ಒಂದ್ಕಡೆ ಯುಟ್ಯೂಬ್‌ ವಿಡಿಯೋ ನೋಡಿ ಕಳ್ಳತನ; ಮತ್ತೊಂದ್ಕಡೆ ಖಾಕಿ ಮನೆಗೇ ಖದೀಮರಿಂದ ಕನ್ನ!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನನಿತ್ಯ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಇಂತಹದೇ ಅಪರಾಧ ಪ್ರಕರಣ ಮತ್ತೊಮ್ಮೆ ವರದಿಯಾಗಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಚಾಲಾಕಿ ಖದೀಮರು ಪೊಲೀಸರ ಮನಗೇ ಕನ್ನ ಹಾಕಿದರೆ ಮತ್ತೊಂದು ಪ್ರಕರಣದಲ್ಲಿ ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಕಳವು ಮಾಡುತ್ತಿದ್ದವರಿಗೆ ಪೊಲೀಸರು ಖೆಡ್ಡಾ ತೋಡಿದ್ದಾರೆ. ಕೇಸ್‌ ನಂ. 1: ಯುಟ್ಯೂಬ್‌ನಲ್ಲಿ ಬೈಕ್‌ ಕಳವು ಮಾಡುವ ವಿಡಿಯೋಗಳನ್ನು ನೋಡಿ ಬೈಕ್‌ ಕಳವು ಮಾಡುತ್ತಿದ್ದ ಮೂವರನ್ನು ಬೆಂಗಳೂರಿನ ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜು, ಅಪ್ಪು ಸೇರಿ ಮೂವರು ಬಂಧಿತರು. ಆರೋಪಿಗಳಿಂದ 8 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿಗಳಿಬ್ಬರು ಬೆಳಗಿನ ಸಮಯದಲ್ಲಿ ಎಲ್ಲ ಬಡಾವಣೆಗಳಲ್ಲಿ ಓಡಾಡಿ ಮನೆ ಮುಂದೆ ನಿಲ್ಲಿಸಿರುವ ಬೈಕ್‌ಗಳನ್ನು ಗುರುತಿಸುತ್ತಿದ್ದರು. ಎರಡು ಮೂರು ದಿನಗಳ ಕಾಲ ಬೈಕ್‌ ನಿಂತಲ್ಲೇ ನಿಂತಿದ್ದರೆ ಅವುಗಳ ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದರು. ರಾಜು ಹಾಗೂ ಅಪ್ಪು ಇಬ್ಬರು ಜತೆಗೂಡಿ ಬ್ಯಾಟರಾಯನಪುರ, ಹಲಸೂರುಗೇಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ ಕಳವು ಮಾಡುತ್ತಿದ್ದರು. ಮನೆ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸುವ ಬೈಕ್‌ಗಳನ್ನೇ ಟಾರ್ಗೆಟ್‌ ಮಾಡಿ ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದರು. ಇತ್ತೀಚೆಗೆ ಹಲಸೂರು ಗೇಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ ಕಳವು ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಗೇಟ್‌ ಠಾಣೆ ಪೊಲೀಸರು, ಈ ಕೃತ್ಯದಲ್ಲಿ ಮತ್ತೆಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ಕೈಗೊಂಡಿದ್ದಾರೆ. ಕೇಸ್‌ ನಂ. 2: ಪೊಲೀಸರ ಮನೆಗೇ ಚಾಲಾಕಿ ಖದೀಮರು ಕನ್ನ ಹಾಕಿರುವ ಘಟನೆ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆನಂದ ರಾವ್‌ ವೃತ್ತದಲ್ಲಿರುವ ಪೊಲೀಸ್‌ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆ ಮುಖ್ಯ ಪೇದೆ ಮಾರುತಿ ಅವರ ಮನೆಯಿಂದ 85 ಸಾವಿರ ಚಿನ್ನಾಭರಣ ಕಳವಾಗಿದೆ. ಈ ಸಂಬಂಧ ಅವರು ಶೇಷಾದ್ರಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಭಾರತ್‌ ಬಂದ್‌ ದಿನವೇ ಕಳ್ಳತನರೈತ ಸಂಘಟನೆಗಳು ಸೆ. 27ರಂದು ಕರೆ ನೀಡಿದ್ದ ಭಾರತ್‌ ಬಂದ್‌ನ ಬಂದೋಬಸ್ತ್‌ಗೆ ಮಾರುತಿ ನಿಯೋಜನೆಗೊಂಡಿರುವುದನ್ನು ತಿಳಿದಿದ್ದ ಖದೀಮರು ಅಂದೇ ಮನೆಗೆ ಕನ್ನ ಹಾಕಿದ್ದಾರೆ. ಕರ್ತವ್ಯ ಮುಗಿಸಿ ಸುಸ್ತಾಗಿದ್ದ ಮಾರುತಿ ಅಂದು ಸ್ನೇಹಿತರ ಮನೆಯಲ್ಲೇ ಉಳಿದಿದ್ದರು. ಮರುದಿನ ಮನೆಗೆ ಬಂದು ನೋಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಶೇಷಾದ್ರಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕ್ವಾರ್ಟರ್ಸ್‌ನಲ್ಲಿ ಸಿಸಿ ಟಿವಿಯಿದ್ದು, ಸೆ. 27ರಂದು ಮಾರುತಿ ಮನೆಗೆ ಯಾರು ಬಂದು ಹೋಗಿದ್ದಾರೆ ಎಂಬುದನ್ನು ಪರಿಶೀಲಿಸಲಾಗುವುದು. ಸದ್ಯ ಪ್ರಕರಣ ದಾಖಲಾಗಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.


from India & World News in Kannada | VK Polls https://ift.tt/39ZCqOa

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...