ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಕೆಲಸ ಮಾಡುವುದಕ್ಕೆ ಉಪ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಜೆಡಿಎಸ್ ಕಣಕ್ಕೆ ಇಳಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರೋಪಿಸಿದ್ದಾರೆ. ತಮ್ಮ ಅಭ್ಯರ್ಥಿ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಯಾರು ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ನಗರದಲ್ಲಿ ಶನಿವಾರ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಇಂತಹ ಬಹಳ ಎಚ್ಚರಿಕೆ ನೋಡಿದ್ದೇನೆ. ನಾನು ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಬಾರದು ಎಂದುಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ದುರುದ್ದೇಶದಿಂದಲೇ ಜೆಡಿಎಸ್ ಪಕ್ಷ ಆಯ್ದ ಚುನಾವಣಾ ಕ್ಷೇತ್ರದಲ್ಲಿ ಮಾತ್ರ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುತ್ತದೆ. ಬಸವಕಲ್ಯಾಣದಲ್ಲಿ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿ ಕಾಂಗ್ರೆಸ್ ಸೋಲಿಸಿದರು. ಈಗ ಸಿಂದಗಿಯಲ್ಲಿಯೂ ಇದನ್ನೇ ಮಾಡಿದ್ದಾರೆ. ಮುಸ್ಲಿಮರ ಬಗ್ಗೆ ಕಾಳಜಿ ಇದ್ದರೆ ಸಂಪುಟದಲ್ಲಿಏಕೆ ಯಾರಿಗೂ ಅವಕಾಶ ನೀಡಿರಲಿಲ್ಲ ಎಂದು ಕುಮಾರಸ್ವಾಮಿಯನ್ನು ಪ್ರಶ್ನಿಸಿದರು. ಅಲ್ಲದೇ, ಮಂಡ್ಯ, ಮೈಸೂರು ಭಾಗದಲ್ಲಿ ಅಲ್ಪಸಂಖ್ಯಾತರಿಗೆ ಏಕೆ ಟಿಕೆಟ್ ನೀಡುವುದಿಲ್ಲ. ಬಿಜೆಪಿಗೆ ಅನುಕೂಲ ಮಾಡಿಕೊಡಲು ಉತ್ತರ ಕರ್ನಾಟಕ ಭಾಗದಲ್ಲಿ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸುತ್ತಾರೆ ಎಂದು ದೂರಿದರು. ಜೆ.ಡಿ.ಎಸ್ ಪಕ್ಷಕ್ಕೆ ಮುಸ್ಲಿಮರ ಬಗ್ಗೆ ಕಾಳಜಿ ಇದ್ದಿದ್ದರೆ ಹಾಸನ, ಮೈಸೂರು, ಮಂಡ್ಯ ಭಾಗದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಡಬಹುದಲ್ಲವೇ? ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಯಾರಾದರೂ ಮುಸ್ಲಿಮರನ್ನು ಮಂತ್ರಿ ಮಾಡಿದ್ದಾರಾ? ಎಂದು ಪ್ರಶ್ನಿಸಿದರು. ಇನ್ನು ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ನಮ್ಮ ಪಕ್ಷದಿಂದ ಇಬ್ಬರು ಪ್ರಬಲ ಅಭ್ಯರ್ಥಿಗಳಿದ್ದಾರೆ. ಹಾನಗಲ್ ಕ್ಷೇತ್ರದ ಉಪಚುನಾವಣೆಗೆ ಮನೋಹರ್ ತಹಸೀಲ್ದಾರ್ ಹಾಗೂ ಶ್ರೀನಿವಾಸ ಮಾನೆ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಎಲ್ಲರ ಅಭಿಪ್ರಾಯ ಕೇಳಲಾಗಿದೆ. ಯಾರಿಗೇ ಪಕ್ಷದ ಟಿಕೆಟ್ ನೀಡಿದರೂ ಒಟ್ಟಾಗಿ ಕೆಲಸ ಮಾಡುವಂತೆ ಈ ಇಬ್ಬರಿಗೂ ಹೇಳಿದ್ದೇವೆ. ಅದಕ್ಕೆ ಇಬ್ಬರೂ ಒಪ್ಪಿದ್ದಾರೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಂದಿನ 2-3 ದಿನಗಳಲ್ಲಿ ಪಕ್ಷವು ಅಭ್ಯರ್ಥಿಯನ್ನು ಘೋಷಿಸಲಿದೆ ಎಂದು ಹೇಳಿದರು. ಸಿಂಧಗಿ ಕ್ಷೇತ್ರದ ಉಪಚುನಾವಣೆಯ ಬಗ್ಗೆ ನಿನ್ನೆ ಕೆಪಿಸಿಸಿ ಅಧ್ಯಕ್ಷರು, ಜಿಲ್ಲಾ ಮುಖಂಡರು, ಆ ಭಾಗದ ಶಾಸಕರ ಜೊತೆ ಚರ್ಚೆ ನಡೆಸಲಾಗಿದೆ. ಅಶೋಕ್ ಮನಗೂಳಿ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಹೈಕಮಾಂಡ್ ಈಗಾಗಲೇ ಘೋಷಣೆಯನ್ನು ಮಾಡಿದೆ. ಹಾನಗಲ್‌ನಲ್ಲಿ 7ನೇ ತಾರೀಖಿನಂದು ಮತ್ತು ಸಿಂಧಗಿಯಲ್ಲಿ 8ನೇ ತಾರೀಖಿನಂದು ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಮಾಡುತ್ತೇವೆ. ನಾನು, ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಎರಡೂ ಕಡೆ ನಾಮಪತ್ರ ಸಲ್ಲಿಕೆ ವೇಳೆ ಹೋಗುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪುನರ್‌ಪರಿಶೀಲಿಸಿಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಎರಡು ಕ್ಷೇತ್ರಗಳ ಉಪಚುನಾವಣೆ ಅಭ್ಯರ್ಥಿಗಳ ಬಗ್ಗೆ ಜೆಡಿಎಸ್ ಪುನರ್ ಪರಿಶೀಲಿಸಬೇಕು. ಜೆಡಿಎಸ್‌ಗೆ ನಿಜವಾಗಿಯೂ ಜಾತ್ಯತೀತ ತತ್ವದ ಮೇಲೆ ನಂಬಿಕೆ ಇದ್ದರೆ ಕೋಮುವಾದಿ ಪಕ್ಷಕ್ಕೆ ಅನುಕೂಲ ಮಾಡಿಕೊಡಬಾರದು. ಜಾತ್ಯತೀತ ಮತಗಳ ವಿಭಜನೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ.
from India & World News in Kannada | VK Polls https://ift.tt/3uwRble