ಇರಾಕ್‌ನಲ್ಲಿ ಪತ್ತೆಯಾಯ್ತು ಶ್ರೀರಾಮ, ಹನುಮಂತನ ಭಿತ್ತಿಚಿತ್ರ: ಭಾರತೀಯ ದೂತಾವಾಸದಿಂದ ಅಧ್ಯಯನ

ಲಖನೌ: ಭಾರತೀಯ ನಿಯೋಗವೊಂದು ಜೂನ್‌ನಲ್ಲಿ ಇರಾಕ್‌ ಯಾತ್ರೆ ಕೈಗೊಂಡಿದ್ದ ವೇಳೆ ಕ್ರಿಸ್ತಪೂರ್ವ 2000ನೇ ಇಸವಿಯ ಕಾಲದ್ದು ಎನ್ನಲಾದ ಪ್ರಾಚೀನ ಮಣ್ಣಿನ ಕಲಾಕೃತಿಯೊಂದನ್ನು (ಮ್ಯೂರಲ್ ಚಿತ್ರ- ಮಣ್ಣಿನ ಗೋಡೆಯಲ್ಲಿ ಕೆತ್ತಲಾದ ಚಿತ್ರ) ಪತ್ತೆ ಮಾಡಿದೆ. ಅದು ಭಗವಾನ್ ರಾಮನ ಚಿತ್ರವಿರಬಹುದು ಎಂದು ಅಯೋಧ್ಯಾ ಶೋಧ ಸಂಸ್ಥಾನ್ ಹೇಳಿದೆ. ಇರಾಕ್‌ನ ಹೊರೇನ್ ಶೇಖಾನ್ ಪ್ರದೇಶದ ಸಾಗುವ ಇಕ್ಕಟ್ಟಾದ ದಾರಿಗೆ ಅಭಿಮುಖವಾಗಿರುವ ಮಣ್ಣಿನ ಗೋಡೆಯೊಂದರಲ್ಲಿ (ದರ್ಬಂದ್-ಇ-ಬೆಲುಲಾ) ಈ ಮುದ್ರೆ ಕಂಡುಬಂದಿದೆ. ಚಿತ್ರದಲ್ಲಿ ಎದೆಯ ಮೇಲೆ ಯಾವುದೇ ಅಲಂಕಾರವಿಲ್ಲದ ರಾಜನೊಬ್ಬ ಧನುಸ್ಸನ್ನು ಹಿಡಿದು ಬತ್ತಳಿಕೆಯಿಂದ ಬಾಣ ಹೂಡುತ್ತಿರುವ ಚಿತ್ರಣವಿದೆ. ಅಲ್ಲದೆ ರಾಜನ ಸೊಂಟಕ್ಕೆ ಖಡ್ಗವನ್ನು ಸಿಕ್ಕಿಸಿಕೊಂಡಂತೆ ಇದೆ. ರಾಜನ ಎದುರಿಗೆ ಪಾದದ ಬಳಿ ಕೈಮುಗಿದು ಕುಳಿತ ಸೇವಕನ ಬಿಂಬವಿದ್ದು, ಅದು ಹನುಮಂತನದ್ದಾಗಿರಬಹುದು ಎಂದು ಅಯೋಧ್ಯಾ ಶೋಧ ಸಂಸ್ಥಾನದ ನಿರ್ದೇಶಕರು ಹೇಳುತ್ತಾರೆ. ಇರಾಕಿ ವಿದ್ವಾಂಸರ ಪ್ರಕಾರ, ಮಣ್ಣಿನ ಗೋಡೆಯ ಚಿತ್ರಣವು ಪರ್ವತ ಪ್ರದೇಶದ ಬುಡಕಟ್ಟು ನಾಯಕ 'ತಾರ್ದುನ್ನಿ'ಯನ್ನು ಹೋಲುತ್ತದೆ. ಹಿಂದೆಯೂ ಇರಾಕ್‌ನ ಕೆಲವೆಡೆ ಪತ್ತೆಯಾದ ಇಂತಹದೇ ಮಣ್ಣಿನ ಭಿತ್ತಿ ಕೆತ್ತನೆಗಳಲ್ಲಿ ರಾಜ ಹಾಗೂ ಅವನ ಮುಂದೆ ಮೊಣಕಾಲೂರಿ ಕುಳಿತ ಸೇವಕನ ಚಿತ್ರಗಳು ಕಂಡು ಬಂದಿವೆ. ಈ ಸೇವಕ ರಾಜನು ಬಂಧಿಸಿ ಕರೆತಂದ ಕೈದಿಯಾಗಿರಬಹುದು ಎಂದು ಊಹಿಸಲಾಗಿದೆ. ಇರಾಕ್‌ನಲ್ಲಿರುವ ಭಾರತದ ರಾಯಭಾರಿ ಪ್ರದೀಪ್ ಸಿಂಗ್ ರಾಜಪುರೋಹಿತ್ ನೇತೃತ್ವದ ನಿಯೋಗವು ಅಯೋಧ್ಯಾ ಶೋಧ ಸಂಸ್ಥಾನದ ಕೋರಿಕೆ ಮೇರೆಗೆ ಈ ಪ್ರದೇಶಕ್ಕೆ ಯಾತ್ರೆ ಕೈಗೊಂಡಿತ್ತು. ಅಯೋಧ್ಯಾ ಶೋಧ ಸಂಸ್ಥಾನವು ಉತ್ತರ ಪ್ರದೇಶದ ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಅಧ್ಯಯನ ಸಂಸ್ಥೆಯಾಗಿದೆ. ಎಬ್ರಿಲ್ ಕಾನ್ಸುಲೇಟ್‌ನಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿ ಚಂದ್ರಮೌಳಿ ಕರ್ಣ, ಸುಲೈಮಾನಿಯಾ ಯನಿವರ್ಸಿಟಿಯ ಇತಿಹಾಸ ತಜ್ಞರು ಮತ್ತು ಕುರ್ದಿಸ್ಥಾನದ ಇರಾಕಿ ಗವರ್ನರ್ ಕೂಡ ಈ ಶೋಧ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಬೆಲುಲಾ ಪಾಸ್‌ ಬಳಿ ಪತ್ತೆಯಾಗಿರುವುದು ರಾಮನ ಚಿತ್ರಗಳೇ ಎಂದು ವ್ಯಾಖ್ಯಾನಕಾರರ ಪುರಾವೆಗಳು ಹೇಳುತ್ತವೆ. ಆದರೆ ಈ ನಿಯೋಗ ಈಗ ಸಂಗ್ರಹಿಸಿರುವ ಭೌಗೋಳಿಕ ದಾಖಲೆಗಳ ವಿಸ್ತೃತ ಅಧ್ಯಯನದಿಂದ ಭಾರತೀಯ ಮತ್ತು ಮೆಸೊಪೊಟೇಮಿಯಾ ಸಂಸ್ಕೃತಿಗಳ ನಡುವಣ ಕೊಂಡಿಯನ್ನು ಪತ್ತೆ ಮಾಡಬಹುದು' ಎಂದು ಅಯೋಧ್ಯಾ ಶೋಧ ಸಂಸ್ಥಾನದ ನಿರ್ದೇಶಕ ಯೋಗೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ. ಉತ್ರ ಪ್ರದೇಶ ಸರಕಾರದ ಪರವಾಗಿ ಭಾರತೀಯ ದೂತಾವಾಸದ ಅಧಿಕಾರಿಗಳು ಈ ಸ್ಥಳಕ್ಕೆ ಒಮ್ಮೆ ಭೇಟಿ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ಸಿಂಗ್, 'ಮಣ್ಣಿನ ಕೆತ್ತನೆಯಲ್ಲಿ ಕಂಡು ಬರುವ ದೊರೆ ಮತ್ತು ಕೋತಿಯ (ಸೇವಕನ) ಚಿತ್ರಣವು ನಮ್ಮಲ್ಲಿ ಹಲವರಿಗೆ ಮತ್ತು ಹನುಮಂತನನ್ನು ನೆನಪಿಗೆ ತಂದಿತು' ಎಂದು ತಿಳಿಸಿದರು. ಇರಾಕಿನ ಪ್ರಾಚ್ಯವಸ್ತು ಸಂಶೋಧಕರು ಮತ್ತು ಇತಿಹಾಸಕಾರರ ಪ್ರಕಾರ ಈ ಚಿತ್ರಗಳಿಗೂ ಭಗವಾನ್ ರಾಮನಿಗೂ ಯಾವುದೇ ಸಂಬಂಧವಿಲ್ಲ. ಆದರೆ ಸಿಂಗ್‌ ಅವರು 'ಎರಡೂ ನಾಗರಿಕತೆಗಳ ನಡುವಣ ಸಂಬಂಧದ ಕೊಂಡಿಯನ್ನು ಶೋಧಿಸಲು ಇರಾಕ್ ಸರಕಾರದ ಅನುಮತಿ ಅಗತ್ಯವಿದೆ. ಅನುಮತಿಗಾಗಿ ನಾವು ಕೋರಿಕೆ ಸಲ್ಲಿಸಿದ್ದೇವೆ' ಎಂದು ತಿಳಿಸಿದರು. ಮತ್ತು ಮೆಸೊಪೊಟೇಮಿಯಾ ನಾಗರಿಕತೆಗಳ ನಡುವೆ ಸಂಬಂಧ ಕಲ್ಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮೊದಲ ಅಧಿಕೃತ ಪ್ರಯತ್ನ ಇದಾಗಿದೆ ಎಂದು ಸಿಂಗ್ ತಿಳಿಸಿದರು. ಹಲವಾರು ಐತಿಹಾಸಿಕ ಉಲ್ಲೇಖಗಳನ್ನು ಪ್ರಸ್ತಾಪಿಸಿದ ಅವರು, ಕ್ರಿಸ್ತಪೂರ್ವ 4,500 ಮತ್ತು 1900ರ ನಡುವೆ ಕೆಳಗಿನ ಮೆಸೊಪೊಟೇಮಿಯಾ ಪ್ರದೇಶವನ್ನು ಸುಮೇರಿಯನ್ನರು ಆಳುತ್ತಿದ್ದರು. ಅವರು ಭಾರತದಿಂದ ಬಂದವರಿರಬೇಕು ಎಂದು ದಾಖಲೆಗಳು ಹೇಳುತ್ತಿದ್ದು, ಅವರ ವಂಶವಾಹಿಗಳು ಸಿಂಧೂ ಕಣಿವೆ ನಾಗರಿಕತೆಯ ವಂಶವಾಹಿ ಕುರುಹುಗಳ ಜತೆ ಹೋಲಿಕೆಯಾಗುತ್ತವೆ' ಎಂದು ಸಿಂಗ್ ಪ್ರತಿಪಾದಿಸಿದರು. ಅಯೋಧ್ಯೆಯಲ್ಲಿ ಅದೇ ರೀತಿಯ ಮಣ್ಣಿನ ಭಿತ್ತಿಚಿತ್ರದ ಪ್ರತಿಕೃತಿ ರೂಪಿಸುವ ಪ್ರಸ್ತಾವವೊಂದನ್ನು ಉತ್ತರ ಪ್ರದೇಶದ ಸಂಸ್ಕೃತಿ ಇಲಾಖೆ ಸಿದ್ಧಪಡಿಸಿದೆ. 'ಜಗತ್ತಿನ ಹಲವು ಭಾಗಗಳಲ್ಲಿ ಭಗವಾನ್ ಶ್ರೀರಾಮನ ಹೆಜ್ಜೆ ಗುರುತುಗಳ ದಾಖಲೆಗಳು ಲಭ್ಯವಾಗಿವೆ. ಹೀಗೆ ಜಗತ್ತಿನ ನಾನಾ ಭಾಗಗಳಲ್ಲಿ ಪತ್ತೆಯಾದ ದಾಖಲೆಗಳ ಪ್ರತಿಕೃತಿಗಳನ್ನು ಅಯೋಧ್ಯೆಯಲ್ಲಿ ಒಂದೇ ಕಡೆ ಸಂಗ್ರಹಿಸಿ ಇಡುವ ಉದ್ದೇಶವಿದೆ' ಎಂದು ಅವರು ವಿವರಿಸಿದರು.


from India & World News in Kannada | VK Polls https://ift.tt/2YajnJA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...