ಹೊಸದಿಲ್ಲಿ: ತಮ್ಮಿಂದ ಪಡೆದುಕೊಂಡಿದ್ದ 200 ರೂಪಾಯಿಯನ್ನು ಮರಳಿ ನೀಡಿದ್ದಕ್ಕೆ ಕೋಪಗೊಂಡ ಇಬ್ಬರು ಬಾಲಕರು 17 ವರ್ಷದ ಯುವಕನನ್ನು ಹತ್ಯೆಗೈದ ಬೆಚ್ಚಿ ಬೀಳಿಸುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ನಿತಿನ್ ಮಿಶ್ರಾ ಮೃತ ದುರ್ದೈವಿಯಾಗಿದ್ದಾನೆ. ನೈಲಾನ್ ಹಗ್ಗವನ್ನು ಆತನ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿದ ಬಾಲಕರು, ಬಳಿಕ ಮುಖದ ಮೇಲೆ ದೊಡ್ಡ ಕಲ್ಲನ್ನೆತ್ತಿ ಜಜ್ಜಿದ್ದಾರೆ. ಬಳಿಕ ಆನಂದ ವಿಹಾರದ ಬಳಿಯಿದ್ದ ಕಸ ಡಂಪ್ ಮಾಡುವ ಸ್ಥಳದಲ್ಲಿ ಎಸೆದಿದ್ದಾರೆ. ಬುಧವಾರದಿಂದ ಮಿಶ್ರ ನಾಪತ್ತೆಯಾಗಿದ್ದ. ಗುರುವಾರ ರಾತ್ರಿಯವರೆಗೆ ಆತನಿಗಾಗ ಹುಡುಕಿ, ಶುಕ್ರವಾರ ಮುಂಜಾನೆ ಕುಟುಂಬ ಸದಸ್ಯರು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಕಸ ಆಯುವವರು ಮೃತ ದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಆತ ಧರಿಸಿದ್ದ ಬಟ್ಟೆಯ ಆಧಾರದ ಮೇಲೆ ಗುರುತು ಪತ್ತೆಯಾಯಿತು. ತನಿಖೆ ನಡೆಸಿದ ಪೊಲೀಸರಿಗೆ ಆತ ಕೊನೆಯದಾಗಿ 2 ಮಕ್ಕಳ ಜತೆ ಕಾಣಿಸಿಕೊಂಡಿದ್ದ ಮಾಹಿತಿ ಸಂಗ್ರಹಿಸಿ, ಅವರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ. ಆತ 200 ರೂಪಾಯಿ ಸಾಲ ಪಡೆದಿದ್ದ. ಮರಳಿಸಲು ಒಪ್ಪದಿದ್ದಾಗ ಜಗಳವಾಯಿತು. ಕೋಪದ ಭರದಲ್ಲಿ ಕೊಂದು ಹಾಕಿದೆವು ಎಂದು ಬಾಲಕರು ಒಪ್ಪಿಕೊಂಡಿದ್ದಾರೆ.
from India & World News in Kannada | VK Polls https://ift.tt/2YpVnT4