ಇಂದಿನಿಂದ ಸುಪ್ರೀಂ ಕೋರ್ಟ್ ಕಲಾಪ ಪುನರಾರಂಭ: ರಾಮಮಂದಿರ, ರಫೇಲ್‌, ರಾಹುಲ್‌ ಪ್ರಕರಣಗಳ ಇತ್ಯರ್ಥ ನಿರೀಕ್ಷೆ

ಹೊಸದಿಲ್ಲಿ: ಬರೋಬ್ಬರಿ 6 ವಾರಗಳ ದೀರ್ಘ ರಜೆ ಬಳಿಕ ಜುಲೈ 1 ರಿಂದ ಸುಪ್ರೀಂ ಕೋರ್ಟ್ ಕಾರ್ಯ ಕಲಾಪಗಳು ಪುನರಾರಂಭಗೊಳ್ಳಲಿವೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದಲ್ಲಿ ಎಲ್ಲ 31 ನ್ಯಾಯಾಧೀಶರೊಂದಿಗೆ ಕೋರ್ಟ್ ಕಲಾಪಗಳು ಆರಂಭವಾಗಲಿವೆ. ಪುನಃ ಕಾರ್ಯಾರಂಭ ಮಾಡುತ್ತಿದ್ದಂತೆ ಅತಿ ಸೂಕ್ಷ್ಮ ಪ್ರಕರಣಗಳಾದ ಒಪ್ಪಂದ, ,ರಾಮ ಮಂದಿರ,ರಾಹುಲ್‌ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ, ಆರ್‌ಟಿಐ ವ್ಯಾಪ್ತಿಗೆ ಸಿಜೆಐ, ವಿಚಾರಣೆಗಳನ್ನು ಕೋರ್ಟ್ ಕೈಗೆತ್ತಿಕೊಳ್ಳಲಿದ್ದು, ಆದಷ್ಟು ಬೇಗ ಈ ಪ್ರಕರಣಗಳ ತೀರ್ಪು ಪ್ರಕಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದರಿಂದ ದೇಶದ ರಾಜಕೀಯ, ಧಾರ್ಮಿಕ ಚಿತ್ರಣದ ಮೇಲೆ ಮಹತ್ತರ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಯಾವ ಪ್ರಕರಣಗಳಿವೆ?: ದಶಕಗಳಿಂದ ನಡೆಯುತ್ತಿರುವ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣ ಭೂಮಿ ವ್ಯಾಜ್ಯದ ಪ್ರಕರಣ ಮಾಜಿ ನ್ಯಾ. ಖಲೀಫುಲ್ಲಾ ನೇತೃತ್ವದ ಸಮಿತಿಯ ಸಂಧಾನ ಪ್ರಕ್ರಿಯೆ ಸ್ಥಿತಿಗತಿ ಕುರಿತು ಸಿಜೆಐ ರಂಜನ್‌ ಗೊಗೊಯ್‌ ನೇತೃತ್ವದ ಪೀಠ ಮಾಹಿತಿ ಪಡೆಯಲಿದೆ. ಇನ್ನೊಂದೆಡೆ, ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧವಿಮಾನಗಳನ್ನು ಕೇಂದ್ರ ಸರಕಾರ ಖರೀದಿಸುವ ಒಪ್ಪಂದದ ಕುರಿತು ಸುಪ್ರೀಂಕೋರ್ಟಿನ ತೀರ್ಪು ಮರುಪರಿಶೀಲನೆಗೆ ಮನವಿ ಮಾಡಲಾಗಿದ್ದ ಅರ್ಜಿಗಳ ಭವಿಷ್ಯದ ಬಗ್ಗೆ ಕೂಡ ಸಿಜೆಐ ಪೀಠ ನಿರ್ಧರಿಸಲಿದೆ. ರಫೇಲ್‌ಗೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿ 2018 ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲರಾದ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕೋರ್ಟ್ ಈಗ ಕೈಗೆತ್ತಿಕೊಳ್ಳಲಿದ್ದು, ಸದಸ್ಯದಲ್ಲಿಯೇ ತನ್ನ ನಿಲುವು ಪ್ರಕಟಿಸುವ ಸಾಧ್ಯತೆಗಳಿವೆ. ಇವೆರಡಲ್ಲದೆ ಚೌಕಿದಾರ್‌ ಚೋರ್‌ ಹೈ ಎಂದು ಸುಪ್ರೀಂಕೋರ್ಟ್‌ ಕೂಡ ಅಭಿಪ್ರಾಯಪಟ್ಟಿದೆ ಎಂದಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಹೂಡಿದ್ದ ನ್ಯಾಯಾಂಗ ನಿಂದನೆ ಪ್ರಕರಣದ ಬಗ್ಗೆ ಸಿಜೆಐ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ. ಈಗಾಗಲೇ ತಮ್ಮ ಹೇಳಿಕೆ ಕುರಿತು ರಾಹುಲ್‌ ಸುಪ್ರೀಂಕೋರ್ಟ್‌ಗೆ ಬೇಷರತ್‌ ಕ್ಷಮೆಯಾಚಿಸಿದ್ದಾರೆ. ಸಂಧಾನ ಸಮಿತಿಯ ಯತ್ನ ವಿಫಲ? ರಾಮಜನ್ಮಭೂಮಿ ವಿವಾದ ಇತ್ಯರ್ಥಕ್ಕೆ ಮಾಜಿ ನ್ಯಾಯಮೂರ್ತಿ ಎಫ್‌.ಎಮ್‌.ಖಲೀಫುಲ್ಲಾ ನೇತೃತ್ವದಲ್ಲಿ ತ್ರಿಸದಸ್ಯರ ಸಮಿತಿಯನ್ನು ಸುಪ್ರೀಂಕೋರ್ಟ್‌ ರಚಿಸಿ, ಕ್ಯಾಮೆರಾ ರೆಕಾರ್ಡಿಂಗ್‌ ಸಹಿತ ಸಂಧಾನ ಮಾತುಕತೆ ನಡೆಸುವಂತೆ ಸೂಚಿಸಿತ್ತು. ಸಿಜೈ ನೇತೃತ್ವದ ಪಂಚಸದಸ್ಯ ಪೀಠ ಸಮಿತಿಗೆ ಆಗಸ್ಟ್‌ 15ರವರೆಗೆ ಸಮಾಯಾವಕಾಶ ನೀಡಿದೆ. ಸಂಧಾನಕ್ಕೆ ಹಿಂದು ಸಂಘಟನೆಗಳ ಪರವಾದ ದಾವೆದಾರರು ಮತ್ತು ಮುಸ್ಲಿಂ ಸಂಘಟನೆಗಳ ಪರವಾದ ದಾವೆದಾರರು ಹೆಚ್ಚು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಸಮಿತಿಯ ಯತ್ನಕ್ಕೆ ಯಶಸ್ಸು ಕಷ್ಟಸಾಧ್ಯ ಎಂದು ವಿಶ್ಲೇಷಿಸಲಾಗಿದೆ. 2010ರ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ 14 ಅರ್ಜಿಗಳು ಸದ್ಯ ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿವೆ. ವಿದೇಶಿ ದೇಣಿಗೆ ದುರುಪಯೋಗದ ಪಿಐಎಲ್‌ ವಿಚಾರಣೆ ಸಾಮಾಜಿಕ ಕಾರ್ಯಕರ್ತೆ ಹಾಗೂ ವಕೀಲೆ ಇಂದಿರಾ ಜೈಸಿಂಗ್‌ , ಆನಂದ್‌ ಗ್ರೋವರ್‌ ಮತ್ತು ಲಾಯರ್ಸ್‌ ಕಲೆಕ್ಟೀವ್‌ ಎನ್‌ಜಿಒ ವಿರುದ್ಧ ಸಲ್ಲಿಕೆಯಾಗಿರುವ ವಿದೇಶಿ ದೇಣಿಗೆ ದುರುಪಯೋಗ ಆರೋಪದ ಪಿಐಎಲ್‌ ಅರ್ಜಿ ಕುರಿತು ಸುಪ್ರೀಂಕೋರ್ಟ್‌ ಈ ತಿಂಗಳು ನಿರ್ಧರಿಸಲಿದೆ. ಎಫ್‌ಐಆರ್‌ ದಾಖಲಿಸಿ, ಇಂದಿರಾ ಜೈಸಿಂಗ್‌ ವಿರುದ್ಧ ತನಿಖೆ ನಡೆಸುವಂತೆ ಪಿಐಎಲ್‌ ಕೋರಿದೆ. ವಿಧಿ 370 ಹಣೆಬರಹ? ಬಿಜೆಪಿ ನಾಯಕ ಹಾಗೂ ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ , ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಕೂಡ ಸುಪ್ರೀಂಕೋರ್ಟ್‌ ಈ ತಿಂಗಳು ನಡೆಸಲಿದೆ. ವಿಧಿ 35ಎ ಪ್ರಶ್ನಿಸಿರುವ ಹಲವು ಅರ್ಜಿಗಳ ವಿಚಾರಣೆ ಕೂಡ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ.


from India & World News in Kannada | VK Polls https://ift.tt/2ZZYHEA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...