ್ನು 'ಪ್ರಜಾವೇದಿಕೆ' ಕಟ್ಟಡದಲ್ಲೇ ನಡೆಸಿದ್ದರು. ಈ ಕಟ್ಟಡವನ್ನು ನಾಯ್ಡು 5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ್ದರು. ಜೆಸಿಬಿ ಯಂತ್ರಗಳು ಕಟ್ಟಡ ಕೆಡಹುವ ಕಾರ್ಯ ಆರಂಭಿಸುವ ಮೊದಲೇ ನೂರಾರು ಕಾರ್ಯಕರ್ತರು ಕಟ್ಟಡದ ಪೀಠೋಪಕರಣಗಳು, ಏರ್ ಕಂಡೀಷನರ್‌ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊತ್ತೊಯ್ದರು. ಈ ಸಂದರ್ಭ ಕಾನೂನು ಸುವ್ಯವಸ್ಥೆ ಪಾಲನೆಗೆ ಸರಕಾರ ಕಟ್ಟೆಚ್ಚರ ವಹಿಸಿದ್ದು, ಸಾಕಷ್ಟು ಬಿಗಿ ಬಂದೋಬಸ್ತ್ ಏರ್ಪಡಿಸಿದೆ. ನಾಯ್ಡು ಅವರು ವೈಯಕ್ತಿಕ ಭೇಟಿಗಾಗಿ ಯುರೋಪ್ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲೇ ಅವರ ನಿವಾಸದ ಪಕ್ಕದಲ್ಲಿ ಕಟ್ಟಿಕೊಂಡಿದ್ದ ಪ್ರಜಾವೇದಿಕೆ ಕಟ್ಟಡ ನೆಲಸಮವಾಗಿದೆ. ಜಗನ್ ಸಮರ್ಥನೆ: ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ರಾಜ್ಯದ ಸಾಮಾನ್ಯ ಜನತೆಗೆ ಅನ್ವಯವಾಗುವ ನಿಯಮಗಳೇ ರಾಜಕೀಯ ನಾಯಕರಿಗೂ ಅನ್ವಯವಾಗುತ್ತದೆ. ಈ ನೆಲದ ಕಾನೂನನ್ನು ಸರಕಾರ ಗೌರವಿಸುತ್ತದೆ,'' ಎಂದು ಜಗನ್ ಸಮರ್ಥಿಸಿಕೊಂಡಿದ್ದಾರೆ. ಆಂಧ್ರದ ಹೊಸ ರಾಜಧಾನಿ ಅಮರಾವತಿಯಲ್ಲಿ ಕೃಷ್ಣಾ ನದಿಯ ದಡದಲ್ಲಿ 2017ರಲ್ಲಿ ನಿರ್ಮಿಸಲಾಗಿದ್ದ ಈ ಕಟ್ಟಡವನ್ನು ಚಂದ್ರಬಾಬು ನಾಯ್ಡು ಅವರು ಕಚೇರಿ ಮತ್ತು ಸಭೆಗಳನ್ನು ನಡೆಸುವ ಉದ್ದೇಶಕ್ಕೆ ಬಳಸುತ್ತಿದ್ದರು. ಜಗನ್ ಅಧಿಕಾರ ವಹಿಸಕೊಂಡ ಬಳಿಕ ಸರಕಾರಕ್ಕೆ ಪತ್ರ ಬರೆದಿದ್ದ ಚಂದ್ರಬಾಬು ನಾಯ್ಡು, 'ಪ್ರಜಾ ವೇದಿಕೆ'ಯನ್ನು ಬಳಸಿಕೊಳ್ಳಲು ಅನುಮತಿ ನೀಡುವಂತೆ ಕೋರಿದ್ದರು. ಆದರೆ, ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಚಂದ್ರಬಾಬು ನಾಯ್ಡು ಅವರು ವಿದೇಶಿ ಪ್ರವಾಸದಲ್ಲಿರುವಾಗಲೇ ಜಗನ್ ಕಟ್ಟಡವನ್ನು ಒಡೆಯುವ ದಿಢೀರ್ ನಿರ್ಧಾರ ಪ್ರಕಟಿಸಿರುವುದು ಗಮನಾರ್ಹ. ಕಳೆದ ಶನಿವಾರವೇ ಸರಕಾರ ಕಟ್ಟಡವನ್ನು ವಶಕ್ಕೆ ಪಡೆದಿದ್ದು, ಅದರಲ್ಲಿದ್ದ ಪೀಠೋಪಕರಣ ಹಾಗೂ ಇತರೆ ವಸ್ತುಗಳನ್ನು ಹೊರಗೆ ಎಸೆಯಲಾಗಿತ್ತು. ಜಗನ್ ಸರಕಾರದ ಕ್ರಮವನ್ನು ಟಿಡಿಪಿ ದ್ವೇಷ ರಾಜಕೀಯ ಎಂದು ಟೀಕಿಸಿದೆ.
from India & World News in Kannada | VK Polls https://ift.tt/2KDCf0s