ಒಸಾಕಾ: ಭಯೋತ್ಪಾದನೆ ಮಾನವತೆಗೇ ಅತಿದೊಡ್ಡ ಬೆದರಿಕೆಯಾಗಿದೆ. ಭಯೋತ್ಪಾದನೆ ಪಿಡುಗು ಅಮಾಯಕರನ್ನು ಹತ್ಯೆ ಮಾಡುವುದಷ್ಟೇ ಅಲ್ಲ, ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸ್ಥಿರತೆಗೆ ಗಂಭೀರ ಹಾನಿ ಉಂಟು ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಒಸಾಕಾದಲ್ಲಿ ಬ್ರಿಕ್ಸ್ ದೇಶಗಳ ಮುಖಂಡರ ಜತೆ ಅನೌಪಚಾರಿಕವಾಗಿ ಮಾತನಾಡುತ್ತ, ಭಯೋತ್ಪಾದನೆ ಮತ್ತು ಜನಾಂಗೀಯತೆಯನ್ನು ಬೆಂಬಲಿಸುವ ಎಲ್ಲ ಶಕ್ತಿಗಳನ್ನು ದಮನಿಸಬೇಕಾಗಿದೆ ಎಂದು ಪ್ರಧಾನಿ ನುಡಿದರು. ಜಿ 20 ಶೃಂಗಸಭೆಗಾಗಿ ಒಸಾಕಾಗೆ ಆಗಮಿಸಿರುವ ಪ್ರಧಾನಿ, ಬ್ರೆಜಿಲ್ ಅಧ್ಯಕ್ಷರಾಗಿ ಚುನಾಯಿತರಾದ ಜೈರ್ ಬೊಲ್ಸೊನಾರೊ ಅವರಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ ಬ್ರಿಕ್ಸ್ ಕುಟುಂಬಕ್ಕೆ ಅವರನ್ನು ಸ್ವಾಗತಿಸಿದರು. ದಕ್ಷಿಣ ಆಫ್ರಿಕಾ ಅಧ್ಯಕ್ಷರಾಗಿ ಚುನಾಯಿತರಾದ ಸಿರಿಲ್ ರಮಫೋಸಾ ಅವರಿಗೂ ಅಭಿನಂದನೆ ಸಲ್ಲಿಸಿದರು. ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಮುಖಂಡರ ಸಭೆ ನಡೆಯಿತು. ವಿಶ್ವ ವಾಣಿಜ್ಯ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವ, ರಕ್ಷಣಾತ್ಮಕ ಧೋರಣೆ ವಿರುದ್ಧ ಹೋರಾಡುವ, ಇಂಧನ ಭದ್ರತೆ ಖಾತ್ರಿಪಡಿಸುವ ಮತ್ತು ಭಯೋತ್ಪಾದನೆ ವಿರುದ್ಧ ಒಗ್ಗೂಡಿ ಹೋರಾಡುವ ಅಗತ್ಯವನ್ನು ಮೋದಿ ಪ್ರತಿಪಾದಿಸಿದರು.
'ಇಂದು ನಮ್ಮ ಮುಂದಿರುವ ಮೂರು ಪ್ರಮುಖ ಸವಾಲುಗಳ ಬಗ್ಗೆ ನಾನು ಗಮನ ಹರಿಸುತ್ತೇನೆ. ಮೊದಲನೆಯದಾಗಿ ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಅಸ್ಥಿರತೆ ಮತ್ತು ಕುಸಿತ ಕಾಣುತ್ತಿದೆ. ನಿಯಮಗಳ ಆಧರಿತ ಬಹುಪಕ್ಷೀಯ ಜಾಗತಿಕ ವ್ಯಾಪಾರ ವ್ಯವಸ್ಥೆಯಲ್ಲಿ ಏಕಪಕ್ಷೀಯತಾವಾದ ಮತ್ತು ಸ್ಪರ್ಧಾತ್ಮಕತೆಗಳು ಪರಸ್ಪರ ವಿರೋಧಾಭಾಸ ಸೃಷ್ಟಿಸುತ್ತಿವೆ. 'ಸಂಪನ್ಮೂಲಗಳ ಕೊರತೆಯಿದೆ; ಮೂಲಭೂತ ಸೌಕರ್ಯಗಳಲ್ಲಿ ಹೂಡಿಕೆಗೆ ಬಹುತೇಕ 1.3 ಟ್ರಿಲಿಯನ್ (1,30,000 ಕೋಟಿ) ಡಾಲರ್‌ಗಳ ಕೊರತೆಯಾಗಿದೆ' ಎಂದು ಪ್ರಧಾನಿ ಮೋದಿ ನುಡಿದರು. ಅಭಿವೃದ್ಧಿಯನ್ನು ಸುಸ್ಥಿರಗೊಳಿಸಿ ಎಲ್ಲರನ್ನೂ ಒಳಗೊಳ್ಳಿಸುವುದು ಮತ್ತೊಂದು ಸವಾಲು. ಡಿಜಿಟಲೀಕರಣದಂತಹ ತ್ವರಿತವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳು, ಹವಾಮಾನ ಬದಲಾವಣೆಯ ಸವಾಲುಗಳು ವರ್ತಮಾನದಲ್ಲಿ ಮಾತ್ರವಲ್ಲ ಭವಿಷ್ಯದ ತಲೆಮಾರುಗಳಿಗೂ ಅಪಾಯ ತಂದೊಡ್ಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
from India & World News in Kannada | VK Polls https://ift.tt/2YkNvCe